ಆದ್ಯೋತ್ ಸುದ್ದಿ ನಿಧಿ : ಲಾಕ್ ಡೌನ್ ಸಡಿಲಿಕೆ ಅಂದರೆ ಲಾಕ್ ಡೌನ್ ಮುಕ್ತಾಯವಲ್ಲ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸಿ.ಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿ.ಎಂ, ರಾಜ್ಯಕ್ಕೆ 1610 ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಿಸುತ್ತಿದ್ದೇವೆ. ಬೇರೆ ರಾಜ್ಯದ ಕಾರ್ಮಿಕರ ಮನವಿ ಮೇರೆಗೆ ಅವರನ್ನು ಅವರ ಊರುಗಳಿಗೆ ಕಳಿಸಿಕೊಡಲಾಗಿದೆ. ದೇವಾಲಯಗಳು, ಮದುವೆ ಸಮಾರಂಭಗಳು ನಡೆಯದಿರುವ ಕಾರಣದಿಂದ ಹೂವು ಬೆಳೆಗಾರರು ನಷ್ಟವನ್ನು ಅನುಭವಿಸಿದ್ದು, ಅವರಿಗೆ 1 ಹೆಕ್ಟೇರ್ ಗೆ 25,000 ರೂಪಾಯಿನಂತೆ ನೀಡಲಾಗುವುದು. ಅಗಸರು ಹಾಗೂ ಕ್ಷೌರಿಕರು, ಆಟೋ ಚಾಲಕರೂ ಕೂಡ ತೊಂದರೆ ಅನುಭವಿಸುತ್ತಿದ್ದು, ಅವರಿಗೆ 5000 ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ಫಿಕ್ಸೆಡ್ ದರವನ್ನ ಮನ್ನಾ ಮಾಡಲಿದ್ದೇವೆ. ನೇಕಾರರ ಸಾಲಮನ್ನಾ ಹಣವನ್ನ ಕೂಡಲೇ ಬಿಡುಗಡೆ ಮಾಡಿ, ಅವರಿಗೆ ಹೊಸ ಸಾಲ ನೀಡಲಾಗುವುದು. ನೇಕಾರ್ ಸಮ್ಮಾನ್ ಯೋಜನೆ ಎಂಬ ನೂತನ ಯೋಜನೆಯಡಿ ಕೈ ಮಗ್ಗ ನೇಕಾರರಿಗೆ ಪ್ರತಿವರ್ಷ 2000 ರೂಪಾಯಿಯಂತೆ ಅವರ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಹಣವನ್ನ ಜಮೆ ಮಾಡಲಾಗುತ್ತದೆ. ಕಟ್ಟಡ ಕಾರ್ಮಿಕರಿಗೆ ಈಗ ನೀಡಿರುವ 2000 ರೂಪಾಯಿಯ ಜೊತೆ ಮತ್ತೆ 3000 ರೂಪಾಯಿಗಳನ್ನ ನೀಡಲಾಗುವುದು. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿರಲಿದೆ ಎಂದರು.