ನವದೆಹಲಿ: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲೊಂದಾದ ಇಂಡಿಗೋ ಏರ್ಲೈನ್ಸ್ ಬರೋಬ್ಬರಿ 1,062 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಆಪರೇಟಿಂಗ್ ಲೀಸ್ ಹಾಗೂ ಮೇಂಟೇನೆನ್ಸ್ ವೆಚ್ಚದಲ್ಲಿ ಭಾರೀ ಹೆಚ್ಚಳವಾಗಿದ್ರಿಂದ ಇಂಡಿಗೋ ನಷ್ಟ ಕಂಡಿದೆ.
ವರ್ಷದ ಹಿಂದೆ ಇದೇ ಸಮಯದಲ್ಲಿ ಇಂಡಿಗೋ ಸಂಸ್ಥೆಯ ನೆಟ್ ಲಾಸ್ 652 ಕೋಟಿ ರೂಪಾಯಿಯಷ್ಟಿತ್ತು. ಆದ್ರೆ, ಈಗ ನಷ್ಟದ ಪ್ರಮಾಣದಲ್ಲಿ ಏರಿಕೆಯಾಗಿದ್ದು, ತ್ರೈಮಾಸಿಕ ಅಂತ್ಯದ ವೇಳೆ ಅಂದ್ರೆ, ಸೆಪ್ಟೆಂಬರ್ 30ರ ವೇಳೆಗೆ ಬರೋಬ್ಬರಿ 1,062 ಕೋಟಿಯಷ್ಟು ನಷ್ಟ ಕಂಡಿದೆ. ರೂಪಾಯಿ ಮೌಲ್ಯ ಕುಸಿತಗೊಂಡಿದ್ದರಿಂದ ಆಪರೇಟಿಂಗ್ ಲೀಸ್ನಲ್ಲಿ 482.2 ಕೋಟಿ ರೂಪಾಯಿ ಹಾಗೂ ಮೇಂಟೇನೆನ್ಸ್ ಖರ್ಚು ಹೆಚ್ಚಳವಾಗಿದ್ದರಿಂದ 319 ಕೋಟಿ ರೂಪಾಯಿ ಲಾಸ್ ಆಗಿದೆ.
ಇನ್ನು, ಒಂದೆಡೆ ನಷ್ಟ ಅನುಭವಿಸಿದ್ರೂ ಕೂಡ ಇಂಡಿಗೋದ ಆದಾಯದಲ್ಲಿ ಹೆಚ್ಚಳವಾಗಿದೆ. ಶೇಕಡ 31ರಷ್ಟು ಹೆಚ್ಚಳವಾಗುವ ಮೂಲಕ, ಇಂಡಿಗೋದ ಆದಾಯ 8,105.2 ಕೋಟಿ ರೂಪಾಯಿಗೆ ತಲುಪಿದೆ. ಈ ವರ್ಷದಲ್ಲಿ ಇಂಡಿಗೋದಲ್ಲಿ ಪ್ರಯಾಣಿಸಿದವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಂಡಿಗೋ ಸಿಇಒ ರೊನೊಜೊಯ್ ದತ್ತಾ, ತ್ರೈಮಾಸಿಕದಲ್ಲಿ ನಮ್ಮ ಆದಾಯ ಉತ್ತಮವಾಗಿದೆ. ಆದ್ರೆ, ಆಪರೇಟಿಂಗ್ ಲೀಸ್ನಲ್ಲಿನ ವಿದೇಶೀ ವಿನಿಮಯ ನಷ್ಟ ಹಾಗೂ ಮೇಂಟೆನೆನ್ಸ್ ವೆಚ್ಚದ ಅಂದಾಜು ಮರು ಮೌಲ್ಯಮಾಪನ ಮಾಡಿರೋದರಿಂದ ನಷ್ಟಗಳು ಎದ್ದು ಕಾಣುತ್ತವೆ ಅಂತಾ ಹೇಳಿದ್ದಾರೆ.