ಆದ್ಯೋತ್ : ಕಥಾಗುಚ್ಛ

ಟ್ರೂ ಲವ್
###################

ನನ್ನ ಹೆಸರು ರಾಹುಲ್,ಮಂಗಳೂರಿನ ಹುಡುಗ.ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದೆ.2020  ಮಾರ್ಚ್ 15 ,ಡಿಗ್ರಿ ಫೈನಲ್ ಇಯರ್ ನ ಲಾಸ್ಟ ಡೇ.ಕಾಲೇಜಲ್ಲಿ ಮೂರುವರ್ಷದ ಬಿಎಸ್ಸಿ ಕೋರ್ಸ್ ಮುಗಿಸಿದ ನಮ್ಮ ಬ್ಯಾಚ್ ನ ಸೆಂಡಾಫ್ ನಡೆಯುತ್ತಿತ್ತು. ನನ್ನೆಲ್ಲ ಗೆಳೆಯರಲ್ಲೂ ತುಸು ದುಃಖ ತುಂಬಿತ್ತು.
ಆದರೆ ನನಗಂತೂ ಒಂದು ವಾರದಿಂದ ಮೂಡ್ ಆಫ್ ಆಗಿತ್ತು. ಕಾರಣ ನಾನು ಪ್ರೀತಿಸಿದ ಭಾರ್ಗವಿ. ಕಾಲೇಜ್ನ ಎಲ್ಲೆಡೆ ನನ್ನ ಕಣ್ಣು ಕೇವಲ ಭಾರ್ಗವಿಗಾಗಿ ಹುಡುಕುತ್ತಿತ್ತು. ಕಾಲೇಜಿಂದ ಹೊರಡುವಾಗ ಕಣ್ಣೀರು ದಳದಳನೆ ಹರಿಯುತ್ತಿತ್ತು ನನ್ನ ಮತ್ತು ಭಾರ್ಗವಿಯ ಐದು ವರ್ಷದ ಪ್ರೀತಿ ಮುರಿದುಬಿದ್ದಿತ್ತು. ಕಾರಣವೇ ಹೇಳದೇ ಭಾರ್ಗವಿ ನನ್ನಿಂದ ದೂರವಾಗಿದ್ದಳು. ಕ್ಲಾಸ್ರೂಮ್ ಗಳನ್ನು ಬೆಂಚುಗಳನ್ನು ನೋಡಿದಾಗ ಅವಳ ನೆನಪಾಗಿ ಹೃದಯವೇ ಕಿತ್ತು ಬರುವಂತಿತ್ತು. ಕಾಲೇಜ್ ಕ್ಯಾಂಪಸ್ ನ ಹೆಜ್ಜೆಹೆಜ್ಜೆಗೂ ಅವಳೇ ಕಾಣುತ್ತಿದ್ದಳು. ಒಂದು ವಾರದಿಂದ ನನ್ನ ಕಾಲ್ ಮೆಸೇಜ್ ಗಳನ್ನು ಇಗ್ನೋರ್ ಮಾಡುತ್ತಿದ್ದಳು, ಆದರೆ ಆ ದಿನ ಬಂದ ಅವಳ ಕೊನೆಯ ಸಂದೇಶ “ಪ್ಲೀಸ್  ನೆವರ್ ಕಮ್ ಟು ಮೈ ಲೈಫ್” ಓದಿದಾಗ ಜೀವನವೇ ಶೂನ್ಯವೆನಿಸಿತು.
ಭಾವನಾತ್ಮಕ ಜೀವಿ ಆದ ನಾನು, ಅವಳ ನೆನಪಿನ ನೋವನ್ನು ತಡೆಯಲಾರದೆ ಡಿಪ್ರೆಶನ್ಗೆ ತಲುಪಿದ್ದೆ.  ಆದರೆ ನನ್ನ ದುಃಖವನ್ನು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ .ಕಾಲೇಜ್ ಬಸ್ಟಾಪ್ ಅಲ್ಲಿ ಬಸ್ ಗಾಗಿ ನಿಂತಿದ್ದ ನಾನು, ಮೈಮೇಲೆ ಪ್ರಜ್ಞೆ ಇಲ್ಲದವನಂತೆ ರಾತ್ರಿಯವರೆಗೂ ನಿಂತಿದ್ದೆ. ಕೊನೆಯ ಬಸ್ಸನ್ನು ಹತ್ತಿ ಹಿಂಬದಿಯ ಕಿಟಕಿಯಲ್ಲಿ ಕುಳಿತು ಇಯರ್ ಫೋನ್ ಹಾಕಿ ಸಾಂಗ್ ಪ್ಲೇ ಮಾಡಿದರೆ ಹಾಡಿನ ಸಾಹಿತ್ಯವೆಲ್ಲ ನನ್ನ ಸ್ಥಿತಿಯನ್ನೇ ಹೇಳುವಂತಿದ್ದವು ರೂಮ್ಗೆ ಬಂದು ಮೊಬೈಲ್ ನೋಡಿದರೆ ಅಮ್ಮನಿಂದ 15 ಮಿಸ್ ಕಾಲ್ ಗಳಿದ್ದವು.
ಅಮ್ಮನಿಗೆ ಫೋನ್ ಮಾಡಿ ಎವರಿಥಿಂಗ್ ಇಸ್ ಫೈನೆ ಎಂಬಂತೆ ನಟಿಸಿದೆ ಆದರೆ ನನ್ನ ಧ್ವನಿಯನ್ನು ಗಮನಿಸಿದ ಅಮ್ಮನಿಗೆ ನಾನು ಏನೋ ಬೇಜಾರ್ ಅಲ್ಲಿರುವುದು ತಿಳಿದಿತ್ತು.ಆದರೆ ಸತ್ಯವನ್ನು ಅಮ್ಮನಿಂದಲೂ ಮುಚ್ಚಿಟ್ಟೆ.
ಹಸಿವಿದ್ದರೂ ಗಂಟಲಲ್ಲಿ ಊಟ ಇಳಿಯುತ್ತಿರಲಿಲ್ಲ ಮಲಗಿದರೆ ನಿದ್ದೆ ಹತ್ತುತ್ತಿರಲಿಲ್ಲ ,ಎಚ್ಚರವಿದ್ದರೆ ಅವಳದೇ ಧ್ಯಾನ. ಒಂದು ದಿನವೇನೋ ಕಳೆಯಿತು ಮಾರನೆಯ ದಿನ ಸತತವಾಗಿ ಭಾರ್ಗವಿಗೆ 72 ಬಾರಿ ಕಾಲ್ ಮಾಡಿದ್ದೆ, 73ನೇ ಬಾರಿ ಸ್ವಿಚ್ ಆಫ್ ಅಂತ ಬಂತು. ಆದರೆ ಅವಳ ಕಡೆಯಿಂದ ಒಂದೇ ಒಂದು ಮೆಸೇಜ್ ಬಂದಿತ್ತು “ಪ್ಲೀಸ್ ಮೂವ್ ಆನ್ ನೆವರ್ ಕಾಲ್ ಮಿ ಅಗೇನ್”. ಯಾರೊಂದಿಗೂ ಮಾತನಾಡುತ್ತಿರಲಿಲ್ಲ ,ಯಾರ ಕಾಲನ್ನು ರಿಸೀವ್ ಮಾಡುತ್ತಿರಲಿಲ್ಲ. ಮನುಷ್ಯರ ಮೇಲಿರುವ ನಂಬಿಕೆಯೇ ಸತ್ತುಹೋಯಿತು.
ಮೂರು ದಿನ ನಾನು ರೂಮ್ ನಿಂದ ಹೊರಗೆ ಬಂದಿರಲಿಲ್ಲ ಊಟವನ್ನು ಮಾಡಿರಲಿಲ್ಲ. ನಾನು ಈ ಜಗತ್ತಲ್ಲಿ ಬದುಕಲು ಒಂದೇ ಒಂದು ಕಾರಣವೂ ಉಳಿದಿಲ್ಲವಲ್ಲ ದೇವರೇ ನನ್ನಿಂದ ಈ ಜಗತ್ತಲ್ಲಿ ಬದುಕುವ ಶಕ್ತಿ ಇಲ್ಲ ವ್ಯರ್ಥವಾದ ಈ ಜೀವ ನನಗೆ ಬೇಡ ಎಂದು  ಎಂದು ಅಂಗಲಾಚಿದೆ.ಒಂದೆಡೆ  ಅಕಾಲಿಕವಾದ ಮಳೆ ಆರ್ಭಟ ವಾಗಿ ಸುರಿಯುತ್ತಿತ್ತು,ಇನ್ನೊಂದೆಡೆ ನನ್ನ ಕಣ್ಣಿಂದ ನೀರು ಸುರಿಯುತ್ತಿದ್ದವು. ನೋವನ್ನು ತಾಳಲಾಗದ ನಾನು ಸೂಸೈಡ್ ಮಾಡಿಕೊಳ್ಳಬೇಕೆಂದು  ನಿರ್ಧರಿಸಿದ್ದೆ.ಡಿಪ್ರೆಶನ್ನಲ್ಲಿದ್ದ ನನಗೆ ಆ ಸಮಯದಲ್ಲಿ ನನ್ನನ್ನು ಪ್ರೀತಿಸುವ  ತಂದೆ-ತಾಯಿಗಳ ನೆನಪೂ ಬಂದಿರಲಿಲ್ಲ.
ಚಾಕುವಿನಿಂದ ಕೈಯ ರಕ್ತನಾಳ ಕತ್ತರಿಸಿಕೊಳ್ಳುವುದರಲ್ಲಿದ್ದೆ, ಅಷ್ಟರಲ್ಲಿ ನನ್ನ ರೂಮಿನ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ಬಾಗಿಲನ್ನು ತೆರೆದರೆ ಯಾರೂ ಕಾಣಲಿಲ್ಲ .ಕುಂಯ್ ಕುಂಯ್ ಎನ್ನುವ ಶಬ್ಧ .ಏನೆಂದು ಕೆಳನೋಡಿದರೆ ಬಾಗಿಲಿನ ಬುಡದಲ್ಲಿ ಕುಂಟುಹಾಕುತ್ತ ನಿಂತಿದ್ದ ನಾಯಿಮರಿ.  ಮಳೆಯಿಂದ ಪೂರ್ತೀ ಒದ್ದೆಯಾಗಿದ್ದ ನಾಯಿಮರಿ ಚಳಿಯಿಂದ ನಡುಗುತ್ತಿತ್ತು. ಗಾಯದಿಂದ ಒಂದು ಕಾಲನ್ನು ಕುಂಟು ಹಾಕುತ್ತಿತ್ತು. ಆ ಮೂಕಪ್ರಾಣಿಯ ಸ್ಥಿತಿಯನ್ನು ನೋಡಿ ಕೂಡಲೇ ಮನಸ್ಸು ಕರಗಿತು. ನನ್ನ ಹಳೆಯ ಬಟ್ಟೆಯನ್ನು ತಂದು ನಾಯಿಮರಿಯ ದೇಹವನ್ನು ಒರೆಸಿದೆ.  ಹಸಿದ ನಾಯಿಗೆ ಹಾಲು ಹಾಕಬೇಕೆಂದುಕೊಂಡೆ ಆದರೆ ಹಾಲಿರಲಿಲ್ಲ. ಅಡುಗೆ ಮನೆಗೆ ಬಂದರೆ ನಾನು ಊಟ ಮಾಡದೆ ಮಿಕ್ಕಿದ ಅಡುಗೆ ಬಾಕಿಇತ್ತು.  ಆ ಅಡುಗೆಯನ್ನೇ ನಾಯಿಮರಿಗೆ ಹಾಕಿದೆ ,ಎಷ್ಟೊ ದಿನದ ನಂತರ ಊಟ ಕಂಡಂತೆ ನಾಯಿಮರಿ ಅನ್ನವನ್ನು ತಿನ್ನುತ್ತಿತ್ತು. ಕುಂಟು ಹಾಕುತ್ತಿರುವ ನಾಯಿಯನ್ನು ಮಳೆಯಲ್ಲಿ ಹೊರಗೆ ಬಿಡುವುದು ಸರಿಯೆನಿಸಲಿಲ್ಲ.ಒಂದು ಗೋಣಿಚೀಲವನ್ನು ಕೊಟ್ಟು ನನ್ನ ರೂಮಿನ ಒಂದು ಮೂಲೆಯಲ್ಲಿ ಮಲಗಿಸಿದೆ. ಸೂಸೈಡ್ ಮಾಡಿಕೊಳ್ಳುವ ಭರದಲ್ಲಿದ್ದ ನನಗೆ  ಆ ಕ್ಷಣದ ಉದ್ವೇಗವೂ ಅಥವಾ ನನ್ನ ವಿವೇಕಶೂನ್ಯತೆಗೋ  ನಾನು  ತೆಗೆದುಕೊಂಡಿದ್ದ ನಿರ್ಧಾರ ತಪ್ಪು ಎನಿಸಿತು.
ಸುಸ್ತಾಗಿದ್ದ ನಾನು ನಾಯಿಮರಿಯನ್ನು ನೋಡುತ್ತ ನೋಡುತ್ತಲೇ ನಿದ್ದೆಗೆ ಜಾರಿದ್ದೆ. ಮಾರನೆಯ ದಿನ ಎಚ್ಚರಗೊಂಡಾಗ ಗೋಣಿಚೀಲ ಇದ್ದ ಜಾಗದಲ್ಲಿ ನಾಯಿಮರಿ ಇರಲಿಲ್ಲ. ಕೂಡಲೇ ಗಾಬರಿಗೊಂಡು ರೂಮಿನ ಎಲ್ಲೆಡೆ ಹುಡುಕಿದೆ  ಮತ್ತೆ ಕುಯ್ಯಿ ಕುಯ್ಯಿ ಎನ್ನುವ ಶಬ್ದ, ಹಾಸಿಗೆಯತ್ತ ನೋಡುತ್ತೇನೆ ನಾಯಿಮರಿ ನನ್ನ ಹಾಸಿಗೆಯಲ್ಲೇ ಪಕ್ಕದಲ್ಲಿ ಮಲಗಿತ್ತು.
ನಾಲ್ಕು ದಿನದ ನಂತರ ಮೊದಲನೇ ಬಾರಿ ನಾನ್ನ ಮುಖದಲ್ಲಿ ನಗು ಮೂಡಿತ್ತು.”ಎಲಾ ಕಳ್ಳ” ಇಲ್ಲೇ ಇದ್ದೀಯಾ ಎನ್ನುತ್ತಾ ನಾಯಿಮರಿಯನ್ನು ಎತ್ತಿ ಗೋಣಿಚೀಲದ ಮೇಲೆ ಮಲಗಿಸಿದೆ. ಕುಂಟುತ್ತಿದ್ದ ನಾಯಿಗೆ ಬ್ಯಾಂಡೆಡ್ ಮಾಡಿಸಿದೆ. ನಾಯಿಗೆ ಹಾಲು ಬಿಸ್ಕೆಟ್ ಕೊಟ್ಟೆ , ಇಷ್ಟಪಟ್ಟು ಹಾಲನ್ನು ಕುಡಿದು ,ನನ್ನ ಕಾಲನ್ನು ನೆಕ್ಕತೊಡಗಿದ.
ಅಂದು ಮಾರ್ಚ್ 21 ಭಾರತದಲ್ಲೆಡೆ ಕೋವಿಡ್ 19 (ಕರೋನವೈರಸ್ )ವಿಪರೀತವಾಗಿ ಹರಡತೊಡಗಿತ್ತು. ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರು ಮಾರ್ಚ್ 22 ರಂದು ದೇಶದ ಜನತೆಗೆ ಜನತಾ ಕರ್ಫ್ಯೂ ಆಚರಿಸಲು ಮನವಿ ಮಾಡಿಕೊಂಡರು.
“ಎಲ್ಲೆಡೆ ಕರೋನಾ ರೋಗ ಹರಡುತ್ತಿದ್ದು ಕೂಡಲೇ ನೀನು ಮೈಸೂರಿನಿಂದ ಹೊರಟು ಮನೆಗೆ ಬಾ”ಎಂದು ಅಮ್ಮ ನನಗೆ  ಮಂಗಳೂರಿಗೆ ಬರಹೇಳಿದಳು. ಒಂದೆಡೆ ಮರೆಯಲು ಎಷ್ಟೇ ಪ್ರಯತ್ನಿಸಿದರೂ ಭಾರ್ಗವಿಯ ನೆನಪನ್ನು ಮರೆಯಲಾಗುತ್ತಿರಲಿಲ್ಲ,  ಮನೆಗೆ ಹೋದರೆ ನನ್ನ ಮನಸ್ಸು ಸರಿಹೋಗಬಹುದು ಎಂದು ಯೋಚಿಸಿದರೆ,ಇನ್ನೊಂದೆಡೆ ಗಾಯಗೊಂಡ ನಾಯಿಮರಿಯನ್ನು  ಹೇಗೆ ಬಿಟ್ಟು ಹೋಗುವುದು ಎಂಬ ಗೊಂದಲ.
ಕೊನೆಗೆ ಏನೇ ಆಗಲಿ ನಾಯಿಮರಿಯನ್ನು ಮಂಗಳೂರಿಗೆ ಕರೆದುಕೊಂಡು ಹೋದರಾಯಿತು ಎಂದು ನಿರ್ಧರಿಸಿದೆ.ಟ್ರೈನನ್ನು ಬುಕ್ ಮಾಡಿದೆ. ಟ್ರೇನ್ನ ಕೆಳ ಸೀಟಿನಲ್ಲಿ ಒಂದು ಪುಟ್ಟ ಚೀಲದಲ್ಲಿ ನಾಯಿಮರಿಯನ್ನು ಮಲಗಿಸಿದೆ. ಮೂರ್ನಾಲ್ಕು ಬಾರಿ ಅಲ್ಲಿಂದ ಹೊರಬಂದು ತುಂಟಾಟಮಾಡುತ್ತಿತ್ತು ನಾಯಿಮರಿ. ಟ್ರೈನ್ ನಲ್ಲಿದ್ದ ಒಂದು ಅಂಕಲ್ ಅಂತೂ ನನಗೆ ಹಿಗ್ಗಾಮುಗ್ಗಾ ಬಯ್ಯ ತೊಡಗಿದ್ದರು.
ಅಂತೂ ಇಂತೂ ಯಶಸ್ವಿಯಾಗಿ ನಾಯಿ ಮರಿಯ ಜೊತೆಗೆ ಮನೆ ಸೇರಿದೆ .ನನ್ನ ಜೊತೆ ಬಂದ ಹೊಸ ಅತಿಥಿಯನ್ನು ನೋಡಿ ಅಪ್ಪ-ಅಮ್ಮನಿಗೆ ಆಶ್ಚರ್ಯವಾಯಿತು .ಮೈಸೂರಿನಿಂದ ಮಂಗಳೂರಿಗೆ ಟ್ರೇನ್ನಲ್ಲಿ ನಾಯಿಯನ್ನು ಕರೆತಂದದ್ದು ಸಾಹಸವೆಂದೇ ಬಿಂಬಿಸಿದರು.
ಮನೆಗೆ ಬಂದ ಹೊಸ ಅತಿಥಿಗೆ ಭಾಗಿ ಎಂದು ನಾಮಕರಣವಾಯಿತು. ಪ್ರೀತಿಸಿದ ಭಾರ್ಗವಿಯ ನೆನಪಿಗಾಗಿ ಇರಬಹುದು ಈ ಹೆಸರೇ ಸೊಕ್ತ ಎನಿಸಿತು. ಒಂದೇ ವಾರದಲ್ಲಿ ಭಾಗಿ ನನ್ನ ತಂದೆ ತಾಯಿಯರ ಮನಸ್ಸನ್ನು ಗೆದ್ದಿದ್ದ. ಕುಂಟುತ್ತಿರುವ ಕಾಲು ಗುಣವಾಗ ತೊಡಗಿದವು.ನನಗೇ ತಿಳಿಯದೇ
ಭಾಗಿಯನ್ನು ನಮ್ಮ ಮನೆಯ ಸದಸ್ಯನಾಗಿ ಸ್ವೀಕರಿಸಿದ್ದೆ.
ಭಾಗಿಯ ತುಂಟಾಟಗಳು ನನಗೆ ಭಾರ್ಗವಿಯ ಬ್ರೇಕ್ ಅಪ್ ನ ದುಃಖವನ್ನು ಮರೆಸುತ್ತಿತ್ತು. ಭಾಗಿಯ ಜೊತೆ ಒಂದು ತಿಂಗಳು ಕಳೆದಿದ್ದೆ ಗೊತ್ತಾಗಲಿಲ್ಲ. ಭಾಗಿಗೆ ನಿತ್ಯವೂ ನನ್ನ ಟ್ರೈನಿಂಗ್ ನಡೆಯತೊಡಗಿತು. ಜಂಪ್ ಮಾಡುವುದು ,ಬಾಲ್ ಕ್ಯಾಚ್ ಮಾಡುವುದು, ಆರ್ಡರ್ಸ್ಗಳನ್ನು ಫೊಲೋ ಮಾಡುವುದು , ಇತ್ಯಾದಿ ಚುರುಕಿನ ಚಿರತೆ ಯಂತಿರುವ ಭಾಗಿ ಎಲ್ಲವನ್ನೂ ಬೇಗ ಬೇಗ ಕಲಿಯುತ್ತಿದ್ದ. ಯಾರಾದರೂ ನನ್ನ ಭಾಗಿ ಯನ್ನು ನಾಯಿ ಎಂದು ಸಂಭೋದಿಸಿದರೆ ಕೋಪವೇ ಬರು ಬರುತ್ತಿತ್ತು.
ನನ್ನ ಪಕ್ಕದಲ್ಲೇ ಸೋಫಾದಲ್ಲಿ ಕೂತು ಟೀವಿ ನೋಡುತ್ತಿದ್ದ. ಮನುಷ್ಯರು ಟಿವಿ ನೋಡುವಂತೆ ತಲ್ಲೀನನಾಗಿ ಟಿವಿ ನೋಡುವುದರಲ್ಲಿ ಭಾಗಿ ನಿಸ್ಸೀಮ. ಚಾನಲ್ ಚೇಂಜ್ ಮಾಡಿದರೆ ನಮ್ಮೆಡೆಗೆ ತಿರುಗಿ ಗುರಾಯಿಸುತ್ತಿದ್ದ. ನಾನು ಬೆಳಿಗ್ಗೆ ಎದ್ದ ತಕ್ಷಣ ಮನೆಯ ಬಾಗಿಲು ತೆಗೆದರೆ ಎಲ್ಲೇ ಇದ್ದರೂ ಓಡಿ ಬರುತ್ತಿದ್ದ ಭಾಗಿ ನನ್ನ ಸೊಂಟದ ಮೇಲೆ ಹಾರಿ ಹೊಟ್ಟೆಗೆ ಗುದ್ದುತ್ತಿದ್ದ. ಅದು ಅವನ ನಿತ್ಯದ ಹವ್ಯಾಸವಾಗಿತ್ತು.
ಎಷ್ಟೋ ಸಾರಿ, ಸೋಫಾ ಕೆಳಗಡೆ ಮೂತ್ರವನ್ನು ಮಾಡಿದ ಭಾಗಿಗೆ ಹಾಗೂ ಭಾಗಿಯ ಲವರ್  ನನಗೆ ಅಮ್ಮನಿಂದ  ಸಹಸ್ರನಾಮಾರ್ಚನೆ ಆಗಿದ್ದೂ ಉಂಟು. ಮನೆಯ ಗೇಟ್ ಎದುರು ಯಾರೇ ಬಂದರೂ ಭಾಗಿಯ ಕೂಗಿಗೆ ಮನೆಯೊಳಗೆ ಬರಲು ಹೆದರುತ್ತಿದ್ದರು. ಮನೆಯ ಹೊರಗಿರುವ ಗಾರ್ಡನ್ ಭಾಗಿಯ ರಾಜ್ಯವಾಗಿತ್ತು. ಈ ಮೂರು ತಿಂಗಳಲ್ಲಿ ಬಾಗಿಯ ತುಂಟಾಟವನ್ನು ನೋಡುತ್ತಾ ನನ್ನ ನೋವನ್ನು ಸಂಪೂರ್ಣ ಮರೆತಿದ್ದೆ.  ಸ್ವಾರ್ಥಿಯಾದ ಮನುಷ್ಯನನ್ನು ಪ್ರೀತಿಸುವ ಬದಲು ನಿಸ್ವಾರ್ಥಿಯಾದ ಮುಗ್ಧ ಮೂಕಪ್ರಾಣಿಯ ಪ್ರೀತಿಯೇ ಮಿಗಿಲು ಎಂದು ನಾನು ಪಾಠ ಕಲಿತಿದ್ದೆ.
ಒಂದು ದಿನ ಅಪ್ಪನ ಸ್ಲಿಪ್ಪರ್ ಅನ್ನು ಆಟವಾಡಿ ಹರಿದಿದ್ದ .ಕೋಪಗೊಂಡ ನಾನು ಒಂದು ಏಟನ್ನು ಹೊಡೆದೆ .ಮೊದಲ ಸಾರಿ ನನ್ನಿಂದ ಹೆದರಿ ಓಡಿಹೋಗಿ ಮೂಲೆಯಲ್ಲಿ ಕೂತಿದ್ದ .ಅವನ ಮುಗ್ಧತೆಯನ್ನು ನೋಡಿ ನನಗೆ ನನ್ನ ಮೇಲೆ ಬೇಜಾರಾಯಿತು .ಅಂದು ಅವನನ್ನು ಪುನಃ ಸಂತೈಸಲು ಪರದಾಡಿದೆ. ಅದೇ ಮೊದಲು ಅದೇ ಕೊನೆ ಭಾಗಿಗೆ ಮತ್ತೆಂದೂ ಹೊಡೆದಿಲ್ಲ.
ನಾನು ಜಾಬ್ ಇಂಟರ್ವ್ಯೂ ಗಾಗಿ ಮೈಸೂರಿಗೆ ಹೋಗಬೇಕಾಗಿತ್ತು, ಮೂರು ದಿನಗಳ ಜರ್ನಿಗಾಗಿ ಬ್ಯಾಗ್ ಗಳೆಲ್ಲ ರೆಡಿಯಾಯಿತು ಮನೆಯಿಂದ ಹೊರಡುವಾಗ ತಂದೆ ತಾಯಿಯ ಆಶೀರ್ವಾದ ಪಡೆದು ,ಭಾಗಿಯನ್ನೊಮ್ಮೆ ಮುದ್ದಿಸಿ ,ಅವನೊಂದಿಗೆ ಆಟವಾಡಿ ಬ್ಯಾಗನ್ನು ಹೆಗಲಿಗೇರಿಸಿ ಹೊಸ ಹುರುಪಿನೊಂದಿಗೆ ಮೈಸೂರಿಗೆ ಹೊರಟೆ.
ರಾತ್ರಿ ಮೈಸೂರು ತಲುಪಿದೆ .ಮರುದಿನ ಮನೆಗೆ ಕಾಲ್ ಮಾಡಿದರೆ ಭಾಗಿಯದೇ ಸುದ್ದಿ .ನಾನು ಹೋದಾಗಿಂದ ಗೇಟ್ ನಡೆಗೆ ನೋಡುತ್ತಿದ್ದಾನಂತೆ, ಊಟ ಹಾಕಿದರೆ ಊಟವನ್ನು ತಿನ್ನುತ್ತಿಲ್ಲ  ಎಂದು ಅಮ್ಮನ ಪುಕಾರು. ಅಯ್ಯೋ ಪಾಪ ಎನಿಸಿತು.
ಇಂಟರ್ವ್ಯೂ ಚೆನ್ನಾಗಿ ಆಯ್ತು. ಕಂಪನಿಯವರು ಜಾಬ್ ಕನ್ಫಾರ್ಮ್ ಎನ್ನುತ್ತಲೇ ನನಗೆ ಎಲ್ಲಿಲ್ಲದ ಖುಷಿ. ಕೋವಿಡ್೧೯  ಇರುವ ಕಾರಣ ವರ್ಕ್ ಫ್ರಂ ಹೋಮ್ ಆಪ್ಷನ್ ನೀಡಿದರು ಅದನ್ನು  ಒಪ್ಪಿಕೊಂಡೆ. ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ, ಅಮ್ಮ ತುಂಬಾ ಸಂತಸಗೊಂಡರು. ಹಾಗೆ ಮೈಸೂರಿನಿಂದ ಹೊರಟೆ ಮಂಗಳೂರಿಗೆ.
ಮನೆಯ ಗೇಟ್ ತೆರೆಯುತ್ತಿದ್ದಂತೆ ಕುಟು ಕುಟು, ಕುಟು ಕುತ್ತಾ ಓಡೋಡಿ ಬಂದ ಭಾಗಿ ಎತ್ತರಕ್ಕೆ ಜಿಗಿದು ನನ್ನ ಹೊಟ್ಟೆಗೆ ಗುದ್ದಿದ. ಅವನ ಮೈದಡವಿದಾಗ ಮಗುವಿನಂತೆ ಕಾಲ ಮೇಲೆ ಮಲಗಿದ. ಅಮ್ಮ ಮೊದಲು ಅವನಿಗೆ ಊಟ ಹಾಕು  ಮೂರು ದಿನದಿಂದ ಏನನ್ನೂ ತಿಂದಿಲ್ಲ ಎಂದಳು. ಕೂಡಲೇ ಊಟವನ್ನು ತಂದು ಹಾಕಿದೆ. ಅವನು ಊಟವನ್ನು ತಿನ್ನುವ ಭರವನ್ನು ನೋಡಿ ಮಳೆಯಲ್ಲಿ ಒದ್ದೆಯಾಗಿ ಬಂದಿದ್ದ ಕುಂಟು ನಾಯಿ ಮರಿ ಊಟ ಮಾಡಿದ್ದು ನೆನಪಿಗೆ ಬಂತು.ಇಷ್ಟು ಮುಗ್ಧ ನನ್ನ ಭಾಗಿ.
ಒಳ್ಳೆಯ ಜಾಬ್ ಪಡೆದಿದ್ದೆ .ಬ್ರೇಕಪ್ ನಿಂದ ಹೊರಬಂದು ನಾರ್ಮಲ್ ಲೈಫ್ಗೆ ಹಿಂತಿರುಗಿದ್ದೆ.ಒಮ್ಮೆ ಸ್ವಲ್ಪ ದೊಡ್ಡ ಬ್ಯಾಗನ್ನು ಹಿಡಿದು ಮನೆಯಿಂದ ಹತ್ತು ಕಿಲೋಮೀಟರ್ ದೂರವಿರುವ ಮಂಗಳೂರು ಸಿಟಿ ಗೆ ಹೊರಟಿದ್ದೆ.ಮನೆಯಿಂದ  ಸುಮಾರು ಬೈಕಿನಲ್ಲಿ ಐದು ಕಿಲೋಮೀಟರ್ ಬಂದಿರಬಹುದು ಮಿರರ್ ನಲ್ಲಿ ನೋಡುತ್ತೇನೆ ಹಿಂದೆ ಭಾಗಿ ಓಡುತ್ತಾ ಬರುತ್ತಿದ್ದಾನೆ.
ನಾನು ಮತ್ತೆ ದೂರ ಹೊರಡುತ್ತಿದ್ದೇನೆ ಎಂದು ತಿಳಿದು ಭಾಗಿ ನನ್ನನ್ನು ಹಿಂಬಾಲಿಸಿದ್ದ .ಗಾಡಿಯಿಂದ ಇಳಿದು “ಅಯ್ಯೋ ಹುಚ್ಚ” ಎನ್ನುತ್ತಾ ಭಾಗಿ ಯನ್ನು ಎತ್ತಿಕೊ ಮನೆಗೆ ಬಿಟ್ಟು ಬಂದೆ. ಅಲ್ಲಿಂದ ನಂತರ ನಾನು ಮನೆಯಿಂದ ಹೊರಟರೆ ಅವನು ನನ್ನ ಬ್ಯಾಗನ್ನು ,ನನ್ನನ್ನು ದುರುಗುಟ್ಟಿ ಸ್ಕ್ಯಾನ್ ಮಾಡುತ್ತಿದ್ದ.
ಆದರೆ ನವೆಂಬರ್ನಲ್ಲಿ ವರ್ಕ್ ಫ್ರಂ ಹೋಮ್ ಕ್ಯಾನ್ಸಲ್ ಆಯ್ತು ಮೈಸೂರಿನ ಹೆಡ್ ಆಫೀಸ್ ಅಲ್ಲಿ ವರ್ಕ್ ಮಾಡುವಂತೆ ಈಮೇಲ್ ಬಂತು. ನಾನು ಪುನಃ ಮೈಸೂರಿಗೆ ಹೋಗಬೇಕಾಯಿತು.ನಾನಿಲ್ಲದಿದ್ದರೆ ಭಾಗಿ ಊಟ ಮಾಡುವುದಿಲ್ಲ ಎಂಬುದನ್ನು ತಿಳಿದಿದ್ದ ನಾನು ಈ ನಡುವೆ ಬಾಗಿಗೆ ಊಟವನ್ನು ನಾನು ನೀಡದೆ ಅಮ್ಮನಿಂದಲೇ ಕೊಡಿಸುತ್ತಿದ್ದೆ. ಅದಕ್ಕೆ ಬಾಗಿ ಹೊಂದಿಕೊಂಡಿದ್ದ.
ಅಂತೂ ಇಂತೂ ಭಾಗಿಯ ಕಣ್ಣುತಪ್ಪಿಸಿ ಮೈಸೂರು ತಲುಪಿದೆ. ನಾನಿಲ್ಲದೆ ಭಾಗಿ ಸ್ವಲ್ಪ ವಿಚಲಿತನಾಗಿದ್ದರೂ ಈ ಸಾರಿ ಊಟವನ್ನು ಮಾಡುತ್ತಿದ್ದನಂತೆ. ಮನೆಗೆ ವಿಡಿಯೋ ಕಾಲ್ ಮಾಡಿದರೆ ಸೋಫಾ ಮೇಲೆ ಕುಳಿತಿದ್ದ ನಮ್ಮ ಭಾಗಿ ಸಾಹೇಬರು ಎರಡು ಕಾಲನ್ನೆತ್ತಿ ಕುದುರೆಯಂತೆ ನರ್ತಿಸುತ್ತಿದ್ದರು.
ಆದರೆ ಒಂದು ದಿನ ಆಫೀಸಿನಲ್ಲಿ ಇರುವಾಗ ಅಮ್ಮನ ಕಾಲ್ ಬಂತು .ಅಮ್ಮ ತುಂಬಾ ಭಯಗೊಂಡಿದ್ದಳು. ಕಾರಣ ಕೇಳಿದರೆ ಭಾಗಿ ಹಂದಾಡುತ್ತಿಲ್ಲ, ನಾನು ಕೂಡ ಒಮ್ಮೆ ಶಾಕ್ ಆದೆ .ವೀಡಿಯೋ ಕಾಲ್ ಮಾಡಿ ನೋಡಿದರೆ ,ಮನೆಯ ಬಾಗಿಲಿನ ಮೆಟ್ಟಿಲ ಮೇಲೆ ಬಾಗಿ  ಮಲಗಿತ್ತು .ನನ್ನ ಧ್ವನಿಯನ್ನು ಕೇಳಿಯೂ ಬಾಗಿ ಮೊದಲಬಾರಿ ಸ್ಪಂದಿಸುತ್ತಿರಲಿಲ್ಲ.
ಆದರೆ ಭಾಗಿಯ ಕಣ್ಣಿನಿಂದ ನೀರು ಸುರಿಯುತ್ತಿದ್ದವು. ಕೂಡಲೇ ಅಪ್ಪನಿಗೆ ಹಾಸ್ಪಿಟಲ್ಗೆ ಕರೆದುಕೊಂಡು ಹೋಗುವಂತೆ ತಿಳಿಸಿದೆ. ರಜೆ ತೆಗೆದುಕೊಂಡು ,ನಾನು ಮನೆಗೆ ಬಂದೆ. ಗೇಟ್ ಬಾಗಿಲು ತೆಗೆದಾಗ ಯಾವಾಗಲೂ ಓಡಿಬಂದು ಗುದ್ದುತ್ತಿದ್ದ ಭಾಗಿ ಅಂದು ಬರಲೇ ಇಲ್ಲ. ತುಂಬ ವಿಚಲಿತನಾದ ನಾನು ಬಾಗಿ ಇದ್ದ ಕಡೆ ಓಡಿಬಂದೆ ,ಭಾಗಿ ಗಾಡ ನಿದ್ದೆಯಲ್ಲಿದ್ದ .ಅಪ್ಪನಲ್ಲಿ ಕೇಳಿದಾಗ ಇಂಜೆಕ್ಷನ್ ಮಾಡಿದ್ದಾರೆಂದು ತಿಳಿಸಿದ .
ಭಾಗಿ ಯನ್ನು ಕೈಯಲ್ಲಿ ಎತ್ತಿಕೊಂಡು ಮೈದಡವಿದೆ.ಆದರೆ ಭಾಗಿ ತುಟುಕ್ ಪಿಟುಕ್ ಎನ್ನಲಿಲ್ಲ.ಭಯವಾಯಿತು, ಭಾಗಿ ಕಣ್ಣೇ ತೆರೆಯಲಿಲ್ಲ ಯಾವ ಆರ್ಡರ್ ಮಾಡಿದರೂ ಫಾಲೋಮಾಡುತ್ತಿರಲಿಲ್ಲ.ಬಾಲವನ್ನು ಸ್ವಲ್ಪವೂ ಅಲ್ಲಾಡಿಸುತ್ತಿರಲಿಲ್ಲ. ಒಮ್ಮೆಲೆ ಉದ್ವೇಗಗೊಂಡು ಭಾಗಿ ಕಣ್ಣನ್ನು ತೆರೆಎಂದು ಕಿರುಚಿದೆ. ಆದರೆ ಭಾಗಿ ಚಿರನಿದ್ರೆಗೆ ಜಾರಿದ್ದ.
ಭಾಗಿ ಯನ್ನು ಎದೆಗೆ ಬಿಗಿದಪ್ಪಿಕೊಂಡು ಮೈಯೆಲ್ಲ ತಡವಿದೆ ,ಎಡೆಬಿಡದೆ ಕಣ್ಣೀರು ಸುರಿಯುತ್ತಿತ್ತು. ದುಃಖದಲ್ಲೇ ಅಪ್ಪನೊಂದಿಗೆ ಭಾಗಿಯ ದೇಹವನ್ನೇನೊ ಮಣ್ಣು ಮಾಡಿದೆ .ಆದರೆ ಬಾಗಿಯ ನೆನಪುಗಳನ್ನು ಮಣ್ಣು ಮಾಡಲು ನನ್ನಿಂದ ಇನ್ನೂ ಸಾಧ್ಯವಾಗುತ್ತಿಲ್ಲ. ಮನೆಯ ಒಳಗೆ ಹೋದರೆ ಬರಿದಾದ ಸೋಫಾ, ಹೊರಬಂದರೆ ಬರಿದಾದ ಗಾರ್ಡನ್ ದುಃಖ ಹೆಚ್ಚಿಸುತ್ತಿದ್ದವು. ಅಪ್ಪ-ಅಮ್ಮ ನನ್ನನ್ನು ಸಮಾಧಾನಗೊಳಿಸಿದರು.
ಬ್ರೇಕ್ ಅಪ್ ಗಿಂತ ಹತ್ತು ಪಟ್ಟು ಹೆಚ್ಚಿನ ದುಃಖದಲ್ಲಿ ಈಗ ನಾನು ಮುಳುಗಿದ್ದೆ.ಆದರೆ  ಭಾಗಿಯ ಜೊತೆಗಿದ್ದ ಸಂತಸ ಕ್ಷಣಗಳನ್ನು ನೆನಪಿಸಿಕೊಂಡು ಸಮಾಧಾನ ಪಡೆಯುತ್ತೇನೆ. ಇಂದಿಗೂ ನನ್ನ ಭಾಗಿ ಸತ್ತಿಲ್ಲ ನನ್ನ ನೆನಪಿನಂಗಳದಲ್ಲಿ ಜಿಗಿದಾಡುತ್ತಾ ಇರುತ್ತಾನೆ.
ಆದರೆ ನನಗೆ ಇಂದಿಗೂ ಕಾಡುತ್ತಿರುವ ಪ್ರಶ್ನೆ” ಆ ದಿನ ನನ್ನನ್ನು ಸಾವಿನ ದವಡೆಯಿಂದ ಪಾರು ಮಾಡಲೆಂದೇ ಭಾಗಿ ನನಗಾಗಿ ಬಂದಿದ್ದನೆ?ಅಥವಾ ನನ್ನ ಮೊರೆ ಕೇಳಿದ ದೇವರು ನನಗಾಗಿ ಭಾಗಿ ಯನ್ನು ಕಳುಹಿಸಿಕೊಟ್ಟನೇ?  ಹಾಗಿದ್ದರೆ ದೇವರು ನನ್ನಿಂದ ಭಾಗಿ ಯನ್ನು ದೂರ ಮಾಡಿದ್ದೇಕೆ? ಅಥವಾ ನಾನು ಪ್ರೀತಿಸಿದ ಪ್ರತಿಯೊಂದೂ ನನ್ನಿಂದ ದೂರವಾಗುವುದೇ ?????????????”
ನಿರಂಜನ ಹೆಗಡೆ

About the author

Adyot

Leave a Comment