ಮಕರ ಸಂಕ್ರಾಂತಿಯಂದು ಜನಿಸಿದ ಪ್ರಖರ ಚೇತನವು ಹಿಂದೂ ದರ್ಮದ ಪುನರುತ್ಥಾನ ಮತ್ತು ಮನುಕುಲದ ಉದ್ಧಾರದ ಕುರಿತಾಗಿಯೇ ಚಿಂತಿಸಿದ್ದರಿಂದ, ತನ್ನ ಉದಾತ್ತ ವಿಚಾರಗಳನ್ನು ನಿರ್ಬಿಢೆಯಿಂದ ಮಂಡಿಸಿದ್ದರಿಂದ ಹಾಗೂ ದರಿದ್ರನಾರಾಯಣನ ಸೇವೆಯ ಮೂಲಕ ಸಮಾಜ ಪುರುಷನ ಪೂಜೆಗೈದಿದ್ದರಿಂದ ವೀರ ಸನ್ಯಾಸಿಯೆನಿಸಿದವರು ಸ್ವಾಮಿ ವಿವೇಕಾನಂದರು. ಭಾರತೀಯ ಸಂಸ್ಕøತಿ – ಸಂಸ್ಕಾರಗಳ ವಿಶ್ವರೂಪದರ್ಶನವನ್ನು ಮಾಡಿಸಿ ಭಾರತೀಯತೆಗೆ ಗೌರವ ತಂದುಕೊಟ್ಟವರು ಸ್ವಾಮೀಜಿ. ಅದೂ ಪಶ್ಚಿಮದ ದೇಶಗಳು ಅನಾದರದಿಂದ ಕಂಡಿದ್ದ, ಅದುವರೆಗೂ ತಾವು ಮೇಲ್ನೋಟಕ್ಕೆ ಕಂಡ ಭಾರತವನ್ನು – ಹಿಂದೂ ಧರ್ಮವನ್ನು ಅನಾಗರಿಕವೆಂಬಂತೆ ಬಿಂಬಿಸಿದ್ದ ಕಾಲಘಟ್ಟದಲ್ಲಿ ಅವರದೇ ನೆಲದಲ್ಲಿ ನಿಂತು ಪಶ್ಚಿಮದ ಒಣ ಪ್ರತಿಷ್ಠೆಗೆ ಬಲವಾದ ಪೆಟ್ಟು ನೀಡಿದವರು ಸಿಡಿಲಸಂತ ಸ್ವಾಮಿ ವಿವೇಕಾನಂದ!
ಮನುಕುಲದ ಉದ್ಧಾರವೇ ಜೀವನದ ಗುರಿಯೆಂದು ಅರಿತಮೇಲೆ, ತನ್ನ ಗುರು ಶ್ರೀ ರಾಮಕೃಷ್ಣ ಪರಮಹಂಸರ ಚಿಂತನೆಗಳು ಭಾರತಕ್ಕೂ ಹಾಗೂ ವಿಶ್ವಕ್ಕೂ ಹೇಗೆ ಸಂಬಂಧಿಸಿವೆಯೆಂಬ ಬಗ್ಗೆ ಹಾಗೂ ಅವು ಹೇಗೆ ಆದುನಿಕತೆಯತ್ತ ಮುಖಮಾಡುತ್ತಿದ್ದರೂ ನಾನಾ ಸಮಸ್ಯೆಗಳಿಂದ ಕಂಗೆಟ್ಟಿದ್ದ ಸಮಾಜದ ಒಳಿತಿಗಾಗಿ ಬಳಕೆಯಾಗಲಿವೆಯೆಂಬುದರ ಸ್ಪಷ್ಟ ದರ್ಶನ ಪಡೆಯಲು ಶಾರದಾ ಮಾತೆಯ ಆಶೀರ್ವಾದವನ್ನು ಪಡೆದು ಭಾರತದ ಪರ್ಯಟನೆಗೆ ಹೊರಟರು. ಬಯಸಿದ್ದರೆ ಸ್ವಂತ ಮೋಕ್ಷದ ಚಿಂತನೆಯ ಸಾಧನೆಯ ಹಾದಿ ಹಿಡಿಯಬಹುದಿತ್ತೇನೋ, ಆದರೆ ಸ್ವಾಮೀಜಿ ಆಯ್ದುಕೊಂಡದ್ದು ಸಮಾಜವನ್ನು.
ಪ್ರತಿಯೊಂದು ಜೀವಿಯೂ ದೇವರ ಅಂಶವೇ ಆಗಿದೆ, ಆತ್ಮರೂಪೀ ಚೈತನ್ಯವು ಶಕ್ತಿಯ ರೂಪವೇ ಎನ್ನುವ ವೇದಾಂತವನ್ನು ಸರಳವಾಗಿ ಜನತೆಗೆ ಅರ್ಥಮಾಡಿಸಿದವರು ಸ್ವಾಮಿ ವಿವೇಕಾನಂದರು. ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯ ಚಃ – ಜಗದ ಹಿತವನ್ನು ಬಯಸುವುದರ ಮೂಲಕವೇ ಆತ್ಮಕ್ಕೆ ಮೋಕ್ಷ ಎನ್ನುವ ಋಗ್ವೇದದ ಶ್ಲೋಕವನ್ನು ಪುನಃ-ಪುನಃ ನೆನಪಿಸುತ್ತ ಜಾಗೃತಿ ಮೂಡಿಸುವುದು, ಸಾದು-ಸಂತರೆಂದರೆ ಕೇವಲ ಆಧ್ಯಾತ್ಮ ಸಾಧಕರೆಂದು ನಂಬಿದ್ದ ಜನರ ನಡುವೆ ಸುಲಭ ಸಾಧ್ಯವೇನೂ ಆಗಿರಲಿಲ್ಲ. ಆದರೆ ಅದು ಆಗಲೇಬೇಕೆಂದು ಬಲವಾಗಿ ಪ್ರತಿಪಾದಿಸಿ, ಇತರರಿಗಾಗಿ ಬದುಕುವ ಉದಾತ್ತ ಭಾವವನ್ನು ಜಾಗೃತಗೊಳಿಸಿ, ತನ್ಮೂಲಕ ಮಲಗಿದ್ದ ಪುತ್ರವತ್ ಸಮಾಜವನ್ನು ರಾಷ್ಟ್ರ ಸೇವೆಯ ಕಾಯಕ್ಕೆ ಅಣಿಗೊಳಿಸಿದರು.
ನಿತ್ಯ-ಜೀವನದಲ್ಲಿ ವೇದಾಂತದ, ತತ್ವಜ್ಞಾನದ ಅನುಸಂದಾನವಾಗದೆಯೇ ಇರುವ ಕಾರಣಕ್ಕೆ ಸಮಾಜಮುಖಿ ಚಿಂತನೆಯಿಂದ ವಿಮುಖವಾಗಿದ್ದ, ಪರಕೀಯರ ಆಕ್ರಮಣದಿಂದ ದೈರ್ಯ ಕಳೆದುಕೊಂಡಿದ್ದ ಜನಸಮೂಹಕ್ಕೆ ಚೈತನ್ಯ ತುಂಬುವ ಕಾರ್ಯವಾಗಬೇಕು, ಮೊದಲು ಆಧುನಿಕ ಕೃಷಿ ಪದ್ಧತಿ, ಗೃಹ ಕೈಗಾರಿಕೆಗಳಂತಹ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಲ್ಲ ಕೆಲಸವಾಗಲಿ ಎಂದರು. ನಂತರ ಆಧ್ಯಾತ್ಮದ ಜ್ಞಾನದ ಮೂಲಕ ಅಂತರಂಗದ ಶಕ್ತಿಯನ್ನು ಉದ್ದೀಪನಗೊಳಿಸುವ ಕಾಯಕವಾಗಬೇಕು ಎಂದು ಪ್ರತಿಪಾದಿಸಿದರು. ಶಿಕ್ಷಣವು ಈ ಎರಡೂ ಜ್ಞಾನವನ್ನು ನೀಡುವುದರ ಮುಖಾಂತರ ಜಾಗತಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂಬುದು ಸ್ವಾಮೀಜಿಯವರ ಚಿಂತನೆಯಾಗಿತ್ತು. ಇವತ್ತಿನ ಶಿಕ್ಷಣವು ಅತ್ಯಂತ ವ್ಯಾವಹಾರಿಕವಾದ, ಲೌಕಿಕವಾದ ಹಾಗೂ ಸ್ವಾರ್ಥಭರಿತ ಜೀವನವನದ ದೃಷ್ಟಿಕೋನವನ್ನು ಮಾತ್ರ ತಿಳಿಸುತ್ತಿದೆ. ಆದರೆ ವ್ಯಕ್ತಿ ನಿರ್ಮಾಣದ ಮೂಲಕವೇ ರಾಷ್ಟ್ರ ನಿರ್ಮಾಣವೆಂಬ ಕನಸು ಕಂಡಿದ್ದರು ಸ್ವಾಮೀಜಿ.
ಅಚಲ ದೈವಭಕ್ತಿ, ಧ್ಯಾನ, ಕರ್ಮಯೋಗದ ಸಾಧಕರಾಗಿದ್ದರೂ ಸ್ವಾಮೀಜಿಯವರು ಜನರ ಸೇವೆಯಲ್ಲೇ ದೇವರನ್ನು ಕಾಣುವ ಮೂಲಕ ಒಬ್ಬ ರಾಷ್ಟ್ರಭಕ್ತಿಯಿರುವ ಸಂತಶ್ರೇಷ್ಠರೆನಿಸಿದರು. ದೇವರನ್ನು ಹುಡುಕುತ್ತ ಎಲ್ಲಿಗೆ ಹೋಗುತ್ತೀರಿ?… ದರಿದ್ರರು, ದುಃಖಿಗಳು ಇರುವರಲ್ಲ – ಅವರಲ್ಲಿಯೇ ದೇವರನ್ನು ಕಾಣಿರಿ, ನಮ್ಮವರೇ ಆದ ಅವರನ್ನೆಲ್ಲ ಪ್ರೀತಿಸಿ – ಸೇವೆಯ ಮೂಲಕವೇ ಪೂಜಿಸಿ ಎಂಬ ಕರೆಕೊಟ್ಟರು. ಹಾಗೆಯೇ ಪರೋಪಕಾರವೇ ಜೀವಂತಿಕೆಯ ಸ್ವರೂಪ – ಉಪಕಾರಿಯಾಗದ ಬದುಕು ಇದ್ದರೂ ಸತ್ತಂತೆಯೇ ಸರಿ ಎಂಬ ತಮ್ಮ ಕಟುವಾಣಿಯನ್ನು ಸಾರುತ್ತಲೇ ನಾಡಿನೆಲ್ಲೆಡೆ ಸಂಚರಿಸಿದರು.
ಆಧ್ಯಾತ್ಮ ಭಾರತದ ಆತ್ಮ: ಈ ನೆಲದ ಉದ್ಧಾರವಾಗಬೇಕಿದ್ದಲ್ಲಿ ಮೊದಲು ಭರತಖಂಡದಲ್ಲಿ ಧಾರ್ಮಿಕತೆಯ ಜಾಗೃತಿಯಾಗಲಿ ಎಂದರು ವಿವೇಕಾನಂದರು. ವ್ಯಕ್ತಿ-ವ್ಯಕ್ತಿಯಲ್ಲೂ ಎಲ್ಲದಕ್ಕೂ ಪೂರ್ವದಲ್ಲಿ ಆಧ್ಯಾತ್ಮಿಕ ಭಾವನೆಯ ಮಳೆಗರೆಯಲಿ, ನಂತರ ಸಾಮಾಜಿಕ ಹಾಗೂ ರಾಜಕೀಯದ ವಿಷಯವೆಂಬುದು ಸ್ವಾಮೀಜಿಯವರ ನಿಲುವಾಗಿತ್ತು. ಭಾಷೆ, ಪರಂಪರೆ, ಐತಿಹಾಸಿಕ ಮತ್ತು ಸ್ಥಳ ವಿಶೇಷಗಳ ತವರು ಭಾರತ ಆದರೆ ಇಡೀ ಭಾರತವು ಒಂದೇ ಸಂಸ್ಕøತಿಯ ಸೂತ್ರದಲ್ಲಿ ಜೋಡಿಸಲ್ಪಟ್ಟಿದೆ; ಆದ್ದರಿಂದ ಸಾಂಸ್ಕøತಿಕ ರಾಷ್ಟ್ರವಾದದ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನವಾಗಲಿ ಎಂದು ಬಯಸಿದರು. ಆಧುನಿಕ ಭಾರತದಲ್ಲಿ ಕೇವಲ ಜ್ಞಾನ ಸಂಪಾದನೆಗೆ ಮಾತ್ರ ಒತ್ತುಕೊಡದೆ, ಸಂಸ್ಕøತಿಯ – ಸಂಸ್ಕಾರದ ಧಾರೆ ಎರೆಯಿರಿ ಎಂದು ತಿಳಿಹೇಳಿದರು.
ಆತ್ಮಾನಾತ್ ಉದ್ಧರೇತ್ ಆತ್ಮಾನಂ: ನಿನ್ನ ಉದ್ಧಾರ ಕೇವಲ ನಿನ್ನಿಂದ ಮಾತ್ರ ಸಾಧ್ಯ, ಶ್ರದ್ಧೆಯಿಂದ ಮಹತ್ತರವಾದುದನ್ನು ಸಾಧಿಸಿರೆಂದು ಸ್ಪಷ್ಟವಾಗಿ ಸ್ವಾಮೀಜಿ ಹೇಳಿರುವುದು ಜೀವನದ ಬಹುತೇಕ ಸಂದೇಹಗಳನ್ನು ದೂರಮಾಡಬಲ್ಲ ತಾಕತ್ತಿರುವ ಉಕ್ತಿಗಳಲ್ಲಿ ಪ್ರಮುಖವಾದುದು. ಜೊತೆಗೆ ಸ್ವಾರ್ಥ ಸುಳಿಯದಂತೆ ನೋಡಿಕೊಳ್ಳಿರೆಂದು ಎಚ್ಚರಿಸುತ್ತಾರೆ, ಆ ಕಾರಣಕ್ಕಾಗಿಯೇ ನಿನ್ನ ಆತ್ಮದ ಉನ್ನತಿಯನ್ನು ಪಡೆಯಬೇಕಾದರೆ ಇತರರ ಸೇವೆ ಮಾಡು ಎನ್ನುತ್ತಾರೆ! ಅಲ್ಲದೇ ಇತರರಿಗಾಗಿ ಬದುಕುವುದೇ ನಿನಗೆ ನೀನು ಒಳಿತು ಮಾಡಿಕೊಳ್ಳಲಿಕ್ಕಿರುವ ಸುಲಭ ಮಾರ್ಗವೆಂದರು.
ನಮ್ಮ ಹಿಂದಿನ ಕರ್ಮ-ಫಲವನ್ನು ಈಗ ಅನುಭವಿಸುತ್ತಿದ್ದೇವೆ ಎಂದಾದಲ್ಲಿ ನಮ್ಮ ಈಗಿನ ಪರಿಸ್ಥಿತಿಗೂ ಹಾಗೂ ಭವಿಷ್ಯತ್ತಿನ ನಿರ್ಮಾಣಕ್ಕೂ ನಾವೇ ಹೊಣೆ ಎಂಬುದನ್ನು ತಿಳಿಸುತ್ತಾ, ಆ ಎಲ್ಲ ಶಕ್ತಿ ನಮ್ಮಲ್ಲಿಯೇ ಇದೆಯೆಂಬ ಭರವಸೆಯ ನುಡಿಗಳನ್ನು ಸ್ಪಷ್ಟ ಶಬ್ಧಗಳಲ್ಲಿ ಸಾರಿದರು. ಶ್ರದ್ಧೆಯಿಂದ ಮಾಡಿದ ಕೆಲಸವು ಕೀರ್ತಿಯನ್ನು ನೀಡಿದರೆ, ಅಶ್ರದ್ಧೆಯು ಅದಃಪತನದತ್ತ ಒಯ್ಯುತ್ತದೆಯೆಂದು ಹೇಳಿದ್ದರು. ವಾಮಮಾರ್ಗದ ಮೂಲಕವೋ ಅಥವಾ ಸುಲಭ ದಾರಿಗಳ ಮೂಲಕ ಸಾಧನೆಯ ಕನಸು ಕಾಣುವವರನ್ನು ಕೇಳ ಮಟ್ಟದ ತಂತ್ರಗಳಿಂದ ಮಹತ್ತರವಾದುದನ್ನು ಸಾಧಿಸಲು ಸಾಧ್ಯವಿಲ್ಲವೆಂದು ಎಚ್ಚರಿಸಿದ್ದರು ಸ್ವಾಮೀಜಿ.
ಯುವಶಕ್ತಿಯಲ್ಲಿ ತಮ್ಮೆಲ್ಲ ಭರವಸೆಯನ್ನು ಮತ್ತು ಧೃಢ ವಿಶ್ವಾಸವಿಡುವ ಜೊತೆಗೆ, ಆ ಶಕ್ತಿಯ ಸರಿಯಾದ ಅರಿವಿದ್ದ ಸ್ವಾಮೀಜಿ ಅಸಾಧಾರಣವಾದುದನ್ನು ಸಾಧಿಸಲು ಬೇಕಾದ ಸಾಮಥ್ರ್ಯಶಾಲೀ ಸೈನ್ಯವೆಂದೇ ಪರಿಗಣಿಸಿದ್ದರು. ಅವರೆಲ್ಲರೂ ಶಿಸ್ತಿನಿಂದ ಸಂಘಬದ್ಧರಾಗಿ ದುಡಿಯುವಂತೆ ಮಾಡುವುದೇ ತನ್ನ ಕೆಲಸವೆಂದು ಬಾವಿಸಿದ್ದರು. ಇಂದಿಗೂ ಸಾಧನೆಗೆ ಸನ್ನದ್ಧವಾಗಿರುವ ಅದೆಷ್ಟೋ ಯುವಕರಿಗೆ ಸ್ವಾಮೀಜಿಯವರ ಆದರ್ಶಗಳು ಮಾರ್ಗದರ್ಶಿಯಾಗಿವೆ. ಗುರಿಯನ್ನು ಸ್ಪಷ್ಟಪಡಿಸುತ್ತ, ಸಾಗುವ ದಾರಿಯಲ್ಲಿನ ಕಷ್ಟ-ಕಾರ್ಪಣ್ಯಗಳನ್ನು ಎದುರಿಸಿ ಮುನ್ನಡೆಯುವ ಸಾಮಥ್ರ್ಯವೂ ನಿಮ್ಮಲ್ಲಿಯೇ ಇದೆಯೆಂಬುದನ್ನು ನೆನಪಿಸುತ್ತಾ, ವಿಮುಖರಾಗದೆ ಸಾಧಿಸುವಂತೆ ಮಾಡುವಲ್ಲಿ ಕ್ರಾಂತಿಸೂರ್ಯ ಸ್ವಾಮಿ ವಿವೇಕಾನಂದರೆಂಬ ಚೇತನವು ಸದಾ ಪ್ರೇರಣೆ ನೀಡುತ್ತದೆ.