ಆದ್ಯೋತ್ ಸಿನೇಮಾ ಸುದ್ದಿ:
ಬೆಳಗಾವಿಯ ತ್ರಿನೇತ್ರಾ ಸ್ಟುಡಿಯೋವತಿಯಿಂದ ನಿರ್ಮಾಣವಾಗಿರುವ ‘ಅನಾಮಿಕ’ ಕನ್ನಡ ಚಲನಚಿತ್ರ ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಸರ್ಟಿಫಿಕೇಟ್ ದೊರೆತಿದ್ದು ತೆರೆಗೆ ಬರಲು ಸಿದ್ಧವಾಗಿದೆ.
ಉತ್ತರ ಕರ್ನಾಟಕದ ಬೆಳಗಾವಿ,ವಿಜಯಪುರದ ಸುತ್ತಮುತ್ತವಲ್ಲದೆ, ಶಿರಸಿ ಸುತ್ತಮುತ್ತ, ಶಿರಸಿ ಕಾಡಿನಲ್ಲಿರುವ ಬೆಣ್ಣೆಗದ್ದೆ ಗ್ರಾಮಗಳಲ್ಲಿ ಒಟ್ಟು ೪೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಒಂದು ಪಟ್ಟಣದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವ ಮೂಢ ನಂಬಿಕೆಯನ್ನು ವಿರೋಧಿಸುವ ಗುಣದ ನಾಯಕ ತಾನು ಹಳ್ಳಿಯಲ್ಲಿ ಆಸ್ಪತ್ರೆಯನ್ನು ತೆರೆದು ಹಳ್ಳಿಯ ಜನಗಳ ಸೇವೆ ಮಾಡಬೇಕೆಂದು ಕನಸು ಕಟ್ಟಿಕೊಂಡಿದ್ದವ.ಅವನ ಗೆಳೆಯನ ಆಹ್ವಾನದಂತೆ ಹಳ್ಳಿಗೆ ಹೋಗಿ ಅವಿಭಕ್ತ ಕುಟುಂಬವಾಗಿದ್ದ ಗೆಳೆಯನ ಮನೆಯಲ್ಲಿ ಉಳಿದುಕೊಳ್ಳುತ್ತಾನೆ. ಹಳ್ಳಿಯ ಅವರ ಮನೆಯ ಸುತ್ತ ನಿಗೂಢ ಕೊಲೆಗಳಾಗುತ್ತಿರವುದರ ಬಗ್ಗೆ ಜನ ಮಾತನಾಡಿಕೊಂಡು ಆ ಕೊಲೆಗಳನ್ನು ಭೂತವೇ ಮಾಡುತ್ತಿದೆ ಎಂದು ನಂಬಿರುತ್ತಾರೆ. ಇಂಥವನ್ನೆಲ್ಲ ನಂಬದ ನಾಯಕ ಆ ಕೊಲೆಗಳ ಹಿಂದಿನ ರಹಸ್ಯ ಭೇದಿಸಲು ಹೊರಡುತ್ತಾನೆ. ಮುಂದೆ ಕೊಲೆಗಳನ್ನು ನಿಜವಾದ ಭೂತವೇ ಮಾಡುತ್ತಿತ್ತಾ ? ಅಥವಾ ಬೇರೆ ಕಾರಣ ಸಿಕ್ಕಿತಾ? ಅನ್ನುವಲ್ಲಿಗೆ ಚಿತ್ರ ಮುಕ್ತಾಯವಾಗುತ್ತದೆ. ಕಥೆಯ ಕುತೂಹಲ ತಣಿಸಿಕೊಳ್ಳಲು ಚಿತ್ರನೋಡಲೇ ಬೇಕು ಎನ್ನುತ್ತಾರೆನಿರ್ಮಾಪಕರಲ್ಲೊಬ್ಬರಾದ ಖಂಡೋಜಿಯವರು.
ತಾಂತ್ರಿಕವರ್ಗದಿಂದ ಹಿಡಿದು ಕಲಾವಿದರೂ ಉತ್ತರ ಕರ್ನಾಟಕದವರು ಎಂಬುದು ವಿಶೇಷ. ಸಂಭಾಷಣೆಯಲ್ಲಿ ಭಾಷೆಯ ಹಿಡಿತ, ಹಾಡುಗಳು ಚೆನ್ನಾಗಿವೆ. ಛಾಯಾಗ್ರಹಣ ಕೂಡ ಉತ್ತಮವಾಗಿದ್ದು ಕೊರೊನ ಹಾವಳಿ ಕಡಿಮೆಯಾದ ಮೇಲೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಿಸುವದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಬೆಳಗಾವಿಯ ಉತ್ಸಾಹಿ ಯುವಕರು ಸೇರಿ ಹೊಸ ಅಂಶಗಳನ್ನು ಒಳಗೊಂಡ ಚಲನಚಿತ್ರವನ್ನು ನಾವೂ ಯಾಕೆ ನಿರ್ಮಾಣ ಮಾಡಬಾರದು ಎಂದು ಕುತೂಲಕ್ಕೆ ಹೆಜ್ಜೆ ಹಾಕಿದ್ದೇ ಈ ಚಿತ್ರ ನಿರ್ಮಾಣಕ್ಕೆ ಕಾರಣ. ಈ ಚಿತ್ರಕ್ಕೆ ಸಾಕಷ್ಟು ಶ್ರಮವಹಿಸಿದ್ದೇವೆ. ಎಲ್ಲರೂ ಹೊಸಬರಾದ್ದರಿಂದ ಸ್ವಲ್ಪ ಹೆಚ್ಚೆ ತೊಂದರೆ ಅನುಭವಿಸಿ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿ ಯಶಸ್ವಿ ಚಿತ್ರವನ್ನು ನೀಡುತ್ತಿದ್ದೇವೆ ಎಂಬ ತೃಪ್ತಿ ನಮಗಿದೆ. ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಖಂಡಿತ ಯಶಸ್ವಿಯಾಗುತ್ತದೆ ಎಂದು ಚಿತ್ರ ತಂಡದ ಸದಸ್ಯರು ಹೇಳುತ್ತಾರೆ.
ತಾರಾಗಣದಲ್ಲಿ ವಿಜಯ, ಹರ್ಷ, ಪ್ರಸಾದ ,ಪ್ರೇಕ್ಷಾ ಮೊದಲಾದವರು ಅಭಿನಯಿಸಿದ್ದಾರೆ. ಸಂಗೀತ ಪ್ರಸನ್ನ ಭೋಜಶೆಟ್ಟರ, ಛಾಯಾಗ್ರಹಣ ಕುಮಾರ ಎಸ್ ಗೌಡ, ಗೀತರಚನೆ ಪ್ರವೀಣ ಸುತಾರ, ಲಕ್ಕಿ, ಸಂಕಲನ ಸಂಗಮೇಶ್ ಕಮತಿ, ಕಲಾ ನಿರ್ದೇಶನ ಇಂದ್ರಜಿತ್ ಜಾಧವ್, ವಸ್ತ್ರವಿನ್ಯಾಸ ಚಂದ್ರಸೇನ, ಪೂರ್ಣಿಮಾ ಕೆ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವಿರೇಶ ಹಂಡಗಿ,ಸಹಾಯಕ ನಿರ್ದೇಶಕರು ಗಂಗರಾಜ ಗೌಡರ, ರಘುಚಂದ್ರ ಬಿರಾದಾರ, ಕಥೆ,ಚಿತ್ರಕಥೆ,ಸಂಭಾಷಣೆಯ ಜೊತೆಗೆ ನಿರ್ದೇಶನವನ್ನು ಪ್ರವೀಣ ಸುತಾರ ಮಾಡಿದ್ದು , ಯುವ ಉತ್ಸಾಹಿ ನಿರ್ಮಾಪಕರಾದ ಖಂಡೋಜಿ ಯ ಹೈಬತ್ತಿ, ಶಿವಾನಂದ ದೊಡ್ಡಕುರಿ, ವಿಜಯ ಕಾಳಪ್ಪಗೋಳ ಚಿತ್ರವನ್ನು ನಿರ್ಮಿಸಿದ್ದಾರೆ.