“ಚಂಪಾ” ಖ್ಯಾತಿಯ ಚಂದ್ರಶೇಖರ ಪಾಟೀಲ ಇನ್ನಿಲ್ಲ

ಆದ್ಯೋತ್ ಸುದ್ದಿನಿಧಿ:
ವ್ಯಂಗ್ಯದ ಸರದಾರ ಮಾತಿನ ಮೋಡಿಗಾರ
ಚಂಪಾ ಈ ಹೆಸರು ಸಾಹಿತ್ಯವಲಯವಷ್ಟೇ ಏಕೆ ಇಡೀ ಸಾರ್ವಜನಿಕ ವಲಯದಲ್ಲಿ ಚಿರಪರಿಚಿತ ಹೆಸರು. ಅವರು ಗುಡುಗುವ ಶೈಲಿ. ಮೊನಚಾದ ಟೀಕೆ, ವಿಡಂಬನೆ ಮೂಲಕ ಮನೆ ಮಾತಾಗಿದ್ದ ಅಪರೂಪದ ವ್ಯಕ್ತಿ ಜತೆಗೆ ಉತ್ತರ ಕರ್ನಾಟಕದ ಸಾಹಿತ್ಯಿಕ ಶಕ್ತಿ ಎಂದರೆ ತಪ್ಪಾಗದು. ಸದಾ ಹಾಸ್ಯಭರಿತ ಮಾತುಗಳನ್ನೇ ಆಡುತ್ತಿದ್ದ ಯುವಕರ ಅಚ್ಚುಮೆಚ್ಚಿನ ವ್ಯಕ್ತಿ. ಯಾವುದೇ ಸಭೆ ಸಮಾರಂಭದಲ್ಲಿ ಪ್ರೊ.ಚಂಪಾ ಬಂದಾರೆ. ಅವರೂ ಮಾತಾಡ್ತಾರೆ ಎಂದರೆ ಯುವಕರನ್ನು ತುದಿಗಾಲಲ್ಲಿ ನಿಲ್ಲೋದು ಖಚಿತ. ಸಹಜ ಮಾತಿನಲ್ಲೇ ಆರಂಭವಾಗಿ ಕೊನೆಗೆ ಯಾರ ಗ್ರಹಚಾರ ಕೆಟ್ಟಿರುವುದೋ ಅವರ ಜಾತಕ ಬಯಲು ಮಾಡುವ ಅವರನ್ನು ಅಷ್ಟೇ ನವಿರಾಗಿ ಗೇಲಿ ಮಾಡುವ ಮತ್ತು ಗೇಲಿಗೊಳಗಾದ ವ್ಯಕ್ತಿಯೂ ಅವರನ್ನು ಹೊಗಳಿರಬೇಕು ಅಂಥಾ ಮೋಡಿಗಾರ.

ಹಲವೆಡೆ ಅವರನ್ನು ಕೇಳಿದಾಗ ಆದಿಕವಿ ಪಂಪ ಅಂತ್ಯಕವಿ ಚಂಪಾ ಎಂದು ಸಂಬೋಧಿಸಿದ್ದೂ ಉಂಟು. ವ್ಯಂಗ್ಯಭರಿತ ಬರವಣಿಗೆಯಿಂದಲೇ ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದ ಚಂದ್ರಶೇಖರ ಪಾಟೀಲರು ಉತ್ತರ ಕರ್ನಾಟಕದ ಹೆಮ್ಮೆಯ ಕುವರ. ಹಿರಿ-ಕಿರಿಯ ಸಾಹಿತಿಗಳು ಬೆಂಗಳೂರಿನಾಚೆ ನೋಡುವಂತೆ ಮಾಡಿದ ಶ್ರೇಯಸ್ಸಿನಲ್ಲಿ ಇವರದ್ದೂ ಮಹತ್ತರ ಪಾತ್ರವಿದೆ. ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ ಅವಕಾಶ ಸಿಕ್ಕಾಗೊಮ್ಮೆ ಬೆಂಗಳೂರಿನ ಸಾಹಿತಿಗಳತ್ತ ಚಾಟಿ ಬೀಸುತ್ತಲೇ ಗಮನಸೆಳೆಯುತ್ತಿದ್ದ ಪ್ರೊಫೆಸರ್ ಯಾವುದೇ ಪಂಥಕ್ಕೆ ಸೀಮಿತವಾಗಲಿಲ್ಲ ಎನ್ನುವುದು ವಿಶೇಷ. ತಮ್ಮದೇ ಆದ ಸಂಕ್ರಮಣ ಪತ್ರಿಕೆ ಮೂಲಕ ಉದಯೋನ್ಮುಖ ಸಾಹಿತಿಗಳಿಗೆ, ಕವಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟವರು ಇವರು. ಚಂದಾ ನೀಡದಿದ್ದಾಗ ಪತ್ರ ಮೂಲಕ ಸದಾ ಎಚ್ಚರಿಸುತ್ತಿದ್ದವರು. ಚಂದಾದಾರರು ಎಲ್ಲಾದರೂ ಎದುರಿಗೆ ಸಿಕ್ಕಾಗ ರೊಕ್ಕ ತಂದಿರೇನು ಇಲ್ಲೇ ಕಟ್ಟಿ ಬಿಡ್ರಿ ಎಂದು ಅಷ್ಟೇ ಖಡಕ್ಕಾಗಿ ಹೇಳುತ್ತಿದ್ದವರು. ಪ್ರಗತಿಪರ ಮತ್ತು ಬಂಡಾಯ ಮನೋಧರ್ಮವನ್ನೂ ಹೊಂದಿದ್ದ ಪ್ರೊ.ಚಂಪಾ ಧಾರವಾಡದ ಕೆಸಿಡಿಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ನೆಚ್ಚಿನ ಇಂಗ್ಲಿಷ್ ಪ್ರೊಫೆಸರ್. ಇವರು ಯಾರಿಗಾದರೂ ಫೋನ್ ಮಾಡಿದರು ಒಂದೊಮ್ಮೆ ಗಾಬರಿ ಮತ್ತೊಂದೆಡೆ ಖುಷಿ. ಸಂವಾದ ಸಾಧ್ಯವಾಗಿಸುವ ವಿಶಿಷ್ಟ ಸಾಹಿತಿ. ಚುಟುಕು ಅಷ್ಟೇ ಕುಟುಕು ಭರಿತ ಮಾತುಗಳು ಅವರ ಶೈಲಿಯ ವಿಶೇಷತೆ.

ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲೂ ಅಷ್ಟೇ. ವೇದಿಕೆ ಎದುರು ಚಂಪಾ ಕುಳಿತಿದ್ದಾರೆ ಎಂದರೆ ಗೋಷ್ಠಿ ಮುಗಿಯುತ್ತಿದ್ದಂತೆ ಏನಾದರೂ ಮಾತಾಡೇ ಮಾತಾಡ್ತಾರೆ ಎನ್ನುವ ಬಲವಾದ ವಿಶ್ವಾಸ ಸಭಿಕರದ್ದು. ಇನ್ನು ಈ ಮಾತು ಕೆಲವರಿಗೆ ಸಂತಸ ತಂದರೆ ಹಲವರಿಗೆ ಇರಿಸು ಮುರಿಸು ಕೂಡ ಸೃಷ್ಟಿಸಿರುತ್ತಿತ್ತು. ಇದರ ಜತೆಗೆ ಇಡೀ ಸಭಾಭವನ ನಗೆಗಡಲಲ್ಲಿ ತೇಲುತ್ತಿತ್ತು ಎನ್ನುವುದು ಮಾತ್ರ ಸತ್ಯ.70ರ ದಶಕದ ಸಾಂಸ್ಕೃತಿಕ ಆಂದೋಲನದಲ್ಲಿ ಸಕ್ರಿಯವಾಗಿ ಭಾಗಿಯಾಗುವುದರ ಜತೆಗೆ ಬಂಡಾಯ ಸಾಹಿತ್ಯದ ಕ್ಷಿತಿಜಗಳನ್ನು ವಿಸ್ತರಿಸದವರು.
ಧಾರವಾಡ ಅವರ ತವರಮನೆ ಆಗಿತ್ತು. ಹಳ್ಳಿಗರೊಂದಿಗೆ ಆತ್ಮೀಯ ೊಡನಾಟಕ್ಕೆ ಅವರು ಸದಾ ತುಡಿಯುತ್ತಿದ್ದರು. ಹಮ್ಮು ಬಿಮ್ಮುಗಳಿಗೆ ಅವರ ಬಳಿ ಜಾಗವಿರುತ್ತಿರಲಿಲ್ಲ. ಉತ್ತರ ಕರ್ನಾಟಕದ ಹುಡುಗರು ಅಥವಾ ಜನ ಎಂದರೆ ಇನ್ನಿಲ್ಲಿದ ಪ್ರೀತಿ, ಅಕ್ಕರೆ, ಅಭಿಮಾನ ಅವರದ್ದಾಗಿತ್ತು.ಪ್ರೀತಿ ಇಲ್ಲದೇ ದ್ವೇಷವನ್ನೂ ಮಾಡಲಾರೆ ಎಂದು ಗಟ್ಟಿಯಾಗಿ ಹೇಳುತ್ತ ಶ್ರೀ ಸಾಮಾನ್ಯರ ಧ್ವನಿಯಾಗಿದ್ದರು ಎಂದರೆ ಉತ್ಪ್ರೇಕ್ಷೆಯಾಗದು. ಸಮಾಝವಾದಿ ಚಿಂತನೆಯನ್ನು ಕನ್ನಡ ಸಾಹಿತ್ಯದಲ್ಲೂ ತಂದವರು. ಎಲ್ಲಕ್ಕಿಂತ ಮಿಗಿಲಾಗಿ ಶುದ್ಧ ಮಾನವೀಯ ಅಂತಃಕರಣದ ಮೇರು ಶಿಖರ. ಸೂರ್ಯನ ಪ್ರಖರ ಕಿರಣಗಳಂತೆ ಚಂದ್ರನ ಬೆಳಕಿನಂತೆ ನಮ್ಮ ನಡುವೆ ಇದ್ದ ಪ್ರೊ.ಚಂಪಾ ಭೌತಿಕವಾಗಿ ನಮ್ಮನ್ನು ಅಗಲಿರಬಹುದು ಆದರೆ ಅವರ ವಾಗ್ಝರಿ, ವಿಡಂಬನೆ, ಗೇಲಿ ಅವರ ಎಲ್ಲ ಅಭಿಮಾನಿಗಳೊಂದಿಗೆ ಸದಾ ಇರುತ್ತದೆ ಮತ್ತು ಸದಾ ಇರುವ ಹಾಗೆ ಮಾಡಿ ಹೋದ ಮೇಷ್ಟ್ರು ನಮ್ಮ ಚಂಪಾ.

About the author

Adyot

Leave a Comment