ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ವಿದ್ಯಾನಗರದ ಮಹಿಳೆಯೊಬ್ಬರು ಅಕಾಲಿಕ ಮರಣ ಹೊಂದಿದ್ದು ಅವರ ಮಕ್ಕಳಾದ ರಕ್ಷಂದಾ ಹಾಗೂ ನಿಶಾಂತ ನಾಯ್ಕ ತಮ್ಮ ತಾಯಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ 8 ಜನರ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ ಅನ್ನೋ ಗಾದೆ ಮಾತನ್ನ ಎಲ್ಲರೂ ಕೇಳಿದ್ದೇವೆ ಅದೇ ರೀತಿ ಕೆಲವರು ಇದ್ದಾಗಲೂ ಹಲವಾರು ಜನರಿಗೆ ಸಹಾಯ ಮಾಡ್ತಾರೆ. ಸಾವಿನಲ್ಲೂ ತಮ್ಮ ಜೀವವನ್ನ ಬೇರೆಯವರಿಗೆ ಅರ್ಪಿಸಿ ಸಾವನ್ನೂ ಸಾರ್ಥಕ ಪಡಿಸಿಕೊಳ್ತಾರೆ.
ಶಿರಸಿಯ ವಿದ್ಯಾನಗರದ 54 ವರ್ಷದ ಎರಡು ಮಕ್ಕಳ ತಾಯಿಯಾದ ಸುನಂದಾ ಸತೀಶ ನಾಯ್ಕರಿಗೆ ಮೆದುಳಿನ ರಕ್ತಸ್ರಾವದಿಂದ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯ ICU ಸೇರಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ತಂದೆಯನ್ನು ಕಳೆದುಕೊಂಡ ಇವರ ಮಕ್ಕಳು ಇದೀಗ ತಾಯಿಯನ್ನು “ಬ್ರೈನ್ ಡೆಡ್ ” ಮೂಲಕ ಕಳೆದುಕೊಂಡಿದ್ದಾರೆ.
ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಂತಹ ದಾರುಣ ಪರಿಸ್ಥಿತಿಯಲ್ಲೂ ತಾಯಿಯ ಅಂಗಾಂಗಗಳನ್ನ ದಾನ ಮಾಡೋದಕ್ಕೆ ಒಪ್ಪಿಕೊಂಡು 8 ಜನರ ಜೀವ ಉಳಿಸುವ ಮೂಲಕ ರಕ್ಷಂದಾ ಹಾಗೂ ನಿಶಾಂತ್ ನಾಯ್ಕ್ ಮನುಕುಲಕ್ಕೆ ಮಾದರಿಯಾಗಿದ್ದಾರೆ.
ಈ ಮಕ್ಕಳ ದಿಟ್ಟ ಹೆಜ್ಜೆ ಜಗತ್ತಿಗೆ ಮಹತ್ ಪ್ರೇರಣೆಯೇ ಸರಿ, ಪ್ರತಿ ವರ್ಷ ಹೀಗೆ ದಾನ ಪಡೆಯಬಹುದಾದ ಅಂಗಾಂಗಗಳ ಕೊರತೆಯಿಂದ ಸಾವಿರಕ್ಕೂ ಹೆಚ್ಚು ಜನ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಇಂತಹ ಕೆಲಸಗಳು ಹೆಚ್ಚಾದಾಗ ಎಷ್ಟೋ ಜನರ ಜೀವ ಉಳಿಯುವುದರಲ್ಲಿ ಸಂಶಯವಿಲ್ಲ.