ಮೈಸೂರಲ್ಲಿ ಪ್ರಕೃತಿ ಮತ್ತು ಸಾಹಿತ್ಯ ಪ್ರಸ್ತಾವನೆ ಹಾಗೂ ಸಂವಾದ

ಆದ್ಯೋತ್ ಸುದ್ದಿನಿಧಿ:
ಅಖಿಲ ಭಾರತ ಸಾಹಿತ್ಯ ಪರಿಷತ್ತನ ಮೈಸೂರು ಘಟಕವು ಪ್ರತಿ ತಿಂಗಳು ರಾಜ್ಯದ ಬೇರೆ ಬೇರೆ ಜಿಲ್ಲೆಯ ಸಾಹಿತಿಗಳಿಂದ ಬೇರೆ ಬೇರೆ ವಿಷಯದ ಬಗ್ಗೆ ಪ್ರಸ್ತಾವನೆ ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಏಪ್ರಿಲ್ ತಿಂಗಳಲ್ಲಿ ಉತ್ತರಕನ್ನಡ ಜಿಲ್ಲೆಗೆ ಈ ಅವಕಾಶ ನೀಡಲಾಗಿತ್ತು.

ಜಿಲ್ಲೆಯ ಪರಿಸರ ಸಾಹಿತಿ ಎಂದೇ ಹೆಸರಾಗಿರುವ ಗಂಗಾಧರ ಕೊಳಗಿ ಈ ಕಾರ್ಯಕ್ರಮದಲ್ಲಿ “ಪ್ರಕೃತಿಮತ್ತುಸಾಹಿತ್ಯ” ಎನ್ನುವ ವಿಷಯದ ಕುರಿತು ಪ್ರಸ್ಯಾವನೆ ಸಲ್ಲಿಸಿದರು

ಭಾರತೀಯ ಸಂಸ್ಕೃತಿಯ ಮೂಲ ವೇದ ಎಂದು ನಾವು ಗುರುತಿಸುತ್ತೇವೆ ಈ ವೇದಗಳ ಜೊತೆಗಿನ ಪ್ರಕೃತಿಯ ಸಂಬಂಧ ನಿಕಟವಾದುದು.ಅರಣ್ಯದ ನಡುವಿನಲ್ಲಿ ಋಷಿಗಳಿಂದ ವಾಚ್ಯವಾಗಿ ಸೃಷ್ಠಿಯಾಗಿರುವ ವೇದಗಳು ಪ್ರಕೃತಿಯ ಸೃಷ್ಠಿಗಳು ಎನ್ನಬಹುದು.
ಭಾರತೀಯ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ,ನಮ್ಮ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ರಾಮಾಯಣ ಮತ್ತು ಮಹಾಭಾರತವೆಂಬ ಎರಡು ಮಹಾಕಾವ್ಯಗಳಲ್ಲಿ ಜರಗುವ ಕಥನದ ಬಹುಪಾಲು ಭಾಗ ಪ್ರಕೃತಿಯ ನಡುವಿನಲ್ಲೆ ನಡೆಯುತ್ತದೆ.ಕಾಡು,ನೀರು,ಹೊಳೆ,ಸಮುದ್ರ,ಪರ್ವತ ಕೊನೆಗೆ ಕಲ್ಲು ಬಂಡೆಗಳೂ ಇಲ್ಲಿ ಪಾತ್ರವಾಗಿರೂಪುಗೊಂಡಿದೆ.ಇವೆಲ್ಲವನ್ನು
ಅವಲೋಕಿಸಿದಾಗ ಅಂತಹ ಪ್ರಾಚೀನ ಸಾಹಿತ್ಯದಲ್ಲೂ ಪ್ರಕೃತಿ ಎಷ್ಟೊಂದು ಪ್ರಖರವಾದ ಪ್ರೇರಣೆ ನೀಡಿದೆಯಲ್ಲ ಎನ್ನುವ ಭಾವನೆ ಹುಟ್ಟಿಸದೆ ಇರದು.
ವೈದಿಕ ಪರಂಪರೆಯಿಂದ ರೂಪುಗೊಂಡಿರುವ ಪುರಾಣಗಳಿರಲಿ,ಸ್ಮೃತಿಯಿರಲಿ,ಅವೈದಿಕ ಪರಂಪರೆಯಿಂದ ರೂಪುಗೊಂಡ ಕಾವ್ಯ,ಕಥನಗಳಿರಬಹುದು ಇವೆಲ್ಲದಕ್ಕೂ ಪ್ರಕೃತಿ ಪ್ರೇರಣೆ ನೀಡಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ವೈಶಿಷ್ಠ್ಯವೆಂದರೆ ಪ್ರಾಚೀನವಾದ ವೈದಿಕ ಮತ್ತು ಅವೈದಿಕ ಪರಂಪರೆಗಳೆರಡೂ ಪ್ರಕೃತಿಯನ್ನು ಆರಾಧಿಸಿದ ರೀತಿ ಸಾಹಿತ್ಯದಲ್ಲಿ ಕಂಡುಬರುತ್ತದೆ.
ರಾಮಾಯಣ,ಮಹಾಭಾರತದಲ್ಲಂತೂ ಪದೆ ಪದೆ ಕಾಡಿನತ್ತ ಮುಖ ಮಾಡುವ ಪ್ರಸಂಗಗಳು ಸೃಷ್ಠಿಯಾಗಿರುವುದು ಯಾಕಿರಬಹುದು ಎನ್ನುವ ಪ್ರಶ್ನೆ ಕಾಡುತ್ತದೆ.ಇದು ಸರಳ ನಿರೂಪಣೆ ಎಂದು ಭಾವಿಸಬೇಕಿಲ್ಲ.
ಆಧುನಿಕ ಕನ್ನಡ ಸಾಹಿತ್ಯವಂತೂ ಪ್ರಕೃತಿಯಿಂದ ಮಹತ್ತರವಾದ ಪ್ರೇರಣೆಯನ್ನು ಪಡೆದಿದೆ.ಬೇಂದ್ರೆಯವರ ಮೂಡಲಮನೆಯ,
ಮಾಸ್ತಿಯವರನೇಸರನೋಡು,
ಕುವೆಂಪುರವರ ಆನಂದಮಯ
ಈ ಕವಿತೆಗಳದ್ದೆ ಒಂದು ವಿಶಿಷ್ಠತೆ.ಪ್ರಕೃತಿಗೆ ಮತ್ತೊಂದು ತೆರನಾದ ಚೈತನ್ಯವನ್ನು ತರುವ ಸೂರ್ಯರಶ್ಮಿಯ ಮೊದಲ ಕಿರಣಗಳ ಕುರಿತಾಗಿ ಈ ಮೂವರೂ ಭಿನ್ನವಾಗಿ ಕಾವ್ಯವನ್ನು ಬರೆದಿದ್ದಾರೆ.ಪ್ರಕೃತಿಯು ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಗೋಚರಿಸುವ ಮೂಲಕ ಅವರ ಸೃಜನಶೀಲತೆಯನ್ನು ಪ್ರೆರೇಪಿಸಿದೆ ಎನ್ನವುದು ನಿಶ್ಚಯ.
ನವೋದಯದ ಬಹುತೇಕ ಎಲ್ಲ ಕವಿಗಳ ಹಿಂದಿನ ಪ್ರೇರಣೆಯು ಪ್ರಕೃತಿಯೇ ಎನ್ನಬಹುದು.
ಬೇಂದ್ರೆಯಂತಹವರು ವೈಚಾರಿಕ ನಿಲುವಿನ ಜೊತೆಗೆ ಭಾವನಾತ್ಮಕವಾಗಿ ಪ್ರಕೃತಿಯನ್ನು ಕಂಡರೆ.ಪಂಜೆಯವರು ವಾಸ್ತವಿಕ ದೃಷ್ಠಿಕೋನದಲ್ಲಿ ಪ್ರಕೃತಿಯನ್ನು ಕಂಡರು.ಏನಿದುಧೂಳಿ ಓಹೋಗಾಳಿನಾಗರಹಾವೆ ಹಾವಳುಹೂವೆಎನ್ನುವ ಇವರ ಕವಿತೆಗಳು ಮೂಲ ಪ್ರಕೃತಿಯಿಂದ ಪ್ರೆರೇಪಣೆಗೊಂಡವುಗಳೆ.
ಕೆ.ಎಸ್.ನರಸಿಂಹಸ್ವಾಮಿ,ವಿ.ಕೃ.ಗೋಕಾಕ,ಜಿ.ಎಸ್.ಶಿವರುದ್ರಪ್ಪ,ಚೆನ್ನವೀರ ಕಣವಿ,ಮಧುರ ಚೆನ್ನ,ಗೋಪಾಲಕೃಷ್ಣ ಅಡಿಗ,ಮುಂತಾದವರ ಕಾವ್ಯ-ಕೃತಿಗಳಲ್ಲಿ ಪ್ರಕೃತಿಯ ಕುರಿತಾದ ವಿಸ್ಮಯ,ಆಕರ್ಷಣೆ,ಗೋಚರವಾಗುತ್ತದೆ.
ಈ ಎಲ್ಲ ಕವಿಗಳಿಗಿಂತ ಅಡಿಗರು ಭಿನ್ನವಾದ ನೆಲೆಯಲ್ಲಿ ಪ್ರಕೃತಿಯನ್ನು ಕಾಣುತ್ತಾರೆ. ಮನು಼್ಯ ಪ್ರಕೃತಿಯ ಜೊತೆಗೆ ಸೆಣಸುತ್ತಲೆ ಬೆಳೆಯಬೇಕು ಎನ್ನುವ ಚಡಪಡಿಕೆಯ,ವಿಷಾಧದ ಸೂಕ್ಷ್ಮಗುಣ ಅವರ ಕವಿತೆಗಳಲ್ಲಿ ಕಾಣಬಹುದಾಗಿದೆ‌
ಆಧುನಿಕ ಗದ್ಯಸಾಹಿತ್ಯವೂ ಪ್ರಕೃತಿಯ ಜೊತೆಗೆ ತನ್ನ ಸಾವಯವ ಸಂಬಂಧವನ್ನು ಇನ್ನಷ್ಟು ಪ್ರಖರಗೊಳಿಸುತ್ತಲೇ ಬಂದಿದೆ.
ಕುವೆಂಪು,ಶಿವರಾಮಕಾರಂತ,ಎಂ.ಕೆ.ಇಂದಿರಾ,ಪೂರ್ಣಚಂದ್ರ ತೇಜಸ್ವಿ ಮುಂತಾದವರ ಸಾಹಿತ್ಯಗಳೆಲ್ಲವೂ ನೇರವಾಗಿ ಪ್ರಕೃತಿಯ ಜೊತೆಗೆ ಸಂಬಂಧ ಹೊಂದಿದೆ.
ಕುವೆಂಪುರವರ ಎರಡು ಕಾದಂಬರಿಗಳು,ನಾಟಕಗಳು ಪ್ರಕೃತಿಯನ್ನು ಉತ್ಕಟವಾಗಿ ಪರಿಭಾವಿಸಿದೆ.ಪ್ರಕೃತಿಯ ಕುರಿತು ಆರಾಧನಾ ಭಾವದಲ್ಲಿ ಬರೆಯುತ್ತಾರೆ ಅನಿಸಿದರೂ ಅದರೊಳಗಿನ ಕೊಳಕು,ವಿಷಾಧಗಳನ್ನೂ ವ್ಯಕ್ತಪಡಿಸುತ್ತಾರೆ.
ವೈಚಾರಿಕ ಎಚ್ಚರದಲ್ಲಿ ಬರೆದರೂ ಕಾರಂತರ ಪ್ರಕೃತಿಯ ಮೇಲಿನ ಪ್ರೀತಿ ಕಡಿಮೆಯದೇನಲ್ಲ.ಮಾನವ ಸಂಬಂಧಗಳ ಶೋಧನೆಯನ್ನು ಪ್ರಕೃತಿಯ ಮೂಲಕ ನಿರ್ವಹಿಸುವ ಅವರ ವಿಧಾನ ಬೆಟ್ಟದ ಜೀವ,ಮರಳಿಮಣ್ಣಿಗೆ ಕೃತಿಗಳಲ್ಲಿ ನಿಚ್ಚಳವಾಗಿ ಕಾಣುತ್ತದೆ.
ತೇಜಸ್ವಿಯವರ ಲೋಕವೇ ಪ್ರಕೃತೊಯದ್ದು.ವೈಜ್ಞಾನಿಕ ಮನೋಭಾವದಲ್ಲೂ ಪ್ರಕೃತಿ ಅವರಿಗೆ ನೀಡಿದ ಕಾಣಿಕೆಯನ್ನು ಅವರು ನಿರಾಕರಿಸುವುದಿಲ್ಲ.
ಈ ಇಬ್ಬರು ಮಹಾನ್ ಲೇಖಕರು ಕುವೆಂಪುರವರಿಗಿಂತ ಭಿನ್ನವಾಗಿ ಪ್ರಕೃತಿಯ ಶಕ್ತಿಯನ್ನು ಗುರುತಿಸುತ್ತ ಅದರಿಂದ ಪಡೆದ ಚಿಂತನೆಗಳನ್ನು ನಿರೂಪಿಸುತ್ತ ದು ಬಗೆಯ ಚರ್ಚೆಯನ್ನು ನಡೆಸುತ್ತಾರೆ.
ನೇರವಾಗಿ ಪ್ರಕೃತಿಯ ಕುರಿತು ಬರೆಯದಿದ್ದರೂ ಎಸ್.ಎಲ್.ಬೈರಪ್ಪ ಪ್ರಕೃತಿ -ಪುರುಷರ ಬಂಧ,ಸಂಘರ್ಷಗಳ ಕುರಿತು ತಮ್ಮ ಕಾದಂಬರಿಗಳಲ್ಲಿ ನಿರೂಪಿಸುತ್ತಾರೆ.ಇದನ್ನು ಸೂಕ್ಷ್ಮವಾಗಿ ಚಿತ್ರಸುವುದರಿಂದ ಎಷ್ಟೋ ಕಡೆ ನಮ್ಮ ಗಮನಕ್ಕೆ ಬರುವುದಿಲ್ಲ.
ನವೋದಯದ ನಂತರದ ಸಾಹಿತ್ಯ ಉದ್ದೇಶಪೂರ್ವಕವಾಗಿ ಪ್ರಕೃತಿಯ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿತೇ?ಅಥವಾ ಪಾಶ್ಚಿಮಾತ್ಯ ದೃಷ್ಟಿಕೋನದಿಂದ ಬದಲಾಯಿತೆ?ಎನ್ನುವ ಪ್ರಶ್ನೆ ಕಾಡುತ್ತಿದೆ. ಕಾರಣ ಎಲ್ಲೋ ವಿರಳವಾಗಿ,ಸಂದರ್ಭಕ್ಕೆ ಅನುಗುಣವಾಗಿ,ಪ್ರಕೃತಿಯ ವಿಷಯ ಪ್ರಸ್ತಾಪವಾಗಿರುವುದು ಬಿಟ್ಟರೆ ಅತ್ಯಂತ ಗಹನವಾಗಿ ಪ್ರಕೃತಿಯನ್ನು ಒಳಗೊಂಡಿಲ್ಲ.
ಹೊಸತಲೆಮಾರಿನ ಬರಹಗಾರರು ಪ್ರಕೃತಿ ಜೊತೆಗಿನ ಸಾವಯವ ಸಂಬಂಧವನ್ನು ನಿರಾಕರಿಸುತ್ತಿರುವುದು ಆಶ್ಚರ್ಯದ ಜೊತೆಗೆ ವಿಷಾಧವನ್ನು ಹುಟ್ಟಿಸುತ್ತದೆ.ಈ ನಿರಾಕರಣೆ ಮತ್ತಷ್ಟು ಮಹತ್ವದ ಸಾಹಿತ್ಯ ಕಾಣ್ಕೆಗಳನ್ನು ಪಡೆಯಬಹುದಾಗಿದ್ದ ಅವಕಾಶದಿಂದ ವಂಚಿತಗೊಳಿಸುವ ಸಾಧ್ಯತೆ ಇದೆ ಎನ್ನಬಹುದು‌.

ಅವೈದಿಕ ಎನ್ನಬಹುದಾದ ಲೋಕಸಂಗತಿಗಳ ಮೂಲಕ ಕೃತಿಗಳನ್ನು ಕಟ್ಟುವ ಮೂಲಕ ಪ್ರಕೃತಿಯ ಗಾಢವಾದ ಸ್ಪರ್ಶವನ್ನು ಕಂಬಾರರು ನೀಡಿದ್ದಾರೆ.ಶಿಕ್ಷಿತ ಲೋಕ ಅಥವಾ ವೈಚಾರಿಕ ಪ್ರಜ್ಞೆ ಉದ್ದೇಶಪೂರ್ವಕವಾಗಿ ದೂರ ಇಟ್ಟ ಪಾತ್ರಗಳು ಅಲ್ಲಿ ನಿಜವಾಗುತ್ತದೆ ಇದರಿಂದಲೇ ಹೇಳುವುದು ವೈದಿಕ ಮತ್ತು ಅವೈದಿಕ ಎರಡೂ ಪ್ರಕೃತಿಯಿಂದಲೇ ಸ್ಪೂರ್ತಿ ಪಡೆದಿರುವುದು ಎಂದು.
ಪ್ರಕೃತಿ ದರ್ಶನದಿಂದ ಮನುಷ್ಯನ ಬದುಕು ದೂರವಾಗುತ್ತಿರುವ ಸಂದರ್ಭದಲ್ಲಿ ಬರಹಗಾರನೊಬ್ಬನಿಗೆ ಲಭ್ಯವಾಗುವ ದರ್ಶನದಲ್ಲಿ ಅವನ ಮತ್ತು ಅವನ ಸುತ್ತಲಿನ ಕಲ್ಪನೆಯ ಹೊಳಹು ಒಂದಷ್ಟು ಸಾಹಿತ್ಯಾಸಕ್ತರಿಗೆ ಸಿಕ್ಕರೆ ಅದು ಸಾಹಿತ್ಯದ ಸಾರ್ಥಕತೆಯೂ ಆಗಿರುತ್ತದೆ.
ಪ್ರಕೃತಿ ನಿತ್ಯನೂತನವಾದುದು ಅದರರ್ಥ ಹಳೆಯದರ ಜೊತೆಗೆ ಮತ್ತೆ ಹೊಸತಾಗುವುದು.ಎಷ್ಟೇ ನಿರಾಕರಿಸಿದರೂ ಮತ್ತೆ ಸಾಗಬೇಕಿರುವುದು ಮೊದಲಿನ ದಿಕ್ಕಿನತ್ತಲೆ ಇದು ಇಂದಿನ ಅಗತ್ಯಕೂಡಾ ಹೌದು.
ಮಣ್ಣಿನ ಸ್ಪರ್ಶಶಕ್ತಿಯಿಂದ ಹುಟ್ಟಿರುವ ಮನುಷ್ಯ ಕೊನೆಗೆ ಮಣ್ಣಾಗುವ ರೀತಿಯಲ್ಲೆ ಪ್ರಕೃತಿಯ ಜೊತೆಗಿನ ಸಂಬಂಧ ನಿರಂತರವಾದುದು.ಪ್ರಸ್ತುತ ಕನ್ನಡ ಸಾಹಿತ್ಯ ಕೂಡ ತನ್ನ ಪರಂಪರೆಯನ್ನು ಮರುಜ್ಞಾಪಿಸಿಕೊಳ್ಳುತ್ತ ಮರು ನಿರೂಪಣೆಗೆ ಸಿದ್ದಗೊಳ್ಳಬೇಕಿದೆ. ಇದು ಅನಿವಾರ್ಯಕೂಡ ಹೌದು.
#### #### #### #### #### #### #### ####

ಕನ್ನಡ ಸಾಹಿತ್ಯದಲ್ಲಿ ಪ್ರಕೃತಿ,ಪರಿಸರದ ಕುರಿತು ಬರಹಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಗಂಗಾಧರ ಕೊಳಗಿಯವರು ಪ್ರಕೃತಿ ಮತ್ತು ಪರಿಸರವನ್ನೊಳಗೊಂಡ ಸಾಹಿತ್ಯ ರಚಿಸುತ್ತಿರುವುದು ಗಮನಸೆಳೆಯುವಂತಹದ್ದು ಅವರ ಪ್ರಕಟಗೊಂಡಿರುವ ಆರು ಕೃತಿಗಳಲ್ಲೂ ಪ್ರಕೃತಿ ಮತ್ತು ಪರಿಸರವನ್ನು ಗಾಢವಾಗಿ ಚಿತ್ರಿಸಿದ್ದಾರೆ.
ಇಂತಹ ಬರಹಗಾರರಿಗೆ ಅಖಿಲ ಬಾರತ ಸಾಹಿತ್ಯಪರಿಷತನ ಮೈಸೂರು ಘಟಕ “ಪ್ರಕೃತಿ ಮತ್ತು ಸಾಹಿತ್ಯ” ಎನ್ನುವ ವಿಷಯ ಪ್ರಸ್ತಾವನೆಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಸಮಯೋಚಿತವಾಗಿದೆ.

About the author

Adyot

1 Comment

  • ನಿಜ ನಿಸರ್ಗ ಬಿಟ್ಟು ಮಾನವನಿಲ್ಲ, ಹಾಗೆಯೇ ಸಾಹಿತ್ಯ ಕೂಡ.

Leave a Comment