ಅಮ್ಮನೊಡನೆ ಒಂದು ದಿನ ಕಾರ್ಯಕ್ರಮದಲ್ಲಿ ಹರಿವ ನದಿ ಆತ್ಮಕಥನ ಬಿಡುಗಡೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಹೊಸೂರು ಶಂಕರಮಠದಲ್ಲಿ “ಅಮ್ಮನೊಂದಿಗೆ ಒಂದು ದಿನ” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮೀನಾಕ್ಷಿ ಭಟ್ಟರ ಆತ್ಮಕಥನ “ಹರಿವ ನದಿ” ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಕೃತಿಯ ಕುರಿತು ಮಾತನಾಡಿದ ಹಿರಿಯ ವಿಮರ್ಶಕಿ ಡಾ.ವಿನಯ ವಕ್ಕುಂದಿ,ಮನಸ್ಸಿಗಾದ ಗಾಯವನ್ನು ತೆರೆದು ತೋರುವುದು ಕಠಿಣವಾದ ಕೆಲಸ. ಆದರೆ ಮೀನಾಕ್ಷಿ ಭಟ್ಟರ ಆತ್ಮ ಕಥನ ಲೋಕದೊಳಗೆ, ಸಮುದಾಯದೊಳಗೆ ಪಿಸುಗುಡುವ ಹೆಣ್ಣಿನ ಅಂತರಾಳವನ್ನು ಪ್ರತಿಧ್ವನಿಸುತ್ತದೆ ಜಾತಿ, ಬಡತನಕ್ಕೆ ಕರಳು ಬಳ್ಳಿಯ ಸಂಬಂಧ ಕಟ್ಟಿಕೊಡುತ್ತಾ ಜೀವನ ದರ್ಶನ, ಬಾಳಿನ ದರ್ಶನ ಮಾಡುವ ಕೃತಿಯು ಬದುಕನ್ನು ದಾಟುವ ಮಾರ್ಗವನ್ನು ತೆರೆದು ತೋರುತ್ತಾ ನೆನಪಿನ ಬುತ್ತಿಯನ್ನು ಕಟ್ಟಿ ಕೊಡುತ್ತದೆ. ಹಲವು ಮನಗಳ ನೋವಿಗೆ ಉಪಶಮನ ಹೇಳುತ್ತಾ ಬದುಕಿನ ಮತ್ತೊಂದು ಮಗ್ಗುಲನ್ನು ಬಿಂಬಿಸುತ್ತದೆ. ಈ ನೆಲದ ಹೆಣ್ಣಿನ ಶಕ್ತಿ, ಕ್ಷಮತೆಯನ್ನು ಪರಿಚಯಿಸುತ್ತದೆ ಎಂದು ವಿವರಿಸಿದರು.
ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ಗಾಯಕಿ ಎಚ್.ಆರ್.ಲೀಲಾವತಿ, ಪುಸ್ತಕವನ್ನು ಬಿಡುಗಡೆಗೊಳಿಸಿ ತಾಯಿ ಎಂಬ ಶಬ್ದ ವಿಶ್ವವ್ಯಾಪಿಯಾದುದು. ತಾಯ್ತನ ಎನ್ನುವುದೇ ಒಂದು ದೊಡ್ಡ ಪಟ್ಟ. ಹೆಣ್ಣಾಗಿ ತಾಯಿ ತನ್ನ ಜೀವ ಒತ್ತೆಯಿಟ್ಟು ತನ್ನ ಮಕ್ಕಳಿಗೆ ಸೂರ್ಯನ ಬೆಳಕಿನ ದರ್ಶನ ಮಾಡಿಸುತ್ತಾಳೆ. ತನ್ನ ತ್ಯಾಗದಿಂದ ಮಕ್ಕಳ ಜೀವನವನ್ನು ಹಸಿರು-ಹಸನು ಮಾಡುವವಳು ತಾಯಿಯಾಗಿದ್ದು “ಹರಿವ ನದಿ”ಕೃತಿಯು ನೊಂದು ಬೆಂದು ಸಂಕಟಪಡುವ ಹೆಣ್ಣಿಗೆ ದಿಟ್ಟತನದ ದಾರಿದೀಪವಾಗಿ ಮಾರ್ಗದರ್ಶನ ಮಾಡುತ್ತದೆ ಎಂದರು.
ಮಿನಾಕ್ಷಿ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಜೈರಾಮ ಹೆಗಡೆ ಮಾತನಾಡಿದರು.
ಈ ಸಂದರ್ಭದಲ್ಲಿ ಗಣೇಶ ಹೆಗಡೆ, ಜೈಶೀಲಪ್ಪ, ಮಹಾಬಲೇಶ್ವರ ಭಟ್ ಜಡ್ಡಿ, ಶೇಖ್ ಇಸ್ಮಾಯಿಲ್, ಡಾ|ಎಸ್.ಆರ್.ಹೆಗಡೆ ದಂಪತಿ, ರಾಮಚಂದ್ರ ಸಂಪಗೋಡ, ಲಕ್ಷ್ಮಿನಾರಾಯಣ ಭಟ್ ಬಳಗುಳಿ,ನಾಗರಾಜ ಶೇಟ್ ಬೆಂಗಳುರು ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ ಸ್ವಾಗತಿಸಿದರು. ಪತ್ರಕರ್ತೆ ಭಾರತಿ ಹೆಗಡೆ ವಂದಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರು ಕೃತಿಯ ನಿರೂಪಕಿ ಶ್ರೀಮತಿ ಭಾರತಿ ಹೆಗಡೆ ನಿರ್ವಹಿಸಿದರು. ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಸಾಹಿತಿಗಳು, ರಂಗಕರ್ಮಿಗಳು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
#######

ಸಿದ್ದಾಪುರ ಲಯನ್ಸ್ ಕ್ಲಬ್ ಗೆ ಬೆಂಗಳೂರಿನ ಬಾಂಧವ್ಯ ಲಯನ್ಸ್ ಕ್ಲಬ್ ಸದಸ್ಯರ ಭೇಟಿ
ಬೆಂಗಳೂರಿನ ಬಾಂಧವ್ಯ ಲಯನ್ಸ್ ಕ್ಲಬ್‍ನ ಹತ್ತು ಮಹಿಳಾ ಸದಸ್ಯರು ಸಿದ್ದಾಪುರ ಲಯನ್ಸ್ ಕ್ಲಬ್‍ಗೆ ಶುಕ್ರವಾರ ಭೇಟಿ ನೀಡಿ ಇಲ್ಲಿಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.
ಸದಸ್ಯರನ್ನು ಸ್ವಾಗತಿಸಿ ಮಾತನಾಡಿದ ಲಯನ್ಸ್ ಅಧ್ಯಕ್ಷೆ ಶ್ಯಾಮಲಾ ರವಿ ಹೆಗಡೆ, ಲಯನ್ಸ್ ಸಂಸ್ಥೆಗಳು ಜನಪರ ಕೆಲಸಗಳ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿದೆ.ಬೇರೆಬೇರೆ ಕ್ಲಬ್‍ಗಳ ಜೊತೆಗೆ ಸೇರಿ ವಿಚಾರವಿನಿಮಯ ಮಾಡುವ ಮೂಲಕ ಸಂವಹನ ಮಾಡಿದಾಗ ಹೊಸ ವಿಚಾರಗಳು ಕಾರ್ಯಕ್ರಮಗಳ ಪರಿಚಯವಾಗುತ್ತದೆ.
ಉಭಯ ಕ್ಲಬ್‍ಗಳ ಸೇವಾ ಚಟುವಟಿಕೆಗಳ ವರದಿಯನ್ನು ರಾಘವೇಂದ್ರ ಭಟ್,ಮತ್ತು ಶಾಂತಾ ವೀರೇಂದ್ರ ಪ್ರಸ್ತುತ ಪಡಿಸಿದರು.

ಬಾಂಧವ್ಯ ಕ್ಲಬ್‍ನ ಅಧ್ಯಕ್ಷೆ ರಜನಿ ಉಮಾಪತಿ ಹಾಗೂ ಬೆಂಗಳೂರು ಲಯನ್ ಜಿಲ್ಲೆಯ ಕ್ಯಾಬಿನೆಟ್ ಸದಸ್ಯೆ ಸುಂದರಿ ವೆಂಕಟಾಚಲಪತಿ ಸಿದ್ದಾಪುರ ಲಯನ್ಸ್ ಕ್ಲಬ್ ಬಗ್ಗೆ ಮೆಚ್ಚುಗೆಯ ಮಾತನಾಡಿದರು.. ಮಾಜಿ ಜಿಲ್ಲಾಗವರ್ನರ್ ಡಾ.ರವಿ ಹೆಗಡೆ ಹೂವಿನಮನೆ, ಜಯಮಹಲ್‍ಲಯನ್ಸ್ ಕ್ಲಬ್‍ನ ಸದಸ್ಯ ರಾಧಾಕೃಷ್ಣ ಹೆಗಡೆ ಮಾತನಾಡಿದರು.
ನಾಗರಾಜ ಧೋಶೆಟ್ಟಿ ಧ್ವಜ ವಂದನೆ ಮಾಡಿದರು. ಪ್ರಶಾಂತ ಶೇಟ್ ವಂದನಾರ್ಪಣೆ ಮಾಡಿದರು. ಜಿ.ಜಿ.ಹೆಗಡೆ ಬಾಳಗೋಡ ನಿರೂಪಣೆ ಮಾಡಿದರು.

About the author

Adyot

Leave a Comment