ಆದ್ಯೋತ್ ಸುದ್ದಿನಿಧಿ:
ರಾಜ್ಯದಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಶುಕ್ರವಾರ ಇಬ್ಬರು ಪೊಲೀಸ್ ಪೇದೆಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉಡುಪಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಯುತ್ತಿದ್ದ ಕೇಂದ್ರದ ಬಳಿ ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದ ಪೇದೆಯೊಬ್ಬರು ಕರ್ತವ್ಯನಿರತ ಸ್ಥಳದಲ್ಲೇ ಗುಂಡಿಕ್ಕಿಕೊಂಡು ಮೃತಪಟ್ಟಿದ್ದಾರೆ.ಬೆಂಗಳೂರು ಉತ್ತರ ತಾಲೂಕು ಹೆಸರಘಟ್ಟದಲ್ಲಿ ಮತ್ತೊಬ್ಬ ಮುಖ್ಯಪೇದೆ ನೇಣಿಗೆ ಶರಣಾಗಿದ್ದಾರೆ.
ಉಡುಪಿ ಜಿಲ್ಲಾ ಕೇಂದ್ರದ ಆದಿಉಡುಪಿ ಪ್ರೌಢಶಾಲೆ ಆವರಣದಲ್ಲಿ ಸಶಸ್ತ್ರ ಮೀಸಲು ಪಡೆಯ ಮುಖ್ಯಪೇದೆ ರಾಜೇಶ್ ಕುಲಾಲ್ ಗುಂಡಿಕ್ಕಿಕೊಂಡು ಮೃತಪಟ್ಟಿದ್ದಾರೆ. ಪ್ರೌಢಶಾಲೆಯ ಕೊಠಡಿಯೊಳಗೆ ಎಸ್ಸೆಸ್ಸೆಲ್ಸಿ ಎಕ್ಸಾಂ ಉತ್ತರ ಪತ್ರಿಕೆಯ ಮೌಲ್ಯಮಾಪನ ನಡೆಯುತ್ತಿದೆ. ಉತ್ತರ ಪತ್ರಿಕೆ ಕೊಠಡಿಯ ಭದ್ರತಾ ನಿರ್ವಹಣೆಯಲ್ಲಿದ್ದ ರಾಜೇಶ್ ಕುಂದರ್ ತಮ್ಮದೇ ಸರ್ವೀಸ್ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ತಿಂಗಳ ಹಿಂದೆ ಗಂಗೊಳ್ಳಿಯಲ್ಲಿ ಸಿಬ್ಬಂದಿ ನಡುವೆ ನಡೆದ ಹೊಡೆದಾಟದಲ್ಲಿ ರಾಜೇಶ್ ಕುಂದರ್ ಅವರು ಅಮಾನತುಗೊಂಡಿದ್ದು ನಿನ್ನೆಯಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್‌ಪಿ ಹಾಗೂ ಉಡುಪಿ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂ.ಉತ್ತರ ತಾಲೂಕಿನ ಹೆಸರುಘಟ್ಟದಲ್ಲಿ ಕೋಡಿಗೆಹಳ್ಳಿ ಪೊಲೀಸ್ ಠಾಣೆಯ ಮುಖ್ಯಪೇದೆ ಮಂಜುನಾಥ್(44) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ತಿಂಗಳಿಂದ ಕೆಲಸಕ್ಕೆ ತೆರಳಿದೆ ಮನೆಯಲ್ಲೇ ಇದ್ದ ಮಂಜುನಾಥ್ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮನೆಯವರೆಲ್ಲರೂ ಊರಿಗೆ ತೆರಳಿದ್ದ ವೇಳೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಿಯಾಗಿ ಕೆಲಸಕ್ಕೆ ಹೋಗದೆ ಕುಡಿತ ಚಟ ಅಂಟಿಸಿಕೊಂಟಿದ್ದರಂತೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.