ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅನಧಿಕೃತವಾಗಿ ವಾಸವಾಗಿದ್ದ ಪಾಕಿಸ್ತಾನದ ಖತೀಜಾ ಮೆಹರಿನ್ ಎನ್ನುವ ಮಹಿಳೆಯನ್ನು ಪೊಲೀಸ್ ರು ಬಂಧಿಸಿದ್ದಾರೆ.
ವೀಸಾ ಇಲ್ಲದೇ ಅಕ್ರಮವಾಗಿ ವಾಸವಾಗಿದ್ದು ಈಕೆ ಪಾಕಿಸ್ತಾನದ ರಾಷ್ಟ್ರೀಯತೆಯನ್ನು ಹೊಂದಿದ್ದಳು. ಸುಮಾರು 8 ವರ್ಷಗಳ ಹಿಂದೆ ಭಟ್ಕಳದ ನವಾಯತ ಕಾಲೋನಿಯ ಜಾವೀದ್ ಮೊಹಿದ್ದೀನ್ ರುಕ್ಕುದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿ, 2014ರಲ್ಲಿ 3 ತಿಂಗಳ ವಿಸಿಟಿಂಗ್ ವೀಸಾದ ಮೇಲೆ ಭಾರತಕ್ಕೆ ಬಂದು ವಾಪಸ್ಸಾಗಿದ್ದಳು.
2015ರಲ್ಲಿ ಕಳ್ಳ ಮಾರ್ಗದಲ್ಲಿ ಭಾರತಕ್ಕೆ ನುಸುಳಿ ಬಂದು ತನ್ನ ಗಂಡನ ಮನೆಯಾದ ಭಟ್ಕಳದ ನವಾಯತ ಕಾಲೋನಿಯಲ್ಲಿ ತನ್ನ 3 ಮಕ್ಕಳೊಂದಿಗೆ ಅಕ್ರಮವಾಗಿ ವಾಸವಾಗಿದ್ದಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.
ಭಟ್ಕಳದಲ್ಲಿ ಈಕೆಯು ಸುಳ್ಳು ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ರೇಷನ್ ಕಾರ್ಡ್, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಪಡೆದಕೊಂಡಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಈಕೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೆಲವು ತಿಂಗಳುಗಳಿಂದ ಸ್ಥಳೀಯ ಪೊಲೀಸರು ಇತರ ತನಿಖಾ ಸಂಸ್ಥೆಯ ಸಹಕಾರದೊಂದಿಗೆ ಪತ್ತೆಗೆ ಸತತವಾಗಿ ಪ್ರಯತ್ನಿಸಿ, ಅಕ್ರಮವಾಗಿ ವಾಸವಾಗಿದ್ದ ಈಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈಕೆಯ ಮೇಲೆ ವಿದೇಶಿ ಕಾಯಿದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸ್. ಪಿ. ಶಿವಪ್ರಕಾಶ್ ದೇವರಾಜು, ಎಎಸ್ ಪಿ ಬದರಿನಾಥ, ಭಟ್ಕಳ ಡಿವೈಎಸ್ ಪಿ ಬೆಳ್ಳಿಯಪ್ಪ ಕೆ.ಯು. ಹಾಗೂ ಸಿಪಿಐ ದಿವಾಕರ ಪಿ.ಎಮ್ ಅವರ ಮಾರ್ಗದರ್ಶನ ಹಾಗೂ ಸೂಚನೆಯ ಮೇರೆಗೆ ಭಟ್ಕಳ ನಗರ ಪೊಲೀಸ್ ಠಾಣಿಯ ಪಿಎಸ್ಐ ಸುಮಾ ಬಿ. ಮತ್ತು ಸಿಬ್ಬಂದಿ ನಾರಾಯಣ ನಾಯ್ಕ, ಮುಗ್ದುಂ ಪತ್ತೆಖಾನ್, ಲೋಕಪ್ಪ ಪತ್ತಿ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಹೀನಾ ಎಫ್. ಮುಂತಾದವರು ಭಾಗವಹಿಸಿದ್ದರು.