ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಕಳೆದ ಹತ್ತಾರು ವರ್ಷಗಳಿಂದ ಸಮಗ್ರ ಹೋರಾಟ ನಡೆಸುತ್ತಾ ಬಂದಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕರು ಈ ಬಾರಿ ಜಡ್ಡುಗಟ್ಟಿರುವ ಸರಕಾರದ ವ್ಯವಸ್ಥೆಯ ಕಣ್ಣು ತೆರೆಸಲು ಬುಧವಾರ ಬೆಳಗಾವಿ ಚಲೋ ಬೃಹತ್ ಪ್ರತಿಭಟನೆಯನ್ನು ಅಧಿವೇಶನ ನಡೆಯುತ್ತಿರುವ ಬೆಳಗಾವಿಯಲ್ಲಿ ನಡೆಸಿದರು.
ಬೆಳಗಾವಿ ತಾಲೂಕಿನ ಕೆ.ಕೆ. ಕೊಪ್ಪ ಕ್ರಾಸ್‍ನಿಂದ ಕೊಂಡಸ್ಕೊಪ್ಪ ಪ್ರತಿಭಟನಾ ಸ್ಥಳದವರೆಗೂ ಜಿಲ್ಲಾದ್ಯಂತ ಆಗಮಿಸಿದ ಪ್ರತಿಭಟನಾಕಾರರು ಬೃಹತ್ ಪ್ರತಿಭಟನೆ, ಮೆರವಣಿಗೆ, ರಾಲಿ ನಡೆಸಿದರು.
ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿನ ವೈಫಲ್ಯ ಸರಿಪಡಿಸುವುದು, ಅರಣ್ಯ ಅಧಿಕಾರಿಗಳ ದೌರ್ಜನ್ಯ ನಿಯಂತ್ರಿಸುವುದು, ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲಾ ಅರಣ್ಯ ಪ್ರದೇಶ ಸೇರ್ಪಡೆಗೆ ವಿರೋಧ, ಅರಣ್ಯವಾಸಿಗಳ ಸೌಲಭ್ಯದಿಂದ ವಂಚಿತರಾಗದ ರೀತಿ ಕಾರ್ಯನಿರ್ವಹಿಸುವುದು, 1978 ರ ಪೂರ್ವ ಅತಿಕ್ರಮಣದಾರರ ಹಕ್ಕು ಪತ್ರ ಶೀಘ್ರ ವಿಲೇವಾರಿ ಮಾಡುವುದು, ಅರಣ್ಯ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಇತ್ತೀಚಿನ 5 ವರ್ಷದಲ್ಲಿ 1 ಲಕ್ಷ ಮರ ಕಡಿತ ಅವೈಜ್ಞಾನಿಕ ನೀತಿ ಮತ್ತು ಅರಣ್ಯ ಕ್ಷೇತ್ರದಲ್ಲಿ ಕಾಮಗಾರಿ ತನಿಖೆಗೆ ಅಗ್ರಹ, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದವರನ್ನು ಮಂಜೂರಾತಿ ಪ್ರಕ್ರೀಯೆ ಮುಗಿಯುವರೆಗೂ ಒಕ್ಕಲೆಬ್ಬಿಸಿರುವ ಪ್ರಕ್ರೀಯೆ ಸ್ಥಗಿತಗೊಳಿಸುವುದು, ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಅರಣ್ಯವಾಸಿ ಹೋರಾಟಗಾರರೊಂದಿಗೆ ಉನ್ನತ ಮಟ್ಟದ ಸಭೆ ಜರುಗಿಸುವುದು, ಸುಫ್ರೀಂ ಕೋರ್ಟನಲ್ಲಿ ರಾಜ್ಯ ಸರಕಾರ ಅರಣ್ಯವಾಸಿಗಳ ಪರ ಪ್ರಮಾಣ ಪತ್ರ ಸಲ್ಲಿಸುವುದು, ಅರಣ್ಯವಾಸಿಗಳ ಮೇಲೆ ದಾಖಲಿಸಿದ ಕ್ರೀಮಿನಲ್ ಪ್ರಕರಣ ಹಿಂದಕ್ಕೆ ಪಡೆಯುವುದು. ಈ ಮುಂತಾದ ಹಕ್ಕೋತ್ತಾಯವನ್ನು ಪ್ರತಿಭಟನಾಕಾರರು ಮಂಡಿಸಿದರು.
ಸಮಸ್ಯೆಗೆ ಸ್ಪಂದಿಸಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಉಸ್ತುವಾರಿ ಸಚೀವ ಶಿವರಾಮ ಹೆಬ್ಬಾರ
“ಸಮಗ್ರ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಂದಿನ ಒಂದು ತಿಂಗಳದ ಒಳಗಾಗಿ ರಾಜ್ಯ ಮಟ್ಟದ ವಿವಿಧ ಸಚಿವರ ಮತ್ತು ಹೋರಾಟಗಾರರ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಸಭೆ ಬೆಂಗಳೂರಿನಲ್ಲಿ ಜರುಗಿಸಲು ಸರಕಾರ ಬದ್ಧವಾಗಿದೆ” ಎಂದು ಘೋಷಿಸಿದರು.
ಸರಕಾರವು ಅರಣ್ಯವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವ ದಿಶೆಯಲ್ಲಿ ಎಲ್ಲರ ಸಹಕಾರವನ್ನು ಬಯಸುತ್ತಿದೆ ನಿರಂತರ ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸುವಲ್ಲಿ ಸರಕಾರ ಪ್ರಯತ್ನಿಸಿದಾಗಲೂ ಯಶಸ್ವಿ ಸಿಗದೇ ಇರುವುದು ವಿಷಾದಕರ. ಈ ದಿಶೆಯಲ್ಲಿ ಕೇಂದ್ರ ಸರಕಾರದ ಮೇಲೂ ಒತ್ತಡ ತರಲಾಗುವುದು ಎಂದು ಸಚೀವ ಶಿವರಾಮ ಹೆಬ್ಬಾರ
ಹೇಳಿದರು.
ಮಾಜಿ ಸಚಿವರು ಆರ್ ವಿ ದೇಶಪಾಂಡೆ ಪ್ರತಿಭಟನಾ ಸ್ಥಳಕ್ಕೆ ಭೇಟ್ಟಿ ನೀಡಿ ಅರಣ್ಯವಾಸಿಗಳ ಸಮಸ್ಯೆಗೆ ಸ್ಫಂದನೆಗೆ ಅರಣ್ಯ ಸಚಿವರೊಂದಿಗೆ ಮಾತನಾಡಿ, ಸಮಸ್ಯೆಗಳಿಗೆ ಪೂರಕವಾಗಿ ಸ್ಫಂದಿಸಲು ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಅಂಕೋಲಾ ತಾಲೂಕ ಅಧ್ಯಕ್ಷ ಜಿ.ಎಮ್ ಶೆಟ್ಟಿ, ಕುಮಟ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ, ಯಲ್ಲಾಪುರ ತಾಲೂಕ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ, ಮುಂಡಗೋಡ ತಾಲೂಕ ಅಧ್ಯಕ್ಷ ಶಿವಾನಂದ ಜೋಗಿ, ಜೋಯಿಡಾ ತಾಲೂಕ ಅಧ್ಯಕ್ಷ ಸುಭಾಸ್ ಗಾವಡಾ, ರಾಜೇಶ ನೇತ್ರೆಕರ್, ರಾಜು ನರೇಬೈಲ್, ರಿಜವಾನ್, ಅಲಿಸಾಬ ಭಟ್ಕಳ, ಸಂತೋಷ ಗಾವಡಾ, ರಾಘವೇಂದ್ರ ನಾಯ್ಕ ಗುಳ್ಳಾಪುರ, ವಿಜಯ ಸಿದ್ಧಿ ಮುಂತಾದವರು ಭಾಗವಹಿಸಿದ್ದರು.