ಆದ್ಯೋತ್ ನ್ಯೂಸ್ ಡೆಸ್ಕ್ : ಕೊರೊನಾ ಲಾಕ್ ಡೌನ್ ಮುಗಿಯಲು ಇನ್ನು 5 ದಿನ ಬಾಕಿ ಇರುವಾಗ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಲಾಕ್ ಡೌನ್ ನಂತರ ತಮ್ಮ 5 ನೇ ಭಾಷಣದಲ್ಲಿ ಮೋದಿ, ಒಂದು ವೈರಸ್ ವಿಶ್ವವನ್ನೇ ಅಸ್ತವ್ಯಸ್ತ ಮಾಡಿದೆ. ಇಡೀ ವಿಶ್ವವೇ ಜೀವವನ್ನು ಉಳಿಸಲು ಯುದ್ಧದಂತೆ ಹೋರಾಡುತ್ತಿದೆ. ಇದರ ವಿರುದ್ಧ ಹೋರಾಡುತ್ತಾ ನಾವು ಮುಂದುವರಿಯಬೇಕಿದೆ. ಕೊರೊನಾ ಸಂಕಟದಲ್ಲೂ ಕೂಡ ಇದು ಭಾರತದ ಶತಮಾನ ಎನ್ನುವುದನ್ನು ಒಪ್ಪಿಕೊಳ್ಳಬೇಕಿದೆ. ಇದು ನಮ್ಮೆಲ್ಲರ ಜವಾಬ್ದಾರಿ ಕೂಡ ಆಗಿದೆ. ಕೊರೊನಾ ನಮ್ಮೆಲ್ಲರಿಗೂ ಒಂದು ಪಾಠ ಕಲಿಸಿದೆ. ಸ್ವಾವಲಂಬಿ ಭಾರತ ಅನ್ನೋದೇ ಆ ಪಾಠ. ಈ ಹಿಂದೆ ನಮ್ಮಲ್ಲಿ ಪಿ.ಪಿ.ಇ ಕಿಟ್ ಹಾಗೂ N95 ಮಾಸ್ಕ್ ಗಳಿರಲಿಲ್ಲ. ಆದರೆ ಈಗ ಅದನ್ನು ನಾವೇ ಉತ್ಪಾದಿಸುತ್ತಿದ್ದೇವೆ. ಭಾರತದ ಪ್ರಗತಿಯಲ್ಲಿ ಇಡೀ ವಿಶ್ವದ ಪ್ರಗತಿ ಕೂಡ ಅಡಕವಾಗಿದೆ. ಟಿ.ಬಿ, ಅಪೌಷ್ಟಿಕತೆ ಹಾಗೂ ಪೋಲಿಯೋ ಮುಕ್ತ ಮಾಡುವಲ್ಲಿ ಭಾರತದ ಪಾತ್ರ ಬಹುದೊಡ್ಡದಾಗಿದೆ. ವಿಶ್ವಕಲ್ಯಾಣ ಭಾರತದ ಚಿಂತನೆಯಾಗಿದೆ. ಇಂದಿನ ಭಾರತ ವಿಕಾಸ ಹಾಗೂ ಅಭಿವೃದ್ಧಿಯತ್ತ ಮುನ್ನುಗುತ್ತಿದೆ. ನಮ್ಮಲ್ಲಿ ವಿಶ್ವದ ಅತ್ಯುತ್ತಮ ಟ್ಯಾಲೆಂಟ್ ಗಳಿವೆ. ನಾವು ಉತ್ತಮವಾದುದನ್ನ ನಿರ್ಮಿಸಬಹುದಾಗಿದೆ. ಉತ್ಪಾದಿಸುತ್ತಿದ್ದೇವೆ ಕೂಡ, ಇದು ನಮ್ಮ ಸಂಕಲ್ಪ ಶಕ್ತಿಯಾಗಿದೆ ಎಂದರು.
ನಮ್ಮ ಸರ್ಕಾರ ದೇಶಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸುತ್ತಿದೆ. ಸ್ವಾವಲಂಬಿ ಭಾರತಕ್ಕೆ ಈ 20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್ ನೆರವಾಗಲಿದೆ. ಜಿಡಿಪಿ ಯ ಶೇಕಡಾ 10 ರಷ್ಟು ಪ್ಯಾಕೇಜ್ ಘೋಷಿಸುತ್ತಿದ್ದೇವೆ. ಇದು ದೇಶದ ಶ್ರಮಿಕರಿಗೆ, ರೈತರಿಗೆ ಹಾಗೂ ಹಗಲು ರಾತ್ರಿ ದುಡಿಯುವವರಿಗೆ ಸಮರ್ಪಿಸುತ್ತಿದ್ದೇವೆ. ಹಣಕಾಸು ಸಚಿವರು ಇದರ ಮಾಹಿತಿಯನ್ನು ಮುಂದಿನ ಕೆಲ ದಿನಗಳವರೆಗೆ ನೀಡಲಿದ್ದಾರೆ. ದೇಶದ ಆರ್ಥಿಕತೆ ಉತ್ತುಂಗಕ್ಕೇರುವಲ್ಲಿ ಈ ಪ್ಯಾಕೇಜ್ ನೆರವಾಗಲಿದೆ. ಕೊರೊನಾ ನಮಗೆ ದೇಶೀಯ ಉತ್ಪಾದನೆ, ದೇಶೀಯ ವಿತರಣಾ ವ್ಯವಸ್ಥೆಗಳ ಬಗ್ಗೆ ಒಂದು ದೊಡ್ಡ ಪಾಠ ಕಲಿಸಿದೆ. ಇನ್ನು ಮುಂದೆ ನಾವು ಸ್ಥಳೀಯ ವಸ್ತುಗಳನ್ನೇ ಉಪಯೋಗಿಸೋಣ. ಸ್ಥಳೀಯ ವಸ್ತುಗಳಿಗಾಗಿ ರಾಯಭಾರಿಗಳಾಗೋಣ. ದೇಶೀಯ ವಸ್ತುಗಳನ್ನ ಬ್ರ್ಯಾಂಡ್ ಮಾಡೋಣ. ರಾಜ್ಯಗಳ ಸಲಹೆ ಆಧರಿಸಿ ಲಾಕ್ ಡೌನ್ ನ 4ನೇ ಆವೃತ್ತಿ ಹೊಸ ನಿಯಮಗಳೊಂದಿಗೆ ಬರಲಿದೆ. ಮೇ 18ಕ್ಕಿಂತ ಮೊದಲೇ ಇದನ್ನ ತಿಳಿಸಲಾಗುವುದು ಎಂದರು.
👍