ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಮಳೆಯಿಂದಾಗಿ ಆದ ಹಾನಿಯ ಬಗ್ಗೆ ಪರಿಶೀಲಿಸಲು ಕೇಂದ್ರೀಯ ತಂಡ (IMTC) ಪಟ್ಟಣದ ಅಡಿಕೆ ಭವನದಲ್ಲಿ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಮುಲ್ಲೈಮುಹಿಲನ್ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರೀಯ ತಂಡದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಎಸ್.ವಿಜಯಕುಮಾರ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕೈಲಾಸಕುಮಾರ ಶುಕ್ಲಾ ಹಾಗೂ ರಾಜ್ಯ ಸರ್ಕಾರದ ಅಧಿಕಾರಿ ಜಿ.ಎಸ್.ಶ್ರೀನಿವಾಸ ರೆಡ್ಡಿಯವರಿಗೆ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ
ಆಗಿರುವ ಹಾನಿಯ ಬಗ್ಗೆ ಮಾಹಿತಿ ನೀಡಿದರು.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 863.57 ಕೋಟಿ ರೂ ಹಾನಿಯಾಗಿದ್ದು, ಎಸ್.ಡಿ.ಆರ್.ಎಫ್. ಹಾಗೂ ಎನ್.ಡಿ.ಆರ್.ಎಫ್ ಅನ್ವಯ ಕೇವಲ 56.25 ಕೋಟಿ ರೂ ಪರಿಹಾರ ವಿತರಿಸಲು ಮಾತ್ರ ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಯಲ್ಲಾಪುರ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಕುಮಟಾ, ಹಳಿಯಾಳ, ಮುಂಡಗೋಡ ಭಾಗದಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದು ಹೇಳಿದ ಮುಲ್ಲೈಮುಹಿಲನ್ ಅತಿವೃಷ್ಟಿಯ ಸಂದರ್ಭದಲ್ಲಿ ಜಿಲ್ಲಾಡಳಿತ ಕೈಗೊಂಡ ರಕ್ಷಣಾ ಕಾರ್ಯಾಚರಣೆ ಕುರಿತು ವಿವರಿಸಿದರು.
ಸಭೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಂದ ಆದ ಹಾನಿಯನ್ನು ಸಂಪುರ್ಣ ಅವಲೋಕಿಸಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡುವ ಮೂಲಕ ಇಲ್ಲಿನ ಜನಜೀವನವನ್ನು ವ್ಯವಸ್ಥಿತವಾಗಿಸಲು ಹೆಚ್ಚಿನ ಪರಿಹಾರ, ಅನುದಾನ ಬರುವಂತೆ ಮಾಡಬೇಕೆಂದು ಅಧಿಕಾರಿಗಳಲ್ಲಿ ವಿನಂತಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಜಿ.ಪಂ ಸಿಇಒ ಪ್ರಿಯಾಂಗಾ.ಎಂ, ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್ ಮತ್ತು ತಾಲೂಕಾಡಳಿತದ ಅಧಿಕಾರಿಗಳು ಸಿಬ್ಬಂದಿಯವರು ಹಾಜರಿದ್ದರು.
ಸಭೆಯ ನಂತರ ಕೇಂದ್ರ ತಂಡ ಸ್ಥಳೀಯ ಅಧಿಕಾರಿಗಳ ಜೊತೆಗೆ ತಳಕೆ ಬೈಲ್ ಬಳಿ ಗುಡ್ಡ ಹಾಗೂ ರಸ್ತೆ ಕುಸಿತ, ಕಳಚೆಯಲ್ಲಿ ಭೂಕುಸಿತ, ತೋಟ-ಮನೆಗಳಿಗೆ ಉಂಟಾದ ಹಾನಿ, ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿತ ಹಾಗೂ ಗುಳ್ಳಾಪುರದಲ್ಲಿ ಸೇತುವ ಕೊಚ್ಚಿ ಹೋಗಿರುವುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು.