ಕೆರೆಕೋಣದ ಸಹಯಾನಕ್ಕೆ ದಶಮಾನೋತ್ಸವದ ಸಂಭ್ರಮ

ಹೊನ್ನಾವರ : ಜಿಲ್ಲೆಯ ಸಾಂಸ್ಕೃತಿಕ ಚಳುವಳಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಪ್ರಗತಿಪರ ಬರಹಗಾರ ವಿಚಾರವಾದಿ ಡಾ.ವಿ.ಆರ್ ಭಂಡಾರಿಯವರ ನೆನಪಿನಲ್ಲಿ 2009 ರಲ್ಲಿ ಹೊನ್ನಾವರದ ಕೆರೆಕೋಣದಲ್ಲಿ ಸ್ಥಾಪಿತವಾಗಿರುವ ಸಹಯಾನ ಸಂಸ್ಕೃತಿ ಅಧ್ಯಯನ ಕೇಂದ್ರಕ್ಕೆ ಈಗ ದಶಕದ ಸಂಭ್ರಮ.


ಪ್ರಜಾಪ್ರಭುತ್ವ, ಜಾತ್ಯಾತೀತತೆ, ವೈಜ್ಞಾನಿಕ ಸಮಾಜವಾದದ ಆದರ್ಶಗಳನ್ನು ಜನತೆಯಲ್ಲಿ ಹರಡುವುದು, ಅಸ್ಪೃಶ್ಯತೆ, ಜಾತಿವಾದ, ಕೋಮುವಾದದ ಅಪಾಯಗಳನ್ನು ಸಂಘಟಿತವಾಗಿ ಎದುರಿಸುವುದು, ಮೌಡ್ಯತೆ, ಲಿಂಗ ಅಸಮಾನತೆ ಮುಂತಾದವುಗಳ ಕುರಿತು ಜಾಗೃತಿ ಮೂಡಿಸುವುದು, ಯುವಲೇಖಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿ, ಯುವಜನರಿಗೆ ಓದು, ಬರವಣಿಗೆ ಮುಂತಾದ ಸಾಹಿತ್ಯ, ಸಾಂಸ್ಕೃತಿಕ ಚಳುವಳಿಯಲ್ಲಿ ಸಹಯಾನ ಕಳೆದ ಹತ್ತು ವರ್ಷಗಳಲ್ಲಿ ತನ್ನನ್ನು ನಡೆಸಿಕೊಂಡಿದೆ. 2010ರಿಂದ ಪ್ರತಿ ವರ್ಷ ಕೆರೆಕೋಣದ ಭಂಡಾರಿಯವರ ಮನೆಯಂಗಣದಲ್ಲಿ ಸಾಹಿತ್ಯೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿಯವರೆಗೆ ಸಾಹಿತ್ಯ ಸ್ಪಂದನ ಹೊಸ ತಲೆಮಾರು, ಮಹಿಳೆ ಹೊಸತಲೆಮಾರು, ಮಾಧ್ಯಮ ಹೊಸತಲೆಮಾರು, ಚಳುವಳಿ ಹೊಸತಲೆಮಾರು, ಓದುವ ಸಂಸ್ಕೃತಿ ಹೊಸತಲೆಮಾರು, ಜಾನಪದ ಹೊಸತಲೆಮಾರು, ಡಾ.ಅಂಬೇಡ್ಕರ ಚಿಂತನೆಗಳು ಹೊಸತಲೆಮಾರು ಹೀಗೆ ವಿವಿಧ ವಿಚಾರಗಳ ಕುರಿತು ಯುವಜನಾಂಗದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.


ದಶಮಾನ ಸಾಹಿತ್ಯೋತ್ಸವದಲ್ಲಿ ಸಿನೆಮಾ ಹೊಸತಲೆಮಾರು ಎಂಬ ವಿಷಯದ ಚರ್ಚೆ ನಡೆಯಲಿದೆ. ಸಹಯಾನದ ಸಾಹಿತ್ಯೋತ್ಸವದಲ್ಲಿ ಜಯಂತ ಕಾಯ್ಕಿಣಿ, ಬರಗೂರು ರಾಮಚಂದ್ರಪ್ಪ, ಬಿ.ಸುರೇಶ, ಸವಿತಾ ನಾಗಭೂಷಣ, ಪ್ರೊ.ಎಚ್.ಎಸ್ ರಾಘವೇಂದ್ರರಾವ್, ಡಾ.ಕೃಷ್ಣಮೂರ್ತಿ ಹನೂರು, ಜಲವಳ್ಳಿ ವೆಕಟೇಶ್ವರರಾವ್, ಡಾ.ರಾಜೇಂದ್ರ ಚನ್ನಿ ಮುಂತಾದ ಖ್ಯಾತನಾಮರು ಭಾಗವಹಿಸಿ ಯುವಜನಾಂಗಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಇದರ ಜೊತೆಗೆ ಸಹಯಾನ ಮಕ್ಕಳ ಬೇಸಿಗೆ ಶಿಬಿರ, ಜಾನಪದ ಕಲೆಗಳ ಪ್ರದರ್ಶನ, ಪಂಚವಾದ್ಯ ಸಮ್ಮೇಳನ, ದಿ.ಜಿ.ಎಸ್.ಭಟ್ಟ ನೆನಪಿನ ಗೌರವ ಹಾಗೂ ಯಕ್ಷಗಾನ ಪ್ರದರ್ಶನ, ವಿಚಾರ ಸಾಹಿತ್ಯ ಪ್ರಕಟಣೆ ಹಾಗೂ ಸಂವಾದ, ಸಾಮಾಜಿಕ ನ್ಯಾಯಕ್ಕಾಗಿ ಅಭಿಯಾನ, ಡಾ.ಅಂಬೇಡ್ಕರ 125 ವರ್ಷಾಚರಣೆ ಪ್ರಯುಕ್ತ ಸಂವಿಧಾನ ಓದು ಹೀಗೆ ಹತ್ತು ಹಲವು ವಿಚಾರಗಳನ್ನು ಸಮಾಜದಲ್ಲಿ ಪ್ರಸ್ತುತ ಪಡಿಸುತ್ತಿದೆ.

About the author

Adyot

1 Comment

Leave a Comment