ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ “ಅರಣ್ಯ ಇಲಾಖೆ ಪೋಕಸ್-2” ಅರಣ್ಯ ಇಲಾಖೆಯ ಅವೈಜ್ಞಾನಿಕ ನೀತಿಯಿಂದ ಪರಿಸರ ಮೌಲ್ಯ ನಾಶದ ಚಿತ್ರಣ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವೀಂದ್ರ ನಾಯ್ಕ, ಅರಣ್ಯ ಇಲಾಖೆಯ ವಿವಿಧ ಕಾಮಗಾರಿಗಳ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಇತ್ತೀಚಿನ ಐದು ವರ್ಷಗಳಲ್ಲಿ ಜಿಲ್ಲಾದ್ಯಂತ ಒಂದು ಲಕ್ಷಕ್ಕೂ ಮಿಕ್ಕಿ ಬೆಲೆ ಬಾಳುವ ಗಿಡ, ಮರ ಕಡಿದು, ಕೋಟ್ಯಾಂತರರೂ. ಅರಣ್ಯ ಪರಿಸರ ಮೌಲ್ಯ ನಾಶಕ್ಕೆ ಅರಣ್ಯ ಇಲಾಖೆ ಜವಾಬ್ದಾರವಾಗಿದೆ. ಇಂತಹ ಪರಿಸರ ವಿರೋಧಿ ಅವೈಜ್ಞಾನಿಕ ಪದ್ದತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾದ್ಯಂತ ದಟ್ಟ ಅರಣ್ಯ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಬೆಲೆ ಬಾಳುವ ಗಿಡ, ಮರ ನಾಶಪಡಿಸಿ ಗಿಡ, ಮರಗಳನ್ನು ಕೆರೆಯ ದಡಕ್ಕೆ ಹಾಕಿ, ಅದರ ಮೇಲೆ ಕೆರೆಯ ಮಣ್ಣಿನಿಂದ ಮುಚ್ಚಿ, ಮರ ಕಡಿದ ಸಾಕ್ಷ್ಯ ನಾಶಪಡಿಸಲಾಗುತ್ತಿದೆ,ಅರಣ್ಯ ಇಲಾಖೆಯ ಈ ಕಾರ್ಯವು ಕಾನೂನು ಬಾಹಿರ ಮತ್ತು ಶಿಕ್ಷಾರ್ಹವಾಗಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಅರಣ್ಯ ಪ್ರದೇಶದಲ್ಲಿನ ಒಟ್ಟು ಕಾಮಗಾರಿಕೆ ಕ್ಷೇತ್ರವನ್ನು ಅರಣ್ಯ ಸಾಂದ್ರತೆಯ ಅನುಪಾತಕ್ಕೆ ಹೋಲಿಸಿದಾಗ ಸುಮಾರು ಒಂದು ಲಕ್ಷ ಗಿಡ, ಮರ ನಾಶವಾಗಿರಬಹುದು ಎಂದು ಅಂದಾಜಿಸಲಾಗಿದೆ. ಪ್ರತಿ ವರ್ಷವೂ ಸಾವಿರಾರು ಮೀಟರ್ ಉದ್ದದ ಪ್ರಾಣಿಗಳ ನಿರ್ಭಂಧಕ್ಕೆ (ಏಪಿಟಿ ಅಳತೆಯ) ಹಾಗೂ ಮಾಲ್ಕಿ ಮತ್ತು ಅರಣ್ಯ ಗಡಿ ಗುರುತಿಸುವಿಕೆಗೆ (ಇಪಿಟಿ ಅಳತೆಯ) ಅಗಳಗಳನ್ನು ಹಾಗೂ ವಿಧ, ವಿಧವಾದ ವಿಶಾಲವಾದ ಅಳತೆಯ ಪ್ರತಿ ವರ್ಷ ಸುಮಾರು 300 ಕ್ಕೂ ಮಿಕ್ಕಿ ಕೆರೆಗಳನ್ನು ಜಿಲ್ಲಾದ್ಯಂತ ಅರಣ್ಯ ಪ್ರದೇಶದಲ್ಲಿನ ಗಿಡ, ಮರ ಇರುವ ಸ್ಥಳದಲ್ಲಿಯೇ ತೆಗೆಯುವುದರಿಂದ, ಅರಣ್ಯನಾಶಕ್ಕೆ ನೇರವಾಗಿ ಇಲಾಖೆಯೇ ಕಾರಣವಾಗಿದೆ ಎಂದು ಅಪಾದಿಸಿದ ರವೀಂದ್ರ ನಾಯ್ಕ, ಇಂತಹ ಘಟನೆಗಳು ಜಿಲ್ಲಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುವುದನ್ನು ಹೋರಾಟಗಾರರ ವೇದಿಕೆಯು ಈ ಕಾಮಗಾರಿಗೆ ಸಂಬಂಧಿಸಿದ ಪ್ರದೇಶದಲ್ಲಿ ಮರ, ಗಿಡಗಳನ್ನು ಕಡಿದ ನಿದರ್ಶನಗಳನ್ನು ಸಾಕ್ಷ್ಯ ಗೊಳಿಸಲಾಗಿದೆ. ಅರಣ್ಯ ವಾಸಿಗಳಿಗೆ ಹಿಂಸಿಸುವ ಅರಣ್ಯ ಇಲಾಖೆಯ ಪರಿಸರ ವಿರೋಧಿ ಕಾರ್ಯ, ಸರಕಾರಕ್ಕೆ ಗೋಚರಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದೇ ಸಂದರ್ಭದಲ್ಲಿ,ಶಿರಸಿ ತಾಲೂಕ, ಹುಲೇಕಲ್ ವಲಯ, ಮೋಗದ್ದೆ ನಿರ್ಮಿಸಿದ ದಟ್ಟ ಅರಣ್ಯ ಪ್ರದೇಶದಲ್ಲಿ ಗಿಡ, ಮರಗಳನ್ನು ನಾಶಪಡಿಸಿ ಕೆರೆ ನಿರ್ಮಿಸಿದ ಚಿತ್ರಣ.ಶಿರಸಿ ತಾಲೂಕ, ಹುಲೇಕಲ್ ವಲಯ, ಮೋಗದ್ದೆ ನಿರ್ಮಿಸಿದ ದಟ್ಟ ಅರಣ್ಯ ಪ್ರದೇಶದಲ್ಲಿ ಗಿಡ, ಮರಗಳನ್ನು ನಾಶಪಡಿಸಿದ ಸಂದರ್ಭದಲ್ಲಿನ ಮರಗಳ ಕಟಾವಿನ ಚಿತ್ರ.ಲಕ್ಷಾಂತರ ಬೆಲೆ ಬಾಳುವ ಮರದ ದಿಬ್ಬಿನ ಮೇಲೆ ಕೆರೆಯ ಮಣ್ಣನ್ನು ಹಾಕಿ ಕೆರೆಯ ದಡವನ್ನು ನಿರ್ಮಿಸಿರುವ ಚಿತ್ರ,ಅರಣ್ಯ ಪ್ರದೇಶದ ಮಧ್ಯದಲ್ಲಿ ಕಾಲುವೆ ತೆಗೆದಿರುವುದು. ಇವೆಲ್ಲವನ್ನು ಬಿಡುಗಡೆಗೊಳಿಸಿದರು.
ಅವೈಜ್ಞಾನಿಕವಾಗಿ ಗಿಡ, ಮರ ಕಡಿಯುವ ಪ್ರವೃತ್ತಿ ಹಾಗೂ ಪರಿಸರಕ್ಕೆ ಪೂರಕವಲ್ಲದ ಸಸಿ ನೆಡುವ ಪದ್ದತಿ ನಿಲ್ಲಿಸದ್ದಿದ್ದಲ್ಲಿ ವೇದಿಕೆಯು ಅರಣ್ಯ ಪರಿಸರ ಮೌಲ್ಯ ನಾಶವಾಗುವುದನ್ನು ನಿಯಂತ್ರಿಸಲು ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.