ನವದೆಹಲಿ : ಅಮೇರಿಕ ಮತ್ತು ಇರಾನ್ ಮಧ್ಯದ ಸ್ಥಿತಿ ಮತ್ತಷ್ಟು ವಿಷಮಿಸಿರುವುದರಿಂದ ಪರ್ಷಿಯನ್ ಗಲ್ಫ್ ರಾಷ್ಟ್ರಗಳಿಗೆ ಭಾರತ ಮಾಡುತ್ತಿರುವ ರಫ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಫೆಡರೇಷನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಸೇಷನ್ಸ್ (ಎಫ್ ಐಇಒ) ತಿಳಿಸಿದೆ.
ಸದ್ಯಕ್ಕೆ ಇರಾನ್ ಗೆ ಆಗುತ್ತಿರುವ ರಫ್ತಿನಲ್ಲಿ ಯಾವ ಆತಂಕವೂ ಕಂಡುಬಂದಿಲ್ಲ ಎಂದು ಎಫ್ ಐಇಒದ ಪ್ರಧಾನ ನಿರ್ದೇಶಕ ಅಜಯ್ ಸಹೈ ಭಾನುವಾರ ಹೇಳಿದ್ದಾರೆ. “ಒಂದು ವೇಳೆ ಈಗಿನ ಉದ್ವಿಗ್ನತೆ ಮುಂದುವರಿದಲ್ಲಿ ಇರಾನ್ ಗೆ ಭಾರತ ಮಾಡುತ್ತಿರುವ ರಫ್ತಿನ ಮೇಲೆ ಪರಿಣಾಮ ಆಗಲಿದೆ” ಎಂದು ಅವರು ತಿಳಿಸಿದ್ದಾರೆ.
ಸದ್ಯಕ್ಕೆ ಇರಾನ್ ಮೇಲೆ ಅಮೆರಿಕವು ಆರ್ಥಿಕ ದಿಗ್ಬಂಧನ ಇರುವುದರಿಂದ ಭಾರತೀಯ ಸರಕುಗಳನ್ನು ಮಾತ್ರ ಆ ದೇಶ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ. ಕಳೆದ ವಾರ ಅಮೆರಿಕವು ಇರಾನ್ ನ ಸೇನಾ ಜನರಲ್ ಖಾಸಿಂ ಸುಲೇಮಾನಿ ಅವರನ್ನು ಹತ್ಯೆ ಮಾಡಿದ ಮೇಲೆ ಎರಡೂ ದೇಶಗಳ ಮಧ್ಯೆ ಉದ್ವಿಗ್ನ ಸ್ಥಿತಿ ಇದೆ.
ಭಾರತದ ಪ್ರಮುಖ ವ್ಯಾಪಾರ ಸಹಭಾಗಿತ್ವವನ್ನು ಇರಾನ್ ಹೊಂದಿದೆ. ಭಾರತಕ್ಕೆ ಇರಾನ್ ನಿಂದ ತೈಲ, ಗೊಬ್ಬರ ಮತ್ತು ರಾಸಾಯನಿಕಗಳು ಆಮದು ಆಗುತ್ತವೆ. ಇನ್ನು ಭಾರತದಿಂದ ಬೇಳೆಕಾಳುಗಳು, ಟೀ, ಕಾಫಿ, ಬಾಸ್ಮತಿ ಅಕ್ಕಿ, ಸಂಬಾರ ಪದಾರ್ಥಗಳು, ಸಾವಯವ ರಾಸಾಯನಿಕಗಳು ರಫ್ತಾಗುತ್ತವೆ.
ಭಾರತವು ಪರ್ಷಿಯನ್ ದೇಶಗಳಿಗೆ 24,920 ಕೋಟಿಗೂ ಹೆಚ್ಚು ಮೊತ್ತದ ರಫ್ತು ಮಾಡಿದರೆ, 96,000 ಕೋಟಿ ರುಪಾಯಿಗೂ ಹೆಚ್ಚು ಮೊತ್ತದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಇಷ್ಟು ಮೊತ್ತದ ಮುಖ್ಯ ವ್ಯತ್ಯಾಸ ಏನೆಂದರೆ, ಇರಾನ್ ನಿಂದ ದೊಡ್ಡ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತದೆ.