ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸ್ಥಳೀಯ ಸವಿತಾ ಸಮಾಜದವರು ಸವಿತಾಮಹರ್ಷಿಜಯಂತಿ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ವೃತ,ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ
ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಕೊಂಚೂರು ಶ್ರೀ ಸವಿತಾ ಪೀಠದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ,ಸವಿತಾ ಸಮಾಜದ ಮಠ ಕಟ್ಟಲು ಸರ್ಕಾರ ಅನುದಾನ ನೀಡಬೇಕಾಗಿಲ್ಲ ಅತ್ಯಂತ ಹಿಂದುಳಿದಿರುವ ನಮ್ಮ ಸಮಾಜಕ್ಕೆ ಮೀಸಲಾತಿಯ ಅವಶ್ಯಕತೆ ಇದೆ.ಸವಿತಾ ಸಮಾಜ ಆರ್ಥಿಕವಾಗಿ,ಶೈಕ್ಷಣಿಕವಾಗಿ,ಸಾಮಾಜಿಕವಾಗಿ ಹಿಂದುಳಿದಿದೆ.
ಸಮಾಜದವರು ಮುಂದೆ ಬರಲು ಆರ್ಥಿಕ ಸಹಕಾರ ನೀಡಬೇಕು.ಮಠವನ್ನು ಭಕ್ತರ ಹಾಗೂ ಶಿಷ್ಯರ ಸಹಕಾರದೊಂದಿಗೆ ಕಟ್ಟುತ್ತೇವೆ. ಮಠ ಕಟ್ಟುವುದಕ್ಕೆ ನೀಡುವ ಹಣವನ್ನು ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ನೀಡಿ.
ಸರ್ಕಾರ ವಿವಿಧ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಆದರೆ ಸವಿತಾ ಸಮಾಜಕ್ಕೆ ಮಾತ್ರ ಸೀಮಿತವಾಗಿ ಸಹಕಾರ ನೀಡುತ್ತಿದೆ. ಸವಿತಾ ಸಮಾಜ ಎಂದೂ ಕಲ್ಪವೃಕ್ಷ ಇದ್ದ ಹಾಗೆ. ಎಲ್ಲ ಸಮಾಜದವರಿಗೂ ಸವಿತಾ ಸಮಾಜ ಬೇಕು. ಸನಾತನ ಧರ್ಮ ಉಳಿಯಬೇಕು ಸವಿತಾ ಸಮಾಜ ಬೆಳೆಯಬೇಕು. ಸಮಾಜದ ಪ್ರತಿಯೊಬ್ಬರೂ ಸಂಘಟನೆಗೆ ಹೆಚ್ಚಿನ ಅಧ್ಯತೆ ನೀಡಬೇಕು ಎಂದು ಹೇಳಿದರು.
ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸತೀಶ ಕೊಡಿಯಾ ಅಧ್ಯಕ್ಷತೆವಹಿಸಿದ್ದರು. ರಾಘವೇಂದ್ರ ಶಿಕಾರಿಪುರ, ನಾಗೇಶ ಮಹಾಲೆ, ಆನಂದ ಮಹಾಲೆ, ರಾಜೇಶ ಎನ್.ಕೊಡಿಯಾ, ಹನುಮಂತ ಕೆ.ಮಹಾಲೆ, ಪುಟ್ಟು ಭಂಡಾರಿ, ಪ್ರವೀಣ ಐ.ಮಹಾಲೆ, ಗಣಪತಿ ಎನ್.ಮಹಾಲೆ, ಕೆ.ಎನ್.ವೆಂಕಟೇಶ ಇತರರಿದ್ದರು.
ಇದೇ ಸಂದರ್ಭದಲ್ಲಿ ಸವಿತಾ ಸಮಾಜದ ಆಶಾ,ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರಿಸಲಾಯಿತು.