ಆದ್ಯೋತ್ ಸುದ್ದಿನಿಧಿ:
ರಾಜ್ಯಾದ್ಯಂತ ಕುಮಾರಸ್ವಾಮಿ ನೇತೃತ್ವದ ಜಾತ್ಯಾತೀತ ಜನತಾದಳವು ಜನತಾ ಜಲಧಾರೆ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ.ಅದರಂತೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಗೋಳಿಮಕ್ಕಿಯಲ್ಲಿ ಜೆಡಿಎಸ್ ಧುರೀಣ ಡಾ.ಶಶಿಭೂಷಣ ಹೆಗಡೆ ನೇತೃತ್ವದಲ್ಲಿ ಜನತಾಜಲಧಾರೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಶಶಿಭೂಷಣ ಹೆಗಡೆ,
ನಮ್ಮ ದೇಶದ ರಾಜ್ಯಗಳಲ್ಲಿ ಕರ್ನಾಟಕ ಶೇ.26 ರಷ್ಟು ನೀರಾವರಿ ಪ್ರಮಾಣ ಹೊಂದಿದೆ. ದೇಶದಲ್ಲಿ ಅತಿ ಕಡಿಮೆ ನೀರಾವರಿ ಪ್ರಮಾಣ ಹೊಂದಿದ ರಾಜ್ಯಗಳಲ್ಲಿ ನಮ್ಮ ರಾಜ್ಯವೂ ಎನ್ನುವುದು ವಿಷಾಧನೀಯವಿಷಯವಾಗಿದೆ ಅಪಾರ ಜಲಸಂಪತ್ತಿದ್ದರೂ ನೀರಾವರಿ ಸೌಲಭ್ಯಗಳಿಂದ ವಂಚಿತವಾದ ರಾಜ್ಯ ನಮ್ಮದು. ನಮ್ಮಲ್ಲಿ ಕೃಷ್ಣಾ,ಕಾವೇರಿ ಮುಂತಾದ ದೊಡ್ಡ ನದಿಗಳು ಇದೆ. ಜಿಲ್ಲೆಯಲ್ಲಿ ಕಾಳಿ,ಶರಾವತಿ, ಅಘನಾಶಿನಿಯಂಥ 5 ನದಿಗಳು ಹರಿದಿದ್ದರೂ ಅವುಗಳ ಸಮರ್ಪಕ ಬಳಕೆ ಆಗುತ್ತಿಲ್ಲ. ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಿ ಕಣ್ಣೆದುರು ಹರಿಯುವ ನದಿಗಳಲ್ಲಿ ನೀರಿದ್ದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಗುತ್ತದೆ. ಕೃಷಿಗೆ ನೀರಿನ ಬಳಕೆ ಸೌಲಭ್ಯ ಇರದ ಕಾರಣ ಕೃಷಿ ಕುಂಠಿತವಾಗುತ್ತಿದೆ.ಈ ನಾಡಿನ ಜಲಸಂಪನ್ಮೂಲದ ಕುರಿತಾಗಿ ಸಮರ್ಪಕವಾದ ಮಾಹಿತಿ, ಅರಿವು ಹೊಂದಿದ ಅಗ್ರಗಣ್ಯರಲ್ಲಿ ಮಾಜಿ ಪ್ರಧಾನಿ ದೇವೆಗೌಡರು ಪ್ರಮುಖರು. ಅವರಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಜಲಸಂಪನ್ಮೂಲದ ಬಳಕೆ, ನಿರ್ವಹಣೆಯ ಬಗ್ಗೆ ಅಪಾರ ಜ್ಞಾನ ಹೊಂದಿದವರು. ಅವರ ನೇತೃತ್ವದಲ್ಲಿ ಜಾತ್ಯಾತೀತ ಜನತಾದಳವು ನಮ್ಮ ರಾಜ್ಯದ ಜಲಸಂಪನ್ಮೂಲದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅದರ ಸಮರ್ಪಕ ನಿರ್ವಹಣೆಯ ಮೂಲಕ ಸಮೃದ್ಧ ಹಾಗೂ ಸ್ವಾಭಿಮಾನಿ ಕರ್ನಾಟಕ ಕಟ್ಟಲು ಜನತಾ ಜಲಧಾರೆಯ ಮೂಲಕ ಮುಂದಾಗಿದ್ದಾರೆ ಈ ಯಾತ್ರೆಯ ಉದ್ದೇಶ ಕೃಷಿ ಮತ್ತು ಕುಡಿಯುವ ನೀರಿನ ಬಳಕೆಗೆ ಈ ಜಲಸಂಪನ್ಮೂಲಗಳ ಬಳಕೆಯನ್ನು ಯಾವ ರೀತಿ ಮಾಡಬಹುದು ಎನ್ನುವದನ್ನು ಜನತೆಗೆ ತಲುಪಿಸುವದು. ಕೃಷಿ ಮತ್ತು ತೋಟಗಾರಿಕೆ, ತರಕಾರಿ ಬೆಳೆಗಳಿಗೆ ಯಾವ ರೀತಿ ಬಳಸಿಕೊಳ್ಳಬಹುದು, ಕುಡಿಯುವ ನೀರಿನ ಕೊರತೆಯನ್ನು ಹೇಗೆ ನಿವಾರಿಸಿಕೊಳ್ಳಬಹುದು ಎನ್ನುವದನ್ನು ಜನತೆಯ ಮುಂದಿಡುವದು ನಮ್ಮ ಬದ್ದತೆಯಾಗಿದೆ ಎಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಗಣಪಯ್ಯ ಗೌಡ ಮಾತನಾಡಿ, ರಾಜ್ಯದ 16 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಉದ್ಘಾಟನೆಗೊಂಡ ಜನತಾ ಜಲಧಾರೆ ಸಂಕಲ್ಪ ಯಾತ್ರೆ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದು ಜನರಲ್ಲಿ ಜಾಗೃತಿ ಉಂಟು ಮಾಡಲಾಗುತ್ತಿದೆ. ಜನಸಾಮಾನ್ಯರ ಕಷ್ಟ, ಸಮಸ್ಯೆ ಅರಿತ ದೇವೆಗೌಡ ಹಾಗೂ ಕುಮಾರಸ್ವಾಮಿ ಅವರ ಕುಟುಂಬ ಈ ನಾಡಿಗೆ ಸಮೃದ್ಧತೆಯನ್ನು ತರುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರು.
ತಾಲೂಕಾಧ್ಯಕ್ಷ ಕೆ.ಎಂ.ಹೆಗಡೆ, ಕಾರ್ಯಾಧ್ಯಕ್ಷ ಲಕ್ಷ್ಮಣ ನಾಯ್ಕ ಬೇಡ್ಕಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸತೀಶ ಹೆಗಡೆ ಬೈಲಳ್ಳಿ, ಪದಾಧಿಕಾರಿಗಳಾದ ಶ್ರೀಧರ ಕೊಂಡ್ಲಿ, ಮೌಲಾ ಸಾಬ್, ಜಿಲ್ಲಾ ಪ್ರಮುಖರಾದ ವಿ.ಎಂ.ಭಂಡಾರಿ, ರಮೇಶ ನಾಯ್ಕ, ಮುತ್ತಣ್ಣ ಸಂಗೂರಮಠ, ತುಕಾರಾಂ ಮುಂತಾದವರಿದ್ದರು.
ಸಂಗಮದಿಂದ ಜಲ ಸಂಗ್ರಹ: ಜಾತ್ಯಾತೀತ ಜನತಾದಳ ಆಯೋಜಿಸಿದ ಜನತಾ ಜಲಧಾರೆ ಸಂಕಲ್ಪ ಯಾತ್ರೆಯನ್ನು ಕಾನಸೂರು ಸಮೀಪದ ಬಾಳೂರಿನಲ್ಲಿ ಸ್ವಾಗತಿಸಲಾಯಿತು. ಅಲ್ಲಿನ ಅಘನಾಶಿನಿ ಮತ್ತು ಶಾಲ್ಮಲಾ ನದಿಗಳ ಸಂಗಮದಲ್ಲಿ ನದಿಯ ಮದ್ಯೆ ನಿರ್ಮಿಸಲಾದ ಈಶ್ವರ ಲಿಂಗಕ್ಕೆ ಪೂಜೆ ಸಲ್ಲಿಸಿ, ಸಂಗಮದ ನೀರನ್ನು ಸಂಗ್ರಹಿಸಲಾಯಿತು. ಜಲಕುಂಭದಲ್ಲಿ ಡಾ|ಶಶಿಭೂಷಣ ಹೆಗಡೆ, ಗಣಪಯ್ಯ ಗೌಡ ಮುಂತಾದವರು ಸಂಗಮದ ನೀರನ್ನು ಸಂಗ್ರಹಿಸಿದರು. ತಾಲೂಕಾಧ್ಯಕ್ಷ ಕೆ.ಎಂ.ಹೆಗಡೆ, ಕಾರ್ಯಾಧ್ಯಕ್ಷ ಲಕ್ಷ್ಮಣ ನಾಯ್ಕ ಬೇಡ್ಕಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸತೀಶ ಹೆಗಡೆ ಬೈಲಳ್ಳಿ, ಪದಾಧಿಕಾರಿಗಳಾದ ಶ್ರೀಧರ ಕೊಂಡ್ಲಿ, ಮೌಲಾ ಸಾಬ್, ಅನಂತ ಗೌಡ, ಜಿಲ್ಲಾ ಪ್ರಮುಖರಾದ ವಿ.ಎಂ.ಭಂಡಾರಿ, ರಮೇಶ ನಾಯ್ಕ, ಮುತ್ತಣ್ಣ ಸಂಗೂರಮಠ, ತುಕಾರಾಂ, ಮಿರ್ಜಾನಕರ್ ಮುಂತಾದವರು ಪಾಲ್ಗೊಂಡಿದ್ದರು.