ಆದ್ಯೋತ್ ಸುದ್ದಿ ನಿಧಿ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಚಿಕಿತ್ಸೆ ಪಡೆಯುತ್ತಿರುವ 20 ಜನ ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಇಂದು 30 ಜನರೂ ಕೂಡ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
ಜಿಲ್ಲೆಯ ಕೊರೊನಾ ಸೋಂಕಿತರನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಇಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಸ್ಥೆಯಲ್ಲಿ 52 ಕೊರೊನಾ ಸೋಂಕಿತರು ದಾಖಲಾಗಿದ್ದು, 20 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದರಿಂದ ಇಂದು ಅವರನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಕಿಮ್ಸ್, 52 ಕೊರೊನಾ ಸೋಂಕಿತರಲ್ಲಿ ಗರ್ಭಿಣಿ ಸೇರಿ 5 ತಿಂಗಳ ಮಗುವನ್ನು ಒಳಗೊಂಡು 83 ವರ್ಷದ ವಯೋವೃದ್ಧರು ಹಾಗೂ 60 ವರ್ಷ ದಾಟಿದ 4 ಜನ ಸೋಂಕಿತರಿದ್ದಾರೆ. ಇವರನ್ನು ಗುಣಪಡಿಸಲು ಸಂಸ್ಥೆಯ ವೈದ್ಯರು, ನರ್ಸಿಂಗ್ ಸಿಬ್ಬಂದಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಸ್ವಯಂ ದಿಗ್ಬಂಧನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಫಲವಾಗಿ 20 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗುತ್ತಿರುವುದು ಸಂತಸ ಉಂಟುಮಾಡಿದೆ ಎಂದಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟೂ 64 ಸೋಂಕಿತರಿದ್ದು, 12 ಜನ ಈ ಮೊದಲು ಬಿಡುಗಡೆಗೊಂಡಿದ್ದರು. ಈಗ 20 ಜನರ ಬಿಡುಗಡೆಯೊಂದಿಗೆ ಜಿಲ್ಲೆಯಲ್ಲಿ 32 ಸಕ್ರಿಯ ಪ್ರಕರಣಗಳು ಉಳಿದುಕೊಂಡಂತಾಗಿದೆ.