ಆದ್ಯೋತ್ ವಿಶೇಷ ಸುದ್ದಿ:
“ಕಾವೇರಿಯಿಂ ಮಾಗೋ | ಗೋದಾವರಿವರಮಿರ್ಧನಾಡದಾ ಕನ್ನಡದೊಳ್||
ಭಾವಿಸಿದ ಜನಪದವಸು |ದಾವಳಯವಿಲೀನ ವಿಶದವಿಷಯ ವಿಶೇಷಂ ||” – ನೃಪತುಂಗ.
(ಕಾವೇರಿ ನದಿಯಿಂದ ಗೋದಾವರಿ ನದಿ ವರೆಗೆ ಹಬ್ಬದ ನಾಡೇ ನಮ್ಮ ಹೆಮ್ಮೆಯ ಕನ್ನಡ ನಾಡು ಎಂದು 9ನೆಯ ಶತಮಾನದಲ್ಲಿ ಕವಿ ನೃಪತುಂಗನ ಈ ಕಾವ್ಯದ ಸಾಲುಗಳೇ ಸಾಕ್ಷಿ.)
ಸುಲಿದ ಬಾಳೆಯ ಹಣ್ಣಿನಂದದಿ
ಕಳಿದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡ…. –ಮಹಾಲಿಂಗರಂಗ ಎಂಬ ಸಾಲುಗಳೇ ಸಾಕು ಕನ್ನಡದ ಹಿರಿಮೆಗೆ.
ಕನ್ನಡದ ಬಂಧುಗಳೇ, ಸ್ವಂತ ಲಿಪಿ, ಸ್ವಂತ ಸಂಖ್ಯೆ, ಸ್ವಂತ ವ್ಯಾಕರಣ,ಅತಿದೊಡ್ಡ ವರ್ಣಮಾಲೆ ಬರೆದಂತೆಯೇ ಉಚ್ಚರಿಸುವ ಏಕೈಕ ಭಾಷೆ ಕನ್ನಡ. ಅತ್ಯಂತ ಪುರಾತನ ಭಾಷೆಗಳಲ್ಲಿ 3ನೆಯ ಸ್ಥಾನ ಹೊಂದಿದ ( ಮೊದಲು ಸಂಸ್ಕೃತ, 2ನೆಯದು ಗ್ರೀಕ್ ಭಾಷೆಗಳು) ನಮ್ಮ ಹೆಮ್ಮೆಯ ಕನ್ನಡ ಭಾಷೆಗೆ ಸುಮಾರು ಎರಡು ಸಾವಿರದ ಐದುನೂರು ವರ್ಷಗಳ ಇತಿಹಾಸವಿದೆ.
“ ಆರಂಕುಶ ವಿಟ್ಟೋಡಂ ನೆನವುದೆನ್ನ ಮನಂ ಬನವಾಸಿದೇಶಂ” ಎಂದು ಆದಿಕವಿ ಪಂಪನಿಂದ ಹಾಡಿ ಹೊಗಳಲ್ಪಟ್ಟ ಕನ್ನಡಕ್ಕೆ ಪ್ರಥಮ ಶಬ್ದಕೋಶದ ಕಾಣಿಕೆ ನೀಡಿದ ಜರ್ಮನ್ ಕಿಟಲ್ ಅವರೇ ಸಾಕ್ಷಿ. ಇಂತಹ ಸುಂದರ ಕನ್ನಡ ನಾಡಿನ ಏಕೀಕರಣದ ಸಂಕ್ಷಿಪ್ತ ಪರಿಚಯ ನಿಮ್ಮ ಮುಂದೆ. ‘ಏಕೀಕರಣ’ಎಂದರೆ ಒಗ್ಗೂಡಿಸು, ಒಂದು ಮಾಡು , ಒಟ್ಟಾಗಿ ಸೇರಿಸು ಎಂದಾಗುತ್ತದೆ. ಹರಿದು ಹಂಚಿಹೋದ ಕನ್ನಡ ಭಾಷೆ ಮಾತನಾಡುವ , ಬಹುತೇಕ ಒಂದೇ ಸಂಸ್ಕೃತಿ ಹೊಂದಿದ ಭೂಭಾಗವನ್ನು ಒಂದೇ ಆಳ್ವಿಕೆಗೆ ಒಳಪಡಿಸುವುದು ಎಂದರ್ಥ. ಇಂದಿನ ನಮ್ಮ ವಿಶಾಲ ಕರ್ನಾಟಕವು ಬ್ರಿಟಿಷರ ಸ್ವಾರ್ಥ ಚಿಂತನೆಯ ಫಲವಾಗಿ ಐದಾರು ಭಾಗಳಾಗಿ ಹಂಚಿಕೆಯಾಗಿದ್ದು ಇತಿಹಾಸ. ಮೂರನೇ ಆಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪುವನ್ನು ಕೊಂದ ಬ್ರಿಟಿಷರು ತಮ್ಮ ಮಿತ್ರರಾದ ಹೈದರಾಬಾದಿನ ನಿಜಾಮನಿಗೆ ಈಶಾನ್ಯ ಕರ್ನಾಟಕದ ಬೀದರ್ , ಗುಲ್ಬರ್ಗಾ, ರಾಯಚೂರ ಭಾಗಗಳನ್ನು,ಮರಾಠರ ಪೇಶ್ವೆಗೆ ಬಿಜಾಪುರ, ಬೆಳಗಾವಿ,ಧಾರವಾಡ (ಅಖಂಡ ಧಾರವಾಡ ಜಿಲ್ಲೆ) ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಭಾಗಗಳನ್ನು ನೀಡಿದರು. ಬಳ್ಳಾರಿಯನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು ಹಳೆಯ ಮೈಸೂರು ರಾಜ್ಯದ 8 ಜಿಲ್ಲೆಗಳನ್ನು ಮೈಸೂರು ಅರಸರಿಗೆ ನೀಡಿ ತಮ್ಮ ಸ್ವಾರ್ಥತೆ ಮೆರೆದಿರುವುದರ ಫಲವಾಗಿ ನಾವು ಹಲವು ನಾಡಿನ ಭಾಷಾಗುಲಾಮಿತನ ಅನುಭವಿಸುವಂತಾಯಿತು.
ಇದು ಅನಾದಿಕಾಲದಿಂದಲೂ ಒಂದೇ ನಡೆ,ನುಡಿ ಸಂಸ್ಕೃತಿ ಹೊಂದಿದ ಕನ್ನಡಿಗರು ಒಂದಾಗುವ ವೇದಿಕೆಗೆ ಒಂದರ್ಥದಲ್ಲಿ ಸ್ವಾತಂತ್ರ್ಯ ಹೋರಾಟದ ವೇದಿಕೆಯೂ ಸಹಕಾರಿಯಾಗಿತ್ತು. ಬ್ರಿಟಿಷ್ ಕಾಲದಲ್ಲಿ ಡೆಪ್ಯುಟಿ ಶಿಕ್ಷಣಾಧಿಕಾರಿ ಢೆ. ಚನ್ನಬಸಪ್ಪನವರು ಬ್ರಿಟಿಷ್ ಸರಕಾರದ ನೀತಿ ಖಂಡಿಸಿ ಉತ್ತರ ಕರ್ನಾಟಕದಲ್ಲಿ ಸಾವಿರಾರು ಕನ್ನಡ ಶಾಲೆಗಳನ್ನು ತೆರೆಯಲು ಸಹಕರಿಸಿದರು. 1916 ರಲ್ಲಿ ಆಲೂರು ವೆಂಕಟರಾಯರು,ಕಡಪಾ ದೇಶಪಾಂಡೆ ಇವರ ನೇತೃತ್ವದಲ್ಲಿ ಕರ್ನಾಟಕ ಸಭಾ ಮೂಲಕ ಕರುನಾಡಿನ ಚಿತ್ರಣ ತೆರೆದಿಟ್ಟರು. 1924 ರಲ್ಲಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರತ್ಯೇಕ ಕನ್ನಡ ಪ್ರಾಂತ್ಯ ರಚನೆಗೆ ಪ್ರಸ್ತಾವನೆ. ಅದೇ ಸಭೆಯಲ್ಲಿ ಸಿದ್ದಪ್ಪ ಕಂಬಳಿಯವರ ನೇತೃತ್ವದಲ್ಲಿ ಹೋರಾಟ ಮುಂದುವರಿಸಲಾಯಿತು. 1936ರಲ್ಲಿ ಡಾ. ಕುರ್ತಕೋಟಿ ಶಂಕರಾಚಾರ್ಯರು ವಿಜಯನಗರ ಸಾಮ್ರಾಜ್ಯದ ಆರನೆ ಶತಮಾನೋತ್ಸವದಲ್ಲಿ ಏಕೀಕರಣದ ಕಾವನ್ನು ಹೆಚ್ಚಿಸಿದರು. ಇದು 1938ರಲ್ಲಿ ಪ್ರತ್ಯೇಕ ಮೈಸೂರು ಏಕೀಕರಣಕ್ಕೆ ಮೈಸೂರು ಮಹಾರಾಜರು ಒಮ್ಮತದ ನಿರ್ಣಯ ಸೂಚಿಸಿದರು.1946ರಲ್ಲಿ ದಾವಣಗೆರೆಯಲ್ಲಿ ಅಖಿಲ ಕರ್ನಾಟಕ ಮಹಾಸಮ್ಮೇಳನವು ಪ್ರತ್ಯೇಕ ಕನ್ನಡ ಪ್ರಾಂತ್ಯವಾಗಲೇಬೇಕೆಂದು ಆಗ್ರಹಿಸಿತು.ಅದೇ ವರ್ಷ ಮುಂಬೈಯಲ್ಲಿ ನಡೆದ ಭಾಷಾವಾರು ಪ್ರಾಂತ್ಯದ ಮಹಾಸಮ್ಮೇಳನದಲ್ಲಿ ಸರ್ದಾರ ವಲ್ಲಭಬಾಯಿ ಪಟೇಲರು ಸಭೆಯನ್ನುದ್ದೇಶಿಸಿ ಸ್ವತಂತ್ರ ಭಾರತದ ಮೊದಲ ಕೆಲಸ ಭಾಷಾವಾರು ಪ್ರಾಂತ್ಯ ರಚನೆ ಎಂದು ಘೋಷಿಸಿದರು.
ಇದಾದ ನಂತರವಷ್ಟೆ ಸ್ವತಂತ್ರ ಭಾರತದ ನಮ್ಮದೇ ಆಡಳಿತದಲ್ಲಿ ಮೈಸೂರು ಪ್ರಾಂತ್ಯ ನಿರ್ಮಾಣವಾಯಿತು.
1947 ಡಿ 29 ರಂದು ಕಾಸರಗೋಡಿನಲ್ಲಿ ಆರ್. ದಿವಾಕರಅಧ್ಯಕ್ಷತೆಯಲ್ಲಿ ನಡೆದ ಏಕೀಕರಣ ಸಮ್ಮೇಳನದಲ್ಲಿ “ಸ್ವಾತಂತ್ರ್ಯ ಬಂದರೂ ಏಕೀಕರಣವೇಕಿಲ್ಲ?” ಎಂದು ಖಂಡಿಸಿದರು. ಇದರಿಂದ ಎಚ್ಚೆತ್ತ ಭಾರತ ಸರ್ಕಾರವು ಜೆ ವಿ ಪಿ ಸಮಿತಿ (ಜ.ನೆಹರು, ವಲ್ಲಭಬಾಯಿ ಪಟೇಲ, ಪಟ್ಟಾಬಿ ಸೀತಾರಾಮಯ್ಯನವರ ನೇತೃತ್ವದಲ್ಲಿ ಭಾಷಾವಾರು ಪ್ರಾಂತ್ಯ ಸಮಿತಿ ರಚಿಸಿತು.ಈ ಮಧ್ಯೆ ಧಾರ್ ಸಮಿತಿಯ ಪ್ರತಿರೋಧ ವರದಿಯಿಂದ ಏಕೀಕರಣಕ್ಕೆ ಅಡೆತಡೆಯಾಯಿತು. ಇದರಿಂದ ಕೆರಳಿ ಕೆಂಡವಾದ ಕನ್ನಡಿಗರು ಎಸ್ ನಿಜಲಿಂಗಪ್ಪನವರ ನೇತೃತ್ವದಲ್ಲಿ ಎಲ್ಲ ಶಾಸಕರ ರಾಜೀನಾಮೆ ಬೆದರಿಕೆ ಒಡ್ಡಿದರು. ಇದೇ ರೀತಿ ಆಂಧ್ರದಲ್ಲಿ ಪೊಟ್ಟಿ ಶ್ರೀರಾಮುಲು ಅವರು ಪ್ರತ್ಯೇಕಆಂಧ್ರ ರಚನೆಗೆ 58 ದಿನಗಳ ಉಪವಾಸ ಸತ್ಯಾಗ್ರಹ ಮಾಡಿ ಮರಣ ಹೊಂದಿದರು. ಆಂಧ್ರದಲ್ಲಿ ಹೋರಾಟ ತೀವ್ರ ಸ್ವರೂಪಕ್ಕಿಳಿಯಿತು.ಬೆದರಿದ ಪ್ರಧಾನಿ ನೆಹರು 1953ರಲ್ಲಿ ತಕ್ಷಣ ಆಂಧ್ರ ಪ್ರದೇಶ ರಚಿಸಿದರು.ಇದು ಭಾರತದ ಮೊಟ್ಟ ಮೊದಲ ರಾಜ್ಯವಾಗಿ ಉದಯವಾಯಿತು. ನಂತರ ಯಾವುದೇ ರಾಜ್ಯದ ರಚನೆಯ ಸ್ಥಾಪನೆ ಸದ್ಯಕ್ಕಿಲ್ಲ ಎಂದು ಘೋಷಿಸಿತು. ಇದರಿಂದ ದೇಶಾದ್ಯಂತ ಹೋರಾಟದ ಕಾವೇರಿತು.ಕರ್ನಾಟಕದಲ್ಲಿ ಅಂದಾನಪ್ಪ ದೊಡ್ಡಮೇಟಿ ಏಕೀಕರಣಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದರು.ಶಂಕರ ಗೌಡ ಪಾಟೀಲ ಹುಬ್ಬಳ್ಳಿಯಲ್ಲಿ ಲಕ್ಷಾಂತರ ಜನರೊಂದಿಗೆ ಕೈ ಜೋಡಿಸಿದರು.ಚಳುವಳಿ ಬೆಂಗಳೂರು, ಮೈಸೂರು, ಕಾಸರಗೋಡು, ಬೀದರ, ಗುಲ್ಬರ್ಗಾ ಒಳಗೊಂಡು ನಾಡಿನಾದ್ಯಂತ ತೀವ್ರ ಸ್ವರೂಪ ಪಡೆಯಿತು.ಸಾಹಿತಿಗಳಾದ ಡಿವಿಜಿ ,ಕುವೆಂಪು, ಮಾಸ್ತಿ,ಅನಕೃ, ಕಾರಂತರಂತಹ ಲಕ್ಷಾಂತರ ಕನ್ನಡಿಗರು ರಾಜ್ಯ ಪುನರ್ವಿಂಗಡಣೆಗೆ ಒಕ್ಕೋರಲ ಹೋರಾಟ ನಡೆಸಿದರು.ಅಂತಿಮವಾಗಿ 1953 ಡಿ.29ರಂದು ನೆಹರು ಅವರು ಫಜಲ್ ಅಲಿ ನೇತ್ರತ್ವದಲ್ಲಿ ರಾಜ್ಯಗಳ ಪುನರ್ ವಿಂಗಡಣಾ ಆಯೋಗ ರಚಿಸಿತು.ಈ ಆಯೋಗವು ಇಡೀ ದೇಶಾದ್ಯಂತ 38 ಸಾವಿರ ಮೈಲು ಪ್ರಯಾಣಿಸಿ 1,52,252 ಮನವಿ ಸ್ವೀಕರಿಸಿ 9000 ಜನರಅಭಿಪ್ರಾಯ ಸಂಗ್ರಹಿಸಿ ವರದಿ ಸಲ್ಲಿಸಿತು.
ಈ ಎಲ್ಲ ಹೋರಾಟಗಾರರ ಕನಸಿನ ಮೈಸೂರು ರಾಜ್ಯವಾಗಿ ನ. 1 1956 ರಂದು ಉದಯವಾಯಿತು.ಶತಮಾನಗಳ ಕನ್ನಡಿಗರ ಶಾಪ ವಿಮೋಚನೆಗೆ ಪೂರ್ಣವಿರಾಮ ಸಿಕ್ಕಿತು. ಹೀಗಿದ್ದರೂ ಕೂಡ ಅಖಂಡ ಕರ್ನಾಟಕದ ಜನರ ಆಶಯದಂತೆ 1973 ನ.1 ರಂದು ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಕರ್ನಾಟಕ ರಾಜ್ಯವೆಂದು ಮರುನಾಮಕರಣಕ್ಕ ಅಂಕಿತ ಹಾಕಿದರು.
#####
ಗೋಪಾಲ ಭಾಶಿ ಸಿದ್ದಾಪುರ