ಆದ್ಯೋತ್ : ವಿಶೇಷ ಅಂಕಣ

ಕೊರೊನಾ ಮಹಾಮಾರಿ ವಿಶ್ವದಾದ್ಯಂತ ತನ್ನ ಆರ್ಭಟವನ್ನ ಮುಂದುವರಿಸಿದ್ದು, ರಾಜ್ಯದಲ್ಲೂ ಹೆಮ್ಮಾರಿ ತಾಂಡವವಾಡುತ್ತಿದೆ. ಜಿಲ್ಲೆಯ ಹಳ್ಳಿಗಳಲ್ಲಿ ಕೊರೊನಾ ವೇಗವಾಗಿ ಹಬ್ಬುತ್ತಿದ್ದು, ಇದರ ನಡುವೆಯೂ ಕೊರೊನಾ ಬಂದ 13 ಜನರ ಕುಟುಂಬವೊಂದು ಸಂಪೂರ್ಣ ಚೇತರಿಸಿಕೊಂಡಿದೆ.. ಹಾಗಿದ್ರೆ ಎಲ್ಲಿ ಇದು? ಹೇಗಿದೆ ಆ ಕುಟುಂಬ ಅನ್ನೋದನ್ನ ನೊಡೋಣ .‌…

ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ದಿನ ಕಳೆದಂತೆ ಹಲವಾರು ಹಳ್ಳಿಗಳು ಕಂಟೇನ್ಮೆಂಟ್ ಜೋನ್ ಗಳಾಗಿ ಬದಲಾಗುತ್ತಿವೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹುತ್ಗಾರ್ ಗ್ರಾಮದ ದತ್ತಾತ್ರೇಯ ಬೀರಾ ಗೌಡ ಅನ್ನೋ ರೈತಾಪಿ ಕುಟುಂಬದ 13 ಮಂದಿ ಸದಸ್ಯರು ಕೊರೊನಾ ಸೋಂಕು ತಗುಲಿ ಸಂಕಷ್ಟಕ್ಕೆ ಸಿಲುಕಿದ್ದರು. ಮೊದಲು ಮನೆಯ ಒಂದಿಬ್ಬರಲ್ಲಿ ಜ್ವರ ಕಾಣಿಸಿಕೊಂಡಿತ್ತಾದರೂ ಮನೆಯಲ್ಲಿ ಎರಡೆರಡು ಮದುವೆ ತಯಾರಿಯಲ್ಲಿದ್ದ ಕುಟುಂಬದ ಸದಸ್ಯರಿಗೆ ಜ್ವರ ಬಂದಿರೋದು ಲೆಕ್ಕಕ್ಕೆ ಇಲ್ಲದಂತಾಗಿತ್ತು. ಎಂದಿನಂತೆ ಮದುವೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಆದ್ರೆ ಎರಡ್ಮೂರು ದಿನ ಕಳೆದರೂ ಜ್ವರ ಕಡಿಮೆಯಾಗದ ಹಿನ್ನೆಲೆ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಬಳಿಕ ಮನೆಮಂದಿಯೆಲ್ಲ ಪರೀಕ್ಷೆ ಮಾಡಿಸಿದ್ದು, ಸೋಂಕಿನ ಲಕ್ಷಣವೇ ಇಲ್ಲದ 9 ಮಂದಿಗೆ ಸೋಂಕು ಇರುವುದು ಪರೀಕ್ಷೆ ವೇಳೆ ದೃಢಪಟ್ಟಿತ್ತು. ಅದರಲ್ಲಿ 7 ವರ್ಷದ ಬಾಲಕಿ ಕೂಡ ಸೇರಿದ್ದಳು.
ಇಷ್ಟೆಲ್ಲಾ ಆದ್ರೂ ಕೂಡ ಈ ಕುಟುಂಬ ಎದೆಗುಂದಲಿಲ್ಲ. ಧೈರ್ಯ ಕಳೆದುಕೊಳ್ಳದೆ ಬೇರೆಯವರಿಗೆ ಸ್ಫೂರ್ತಿಯಾಗೋ ದೃಢ ನಿರ್ಧಾರ ಮಾಡಿದ್ರು. ಬಳಿಕ ವೈದ್ಯರ ಸಲಹೆಯಂತೆ ಕೊಟ್ಟ ಮಾತ್ರೆ ಸೇವಿಸುತ್ತಾ ಯಾರ ಸಂಪರ್ಕಕ್ಕೂ ಬಾರದೆ ಮನೆಯಲ್ಲಿದ್ದ ಕುಟುಂಬದ ಸದಸ್ಯರು ಇದೀಗ ಸಂಪೂರ್ಣ ಗುಣಮುಖವಾಗಿದ್ದಾರೆ. ಕುಟುಂಬಕ್ಕೆ ಕೊರೊನಾ ಬಂದಿರುವುದು ಊರಲ್ಲಿ ಅಪಪ್ರಚಾರಕ್ಕೂ ಕಾರಣವಾಗಿತ್ತಂತೆ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕುಟುಂಬದ 13 ಮಂದಿ ಸದಸ್ಯರು ಚಿಕಿತ್ಸೆ ಪಡೆದ ವಾರದಲ್ಲಿಯೇ ಗುಣಮುಖರಾಗಿ 14 ದಿನದ ಕ್ವಾರಂಟೈನ್ ಕೂಡ ಮುಗಿಸಿದ್ದಾರೆ. ಅಲ್ಲದೆ ಮೇ. 13 ರಂದು ನಡೆಯಬೇಕಿದ್ದ ಮದುವೆಯನ್ನು ಕೂಡ ಅನಿವಾರ್ಯವಾಗಿ ಮುಂದೂಡಿದ್ದಾರೆ.

ಕೊರೊನಾಗೆ ಯಾರೂ ಭಯ ಪಡುವ ಅಗತ್ಯ ಇಲ್ಲ. ಯಾರೋ ಏನೋ ಹೇಳುತ್ತಾರೆ ಎಂಬ ಹಿಂಜರಿಕೆ ಕೂಡ ಬೇಡ. ಜ್ವರ, ಕೆಮ್ಮು ಹೀಗೆ ಯಾವುದೇ ರೋಗ ಲಕ್ಷಣ ಕಂಡು ಬಂದಲ್ಲಿ ಒಮ್ಮೆ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಿರಿ. ಇದರಿಂದ ನಿಮ್ಮ ಕುಟುಂಬಕ್ಕೆ ಒಳಿತು ಅಂತಾರೆ ಕುಟುಂಬದ ಸದಸ್ಯರು.
ಒಟ್ಟಿನಲ್ಲಿ ಹಳ್ಳಿಗಳಲ್ಲಿ ಕೆಲವರಿಗೆ ಕೊರೊನಾದ ಪರಿವೇ ಇಲ್ಲ. ಇನ್ನು ಕೆಲವರು ಕೊರೊನಾಕ್ಕೆ ಹೆದರಿ ಪರೀಕ್ಷೆ ಕೂಡ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಲವರಿಗೆ ಕೊರೊನಾ ಬಂದ್ರೆ ಕಥೆ ಮುಗಿತು ಅಂತ ಭಯದಿಂದಲೇ ಅರ್ಧ ಜೀವ ಹೋಗುತ್ತಿದೆ. ಇವೆಲ್ಲದರ ನಡುವೆ ಇದ್ಯಾವುದಕ್ಕೂ ಹೆದರದೆ ಕೊರೊನಾ ಬಂದ್ರೂ ಕೂಡ ಅದನ್ನ ಎದುರಿಸಿ ಮೆಟ್ಟಿ ನಿಂತ ಒಂದು ಕುಟುಂಬ ಎಲ್ಲರಿಗೂ ಮಾದರಿಯಾಗಿದೆ.
#####
ಶ್ರೀಧರ ಮದ್ದಿನಕೇರೆ

About the author

Adyot

Leave a Comment