ಆದ್ಯೋತ್ ನ್ಯೂಸ್ ಡೆಸ್ಕ್ : ಜಿಲ್ಲೆಯಲ್ಲಿ ಕೊರೊನಾ ಸೋಂಕಿತ 8 ಜನರಲ್ಲಿ 2 ಜನ ಸಂಪೂರ್ಣ ಗುಣಮುಖರಾಗಿದ್ದು, 2 ಜನರನ್ನ ನೇವಿಯ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತಿದೆ ಅಂತ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಹರೀಶ್ ಕುಮಾರ್, ಕಾರವಾರ ತಾಲ್ಲೂಕಿನ ಅರಗಾ ಗ್ರಾಮದಲ್ಲಿರುವ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರನ್ನ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಲ್ಲಿ ಈಗಾಗಲೇ ಇಬ್ಬರು ಪೂರ್ಣ ಗುಣಮುಖರಾಗಿದ್ದು ಅವರನ್ನ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ. ಆದರೆ ಮುಂಜಾಗ್ರತೆಯ ಉದ್ದೇಶದಿಂದ ಮುಂದಿನ 14 ದಿನಗಳ ಕಾಲ ಜಿಲ್ಲಾಡಳಿತವೇ ಕ್ವಾರಂಟೈನ್ ಮಾಡಲಿದ್ದು ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಲಾಗುವುದು. ಸೋಂಕಿತರ ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್ ನಲ್ಲಿಟ್ಟು ಸ್ವಾಬ್ ಅನ್ನು ಕಳಿಸಿಕೊಡಲಾಗಿತ್ತು. ಅದು ಕೂಡ ನೆಗೆಟಿವ್ ಅನ್ನೋ ವರದಿ ಬಂದಿದೆ. ಇನ್ನು ಜಮಾತ್ ನಲ್ಲಿ ಭಾಗಿಯಾಗಿದ್ದವರ ಸ್ವಾಬ್ ಕೂಡ ಕಳಿಸಲಾಗಿತ್ತು. ಅದು ಕೂಡ ನೆಗೆಟಿವ್ ಅನ್ನೋ ವರದಿ ಬಂದಿದೆ. ಬೇರೇ ಬೇರೆ ಕಡೆ ಜಮಾತ್ ನಲ್ಲಿ ಭಾಗಿಯಾದವರ ಸ್ಯಾಂಪಲ್ ಕೂಡ ಸರ್ಕಾರದ ಆದೇಶದಂತೆ ಕಳಿಸಿಕೊಡಲಾಗಿದ್ದು, ಅದರ ವರದಿ ಕೂಡ ನೆಗೆಟಿವ್ ಬಂದಿದೆ. ಇನ್ನು 3 ದಿನಗಳ ನಂತರ ಮತ್ತೊಮ್ಮೆ ಜಿಲ್ಲೆಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದರು.