ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಹೇರೂರು ಸೀಮೆಯ
ಶ್ರೀಮನ್ನೆಲೆಮಾವಿನಮಠದ ನೂತನ ಯತಿಗಳಾಗಿ ಸನ್ಯಾಸ ಸ್ವೀಕಾರ ಮಾಡಲಿರುವ ವಿನಾಯಕ ಭಟ್ಟರ ಎರಡು ದಿನಗಳ ಸನ್ಯಾಸ ಸ್ವೀಕಾರ ಮಹೋತ್ಸವ ಕಾರ್ಯಕ್ರಮವು ಶೃಂಗೇರಿಯ ನರಸಿಂಹವನದ ದಕ್ಷಿಣಾಮ್ನಾಯ ಶ್ರೀಶಾರದ ಪೀಠದಲ್ಲಿ ಶ್ರಂಗೇರಿಮಠದ ಪ್ರಧಾನ ಪುರೋಹಿತ ವೇ.ಸೀತಾರಾಮ ಶರ್ಮ ನೇತೃತ್ವದಲ್ಲಿ ರವಿವಾರ ವಿದ್ಯುಕ್ತವಾಗಿ ಪ್ರಾರಂಭವಾಯಿತು.
ರವಿವಾರ ಬೆಳಿಗ್ಗೆ 9 ಗಂಟೆಯಿಂದ ಸನ್ಯಾಸ ಸ್ವೀಕಾರ ಸಮಾರಂಬಕ್ಕೆ ಅನುಜ್ಞೆ ಪಡೆಯಲು ಜಗದ್ಗುರು ಮಹಾಸ್ವಾಮೀಜಿಗಳಿಗೆ,ಶ್ರೀಶಾರದಾಂಬೆಗೆ,ಶ್ರೀಶಂಕರಭಗವತ್ಪಾದರಿಗೆ ಫಲಸಮರ್ಪಣೆ ಮಾಡಿ ಗುರುಪ್ರಾರ್ಥನೆ ಮಾಡಿದರು. ಎಲ್ಲಾ ಬಂಧನದ ಬಿಡುಗಡೆಗಾಗಿ ಅಷ್ಟಶ್ರಾದ್ಧಗಳನ್ನು 18 ವೇದವಿದರಿಗೆ ನಾನಾ ವಿಧವಾದ ದಾನವನ್ನು ನೀಡಿದರು.ನಂತರ ವಪನ ಸ್ನಾನ ಮಾಡಿ,ಗಣಪತಿ ಪೂಜೆ,ಪುಣ್ಯಾಹ ವಾಚನ ಮಾಡಿ ನಾಂದಿ,ಮಾತೃಕಾ ಪೂಜೆ ದಂಡಕ್ಕೆ ಪೂಜೆಯನ್ನು ಮಾಡಿ.ಉಪವಾಸ ಸಂಕಲ್ಪ ಮಾಡಿಸಲಾಯಿತು. ಸಂಜೆ ಬ್ರಹ್ಮಾನ್ವಾದಾನ ಹೋಮವನ್ನು ನಡೆಸಲಾಯಿತು.
ಸೋಮವಾರ ಸನ್ಯಾಸ ಸ್ವೀಕಾರದ ವಿವಿಧ ಕಾರ್ಯಕ್ರಮ ನಡೆಯಲಿದೆ.ನೂತನ ಯತಿ ವಿನಾಯಕ ಗಣಪತಿ ಭಟ್ಟರಿಗೆ ಶ್ರೀಶೃಂಗೇರಿ ಶಿವಗಂಗಾ ಮಠಾಧೀಶರಾದ ಶ್ರೀಪುರುಷೋತ್ತಮ ಭಾರತಿ ಮಹಾಸ್ವಾಮಿಜಿಯವರು ಸನ್ಯಾಸ ದೀಕ್ಷೆ ಕೊಡಿಸಲು ಜಗದ್ಗುರು ಶ್ರೀಭಾರತೀತೀರ್ಥ ಮಹಾಸ್ವಾಮಿಜಿ ಹಾಗೂ ತತ್ಕರಕಮಲಸಂಜಾತ ಜಗದ್ಗುರು ಶ್ರೀವಿಧುಶೇಖರ ಭಾರತಿ ಸ್ವಾಮೀಜಿ ನಿಶ್ಚಿಯಿಸಿದ್ದಾರೆ.
ಮಾಘಶುಕ್ಲ ಸಪ್ತಮಿ ಸೋಮವಾರ ಅಂದರೆ ನಾಳೆ ಬೆಳಿಗ್ಗೆ 7 ಗಂಟೆಗೆ ಪುರುಷಸೂಕ್ತ ಹೋಮ,ವಿರಜಾ ಹೋಮ,ನದಿಯಲ್ಲಿ ಪ್ರೈಷೋಚ್ಚಾರಣೆ,ಸಂನ್ಯಾಸ,ದಂಡಕಮಂಡಲು ಪರಿಗ್ರಹಣ, 10 ಗಂಟೆಯಿಂದ 10-20ರ ವರೆಗಿನ ಮೀನಲಗ್ನದಲ್ಲಿ ನರಸಿಂಹವನದಲ್ಲಿರುವ ಅಧಿಷ್ಠಾನಂದಿರದಲ್ಲಿ ಪ್ರಣವ ಮಹಾವಾಕ್ಯೋಪದೇಶ,ಪರ್ಯಂಕ ಶೌಚ,ಯೋಗಪಟ್ಟಾ ಪ್ರಧಾನ ನಡೆಯಲಿದೆ.
######
ನೂರಾರು ಶಿಷ್ಯಕುಟುಂಬವನ್ನು ಹೊಂದಿರುವ ಶ್ರೀಮನ್ನೆಲೆಮಾಂವು ಮಠಕ್ಕೆ ಏಳುನೂರು ವರ್ಷಗಳ ಇತಿಹಾಸವಿದೆ. ಇಲ್ಲಿಯವರೆಗೆ 25 ಯತಿಗಳು ವೈದಿಕಪರಂಪರೆಯನ್ನು ಮುಂದುವರಿಸಿದ್ದಾರೆ.ಶೃಂಗೇರಿ ಮಠದ ಸಹಮಠವಾಗಿರುವ ಈ ಮಠಕ್ಕೆ ಕಳೆದ 20ವರ್ಷಗಳಿಂದ ಯತಿಗಳು ಇರಲಿಲ್ಲ. ಈ ಭಾಗದ ಭಕ್ತರು ತಮಗೆ ಮಾರ್ಗದರ್ಶನ ಮಾಡಲು ಯತಿಗಳು ಬೇಕು ಎಂಬ ಬೇಡಿಕೆಯನ್ನು ಶೃಂಗೇರಿ ಜಗದ್ಗುರುಗಳಲ್ಲಿ ಇಡುತ್ತಾ ಬಂದಿದ್ದರು.
ಹೇರೂರು ಸೀಮೆಯ ಮಾಳಿಗೆಮನೆಯ ಸುನಂದಾ ಮತ್ತು ಗಣಪತಿ ಭಟ್ಟ ದಂಪತಿಗಳ ಸುಪುತ್ರರಾಗಿ ಜನಿಸಿದ್ದ ವಿನಾಯಕ ಭಟ್ಟ ವಿರಕ್ತ ಬ್ರಹ್ಮಚಾರಿಗಳಾಗಿದ್ದರು. ಸುಮಾರು ಎಂಟುವರ್ಷದಿಂದ ಶೃಂಗೇರಿ ಮಹಾಸಂಸ್ಥಾನದಲ್ಲಿ ಸಂಸ್ಕøತ,ಸಾಹಿತ್ಯ,ವೇದಾಂತಗಳ ಅಧ್ಯಯನ ನಡೆಸಿರುವ ವಿನಾಯಕ ಭಟ್ಟರು ಶ್ರೀಮನ್ನೆಲೆಮಾಮವುಮಠಕ್ಕೆ ಸೂಕ್ತ ಯತಿಗಳಾಗಬಲ್ಲರು ಎಂದು ಗುರುತಿಸಿ ಈಗ ಸನ್ಯಾಸ ದೀಕ್ಷೆ ನೀಡಲಿದ್ದಾರೆ.