ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಖಾಸಗಿ ಆಸ್ಪತ್ರೆಯ ವೈದ್ಯರುಗಳು
ಸರಕಾರದ ಗೊಂದಲದ ನಿಯಮಗಳಿಗೆ ರೋಸಿ ಕೊವಿಡ್ ರೋಗಿಗಳ ಚಿಕಿತ್ಸೆಯನ್ನು ನಿಲ್ಲಿಸುತ್ತಿದ್ದಾರೆ.
ಈ ಕುರಿತು ಶುಕ್ರವಾರ ಶಿರಸಿಯಲ್ಲಿ ಖಾಸಗಿ ವೈದ್ಯರು ಸುದ್ದಿಗೋಷ್ಠಿ ನಡೆಸಿದರು.
ಮಹಾಲಕ್ಷ್ಮಿ ಮೆಮೊರಿಯಲ್ ಆಸ್ಪತ್ರೆಯ ವೈದ್ಯ ಡಾ.ದಿನೇಶ ಹೆಗಡೆ ಮಾತನಾಡಿ,ಸರ್ಕಾರದ ನಿಯಮಾವಳಿಗಳ ತೊಡಕು, ಸಿಬ್ಬಂದಿ ಕೊರತೆ, ಔಷಧಗಳ ಕೊರತೆ ಕಾರಣ ಖಾಸಗಿ ಕೋವಿಡ್ ಆಸ್ಪತ್ರೆಗಳಲ್ಲಿ ಹೊಸ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಸರ್ಕಾರ ಹೊರಡಿಸುವ ಕಾನೂನು ಕಟ್ಟಳೆಗಳು ಉಸಿರು ಗಟ್ಟಿಸುತ್ತಿವೆ. ಇಡೀ ದಿನ ಕಾಗದ ಪತ್ರ ವ್ಯವಹಾರದಲ್ಲೇ ಕಾಲಹರಣವಾಗುತ್ತದೆ.ಇಂಥ ವಾತಾವರಣದಲ್ಲಿ ಕೊವಿಡ್ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಮುಂದುವರಿಸುವುದು ಉತ್ತಮ. ಖಾಸಗಿ ಆಸ್ಪತ್ರೆಗಳಲ್ಲಿ ದಿನದಿಂದ ದಿನಕ್ಕೆ ಆಡಳಿತದ ಕಿರಿಕಿರಿ ಹೆಚ್ಚುತ್ತಿದೆ. ನಿತ್ಯ 3 ರಿಂದ 4 ಗಂಟೆ ಕಾಗದಪತ್ರದ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ನಮ್ಮ ವ್ಯವಸ್ಥೆಯಲ್ಲಿ ಈಗಿರುವ ರೋಗಿಗಳನ್ನು ಗುಣಪಡಿಸುತ್ತೆವೆ,ಹೊಸ ನೋಂದಣಿ ಸ್ಥಗಿತಗೊಳಿಸಿ ಸರ್ಕಾರಿ ವ್ಯವಸ್ಥೆಗೆ ಸಹಕಾರ ನೀಡುತ್ತೇವೆ ಎಂದರು.
ನಯನ ಆಸ್ಪತ್ರೆಯ ಡಾ.ಕೆ.ವಿ.ಶಿವರಾಮ ಮಾತನಾಡಿ, ಕಳೆದ ವರ್ಷದಿಂದ ಶಿರಸಿ ಸ್ಕ್ಯಾನ್ ಸೆಂಟರ್ ಹಾಗೂ ಮಹಾಲಕ್ಷ್ಮಿ ಮೆಮೋರಿಯಲ್ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಮಾಡಲಾಗುತ್ತಿದ್ದು, ಈ ಬಾರಿ ಕೂಡ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆಡಳಿತದಿಂದ ಸಮಸ್ಯೆ ಆಗುತ್ತಿದೆ. ಇದರ ಜತೆಗೆ, ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕಡಿಮೆಯಾಗಿದ್ದಾರೆ. ಒಂದು ಕೋವಿಡ್ ರೋಗಿ ಮೃತಪಟ್ಟರೆ ಅದಕ್ಕೆ ಸಂಬಂಧಪಟ್ಟು 1 ಗಂಟೆಗಳ ದಾಖಲಾತಿಯನ್ನು ವೈದ್ಯರೇ ಸ್ವತಃ ದಾಖಲಿಸಬೇಕು.
ಇವುಗಳ ಜತೆ, ಆಮ್ಲಜನಕ, ಮಾಸ್ಕ್, ಇಂಜಕ್ಷನ್, ಔಷಧಗಳು ಉಚಿತವಾಗಿ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ನಿತ್ಯದ ವರದಿಯನ್ನೂ ಕೊಡಬೇಕೆಂದು ಸರ್ಕಾರ ನಿರ್ದೇಶಿಸಿದ್ದು ಮತ್ತಷ್ಟು ಸಮಸ್ಯೆ ಆಗುತ್ತಿದೆ. ಹೀಗಾಗಿ ಸಾಮಾಜಿಕ ಜವಾಬ್ದಾರಿಯಿಂದ ವೈದ್ಯರಾಗಿ ಸೇವೆ ನೀಡಲು ನಾವು ಸಿದ್ಧವಿದ್ದೆವೆ ಆದರೆ ಆಸ್ಪತ್ರೆಯಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡಲು ಸಮಸ್ಯೆ ಆಗುತ್ತದೆ ಎಂದು ಹೇಳಿದ ಅವರು ನಿಯಮಾವಳಿ ಸಡಿಲಿಸಬೇಕು,ಔಷಧ,ಆಮ್ಲಜನಕ ಉಚಿತವಾಗಿ ನೀಡಿದರೆ ಚಿಕಿತ್ಸೆ ನೀಡಬೇಕೇ? ಬೇಡವೇ? ಎಂದು
ಯೋಚಿಸಲಾಗುವುದು ಎಂದು ಹೇಳಿದರು.
ಈ ವೇಳೆ ವೈದ್ಯರಾದ ಡಾ.ಸುಮನ್ ಹೆಗಡೆ, ಡಾ.ವಿಶ್ವನಾಥ ಅಂಕದ್,ಡಾ. ಕೃಷ್ಣಮೂರ್ತಿ ರಾಯ್ಸದ್,ಡಾ.ಕೃಷ್ಣಮೂರ್ತಿ ಹೆಗಡೆ, ಡಾ.ಜಿ.ಎಂ.ಹೆಗಡೆ, ಡಾ.ಮಹೇಶ ಹೆಗಡೆ,ಡಾ. ತನುಶ್ರೀ ಹೆಗಡೆ, ಡಾ.ಮಂಜುನಾಥ ಉಪಸ್ಥಿತರಿದ್ದರು.