ಮನೆಯ ಪಕ್ಕದಲ್ಲಿ ಶೆಡ್ ಹಾಕಿಕೊಂಡು ಹುಲ್ಲನ್ನ ಬೇಯಿಸೋ ದೃಶ್ಯ. ಬೇಯಿಸಿದ ಹುಲ್ಲನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಸುತ್ತುತ್ತಿರೋ ದಂಪತಿಗಳು. ಅಣಬೆ ಬೇಸಾಯದಿಂದ ಜೀವನ ನಡೆಸುತ್ತಿರೋ ದಂಪತಿಗಳು. ಅಣಬೆಯಿಂದ ಜೀವನ ಸಾಗಿಸುತ್ತಿರೋರ ವ್ಯಥೆಯ ಕಥೆಯಿದು.
ಸಿದ್ದಾಪುರ ತಾಲೂಕಿನ ಕಾನಸೂರಿನ ದಂಪತಿಯ ಅಣಬೆ ಬೇಸಾಯದ ಕಹಾನಿಯಿದು. ಸುಬ್ರಾಯ ಶೇಟ್ ದಂಪತಿಗಳು ಬಡತನದಲ್ಲಿಯೇ ಜೀವನ ಸಾಗಿಸುತ್ತ ಬಂದವರು. ಯಾವುದೇ ಜಮೀನು ಇಲ್ಲದ ಇವರಿಗೆ ಜೀವನ ನಡೆಸೋಕೆ ಏನಾದ್ರೂ ಮಾಡ್ಬೇಕು ಅಂತ ವಿಚಾರ ಮಾಡ್ತಿದ್ದಾಗ ಇವರ ಕೈ ಹಿಡಿದಿದ್ದು ಅಣಬೆ ಬೇಸಾಯ. ಶಿವಮೊಗ್ಗ ಜಿಲ್ಲೆಯ ಕೃಷಿ ಮತ್ತು ವಿಜ್ಞಾನ ಕೇಂದ್ರದಲ್ಲಿ ಅಣಬೆ ಬೇಸಾಯದ ಕುರಿತು ತರಬೇತಿ ಪಡೆದ ಇವರು ಮನೆಯ ಪಕ್ಕದಲ್ಲಿ 80 ಸಾವಿರ ರೂಪಾಯಿ ವೆಚ್ಚದಲ್ಲಿ ಶೆಡ್ ಹಾಕಿ ಒಟ್ಟೂ 1 ಲಕ್ಷ 30 ಸಾವಿರ ರೂಪಾಯಿ ವೆಚ್ಚದಲ್ಲಿ ಬೇಸಾಯ ಘಟಕವನ್ನ ಪ್ರಾರಂಭಿಸಿದ್ದರು.
ತಿನ್ನುವ ಆಯಸ್ಟರ್ ಮಶ್ರುಮ್ ಅನ್ನು ಇವರು ಬೆಳೆಯುತ್ತಾರೆ. ಮೊದಲು ಭತ್ತದ ಹುಲ್ಲನ್ನು 5 ಇಂಚ್ ಗೆ ಕತ್ತರಿಸಿ ನೆನೆಸಿ ಅದನ್ನ ಬೇಯಿಸುತ್ತಾರೆ. ನೀರು ಬಸಿದ ನಂತರ ಅದನ್ನ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿ ಅದಕ್ಕೆ ಅಣಬೆಯ ಬೀಜವನ್ನ ತುಂಬಬೇಕು. ನಂತರ ಅದರ ಮೇಲೆ 3 ಲೇಯರ್ ಗಳಲ್ಲಿ ಹುಲ್ಲನ್ನು ಹಾಕಿ ಕೊಟ್ಟೆಯನ್ನ ಕಟ್ಟಿ ಶೆಡ್ ನಲ್ಲಿ ನಿರ್ಮಿಸಿದ ಕಟ್ಟಿನ ಮೇಲೆ ಇಡಬೇಕಾಗುತ್ತೆ. 20 ದಿನದ ನಂತರ ನಿಧಾನವಾಗಿ ಅಣಬೆ ಕೊಟ್ಟೆಯಿಂದ ಹೊರಗಡೆ ಬರಲಾರಂಭಿಸುತ್ತೆ. ನಂತರ ಅದನ್ನ ಕೊಯ್ಲು ಮಾಡಿ ಅದೇ ದಿನವೇ ಮಾರಬೇಕಾಗುತ್ತೆ. ಇಲ್ಲದಿದ್ರೆ ಅಣಬೆ ಕೊಳೆತು ಹೋಗುತ್ತೆ ಅಂತಾರೆ ಸುಬ್ರಾಯ ಶೇಟ್..
ಇತ್ತೀಚಿಗೆ ಪ್ರಚಲಿತದಲ್ಲಿರುವ ಅಣಬೆಗಳಲ್ಲಿ ಆಯಸ್ಟರ್ ಅಣಬೆ ಅತಿ ಪ್ರಮುಖವಾಗಿದೆ. ಅಣಬೆಯಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ವಿಟಮಿನ್ ಡಿ. ಆಂಟಿ ಎಕ್ಸಿಡೆಂಟ್ ಗಳನ್ನ ಇದು ಹೊಂದಿದೆ. ಇದನ್ನ ತಿನ್ನೋಕೆ ಹಲವರು ಇಷ್ಟಪಡಲ್ಲ. ಆದ್ರೆ ರಕ್ತದಲ್ಲಿನ ಸಕ್ಕರೆ ಅಂಶವನ್ನ ನಿಯಂತ್ರಿಸುವದೊಂದಿಗೆ ಅಧಿಕ ರಕ್ತದೊತ್ತಡವನ್ನ ಕಡಿಮೆ ಮಾಡುತ್ತೆ ಈ ಆಯಸ್ಟರ್ ಮಶ್ರುಮ್. ಆದ್ರೆ ಅಣಬೆಗಳ ಮಾರುಕಟ್ಟೆಯ ಪ್ರಮಾಣ ನಮ್ಮ ಜಿಲ್ಲೆಯಲ್ಲಿ ಅತಿ ವಿರಳವಾಗಿದೆ. ಮಲೆನಾಡು ಭಾಗದ ಸಿದ್ದಾಪುರದಲ್ಲಿ 6 ಹಾಗೂ ಶಿರಸಿಯಲ್ಲಿ 3 ಬೆಳೆಗಾರರು ಇದನ್ನ ಬೆಳೆಯುತ್ತಿದ್ದಾರೆ. ಅಣಬೆಯನ್ನ ತಿನ್ನೋ ಜನರ ಮಧ್ಯೆ ಹೋಗಿ ಮಾರಬೇಕಾದ ಪರಿಸ್ಥಿತಿ ಬೆಳೆಗಾರರಿಗೆ ಬಂದೊದಗಿದೆ. ಬೆಳಿಗ್ಗೆ ಕತ್ತರಿಸಿ ಸಂಜೆಯೊಳಗಾಗಿ ಇದನ್ನ ಮಾರೋ ಅನಿವಾರ್ಯತೆ ಇರೋದರಿಂದ ಬೆಳೆಗಾರರ ಸಂಖ್ಯೆ ಕೂಡ ಕಡಿಮೆ. ಆದ್ರೆ ಅಣಬೆ ಒಂದು ಪೌಷ್ಟಿಕ ಆಹಾರ ಅಂತಾರೆ ತೋಟಗಾರಿಕಾ ಸಹಾಯಕ ಉಪನಿರ್ದೇಶಕರು..
ಒಟ್ಟಿನಲ್ಲಿ ಅಣಬೆ ಬೇಸಾಯ ಒಂದು ಲಾಭದ ಕೃಷಿಯಾಗಿದ್ದರೂ ಕೂಡ ಮಾರುಕಟ್ಟೆಯ ವಿಷಮ ಪರಿಸ್ಥಿತಿಯಿಂದಾಗಿ ಬೇಸಾಯಗಾರರ ಸಂಖ್ಯೆ ಕಡಿಮೆಯಾಗಿದೆ. ಉತ್ತಮ ಪೌಷ್ಟಿಕ ಆಹಾರವಾದ ಅಣಬೆಯನ್ನ ನಿಯಮಿತವಾಗಿ ಸೇವನೆ ಮಾಡೋದರಿಂದ ಆರೋಗ್ಯ ವರ್ಧನೆ ಜೊತೆ ಅಣಬೆ ಬೇಸಾಯವನ್ನೇ ಜೀವನಕ್ಕೆ ಅವಲಂಬಿಸಿರೋ ಬೆಳೆಗಾರರಿಗೂ ಅಸರೆಯಾಗುತ್ತೆ.
…………………………….
ಶ್ರೀಧರ ಮದ್ದಿನಕೇರಿ