ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಗೋಡು ಗ್ರಾಮದ ಶ್ರೀ ಈಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಹಾಗೂ ಕಟ್ಟಡ ಸಮಿತಿ,ನಾಗರೀಕರು ಆಯೋಜಿಸಿದ್ದ ಕೆರೆಬೇಟೆ ಸಮಯದಲ್ಲಿ ಟ್ರಸ್ಟ್ ಸಮಿತಿಯವರ ಹಾಗೂ ಕೆರೆಬೇಟೆ ಮಾಡಲು ಬಂದವರ ನಡುವೆ ಗಲಾಟೆ ನಡೆದಿದ್ದು ತಡೆಯಲು ಬಂದ ಪೊಲೀಸ್ರ ಮೇಲೆ ಕೆರೆಬೇಟೆ ಮಾಡಲು ಬಂದವರು ಹಲ್ಲೆ ಮಾಡಿದ್ದಲ್ಲದೆ ಊರಿನ ಹಲವು ಮನೆಗಳ ಮೇಲೆ ಅಂಗಡಿಗಳ ಮೇಲೆ ದಾಳಿ ನಡೆಸಿ ಸಿಕಿದ್ದನ್ನು ದೋಚಿದ ಘಟನೆ ರವಿವಾರ ನಡೆದಿದೆ.
ಸ್ಥಳೀಯ ಈಶ್ವರ ದೇವಾಲಯದ ಕಟ್ಟಡದ ಸಹಾಯಾರ್ಥ ಸ್ಥಳೀಯ ದೊಡ್ಡಕೆರೆಯಲ್ಲಿ ಕೂಣಿಬೇಟೆಯನ್ನು ಆಯೋಜಿಸಿ ಕಳೆದ ಮೂರು ತಿಂಗಳಿಂದ ವ್ಯಾಪಕ ಪ್ರಚಾರ ಮಾಡಲಾಗಿತ್ತು. ಕೆರೆ ಬೇಟೆ ಮಾಡಲು ಕೇವಲ ತಾಲೂಕಿನ ಜನರಷ್ಟೆ ಅಲ್ಲದೆ ಹಿರೆಕೇರೂರು,ಸೊರಬಾ,ಶಿರಸಿ,ದಾವಣಗೇರೆ,ಸಾಗರ,ಶಿವಮೊಗ್ಗದಿಂದಲೂ ಜನರು ಬಂದಿದ್ದರು.
ಸುಮಾರು 7000 ಜನರಿಗೆ 600ರೂ. ಪಡೆದು ಪಾಸ್ ನೀಡಲಾಗಿತ್ತು ಸುಮಾರು ಹತ್ತುಸಾವಿರಕ್ಕೂ ಹೆಚ್ಚು ಜನರು ಅಲ್ಲಿ ಸೇರಿದ್ದರು 12.30ಕ್ಕೆ ಕೆರಗೆ ಇಳಿಯಲು ಅನುಮತಿ ನೀಡಲಾಯಿತು. ಆದರೆ ಈಡೀ ಕೆರೆಯಲ್ಲಿ ಒಂದೇ ಒಂದು ಮೀನು ಸಿಗಲಿಲ್ಲ ಮೀನನ್ನು ಮೊದಲೇ ಹಿಡಿಯಲಾಗಿದೆ ಎಂದು ಕೆರೆಬೇಟೆಗೆ ಬಂದವರು ಆರೋಪಿಸಿ ತಮ್ಮ ಹಣವನ್ನು ವಾಪಸ್ ನೀಡುವಂತೆ ಆಗ್ರಹಿಸಿದರು ಆದರೆ ಸಮಿತಿಯವರು ಹಣಕೊಡಲು ಒಪ್ಪದಿದ್ದಾಗ ಗಲಾಟೆ ಪ್ರಾರಂಭವಾಗಿದೆ ಬೆರಳೆಣಿಕೆಯಷ್ಟಿರುವ ಪೊಲೀಸ್ರಿಗೆ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ ಅಲ್ಲದೆ ಕೆರೆಬೇಟೆಗೆ ಬಂದವರು ತಾವು ತಂದ ಕೂಣಿಯಿಂದಲೇ ಹಲ್ಲೆ ನಡೆಸಿದ್ದಾರೆ. ಇದರಿಂದ ಪಿಎಸ್ಐ ಮಹಂತೇಶ ಕುಂಬಾರ ಹಾಗೂ ಕೆಲವು ಸಿಬ್ಬಂದಿಗಳಿಗೆ ಗಾಯವಾಗಿದೆ. ನಂತರ ಶಿರಸಿಯಿಂದ ಹೆಚ್ಚಿನ ಪಡೆ ಬಂದು ಜನರನ್ನು ನಿಯಂತ್ರಿಸಿದ್ದಾರೆ ಅಲ್ಲದೆ ಸಮಿತಿಯವರಿಂದ ಹಣ ವಾಪಸ್ ಕೊಡಿಸಿದ್ದಾರೆ ಆದರೆ ಅಷ್ಟರಲ್ಲೆ ಜನರು ಊರಿನ ಮನೆಮನೆಗೆ ನುಗ್ಗಿ ಸಾಮಾನುಗಳನ್ನು ಹೊತ್ತೋಯ್ದಿದ್ದಾರೆ ಹೆಂಗಸರು ಮಕ್ಕಳೆನ್ನದೆ ಎಲ್ಲರ ಮೇಲೂ ಹಲ್ಲೆ ನಡೆಸಿದ್ದಾರೆ. ಸಮಿತಿಯ ಮುಖ್ಯಸ್ಥ ಮಾರುತಿ ನಾಯ್ಕ ಮನೆಗೆ ನುಗ್ಗಿ ಮಾರಾಟಕ್ಕಿಟ್ಟ ಬೆಲ್ಲ,ಶುಂಠಿ,ಪಂಪಸೆಟ್ ಸೇರಿದಂತೆ ಸಾಕಷ್ಟು ವಸ್ತುಗಳನ್ನು ಹೊತ್ತೋಯ್ದದ್ದಲ್ಲದೆ ಮನೆಯನ್ನು ಜಖಂ ಮಾಡಿದ್ದಾರೆ. ಸ್ಥಳೀಯ ಹಾಲು ಡೇರಿಯ ಕಂಪ್ಯೂಟರ ಸೇರಿದಂತೆ ಲಕ್ಷಾಂತರರೂ.ನ ವಸ್ತುಗಳನ್ನು ದೋಚಲಾಗಿದೆ ಸುಮಾರು 2-3 ತಾಸು ದಾಂದಲೆಗೆ ಕೆರೆಬೇಟೆ ನಡೆಸಿದ ಕಾನಗೋಡು ಗ್ರಾಮ ಸಾಕ್ಷಿಯಾಯಿತು
.
ಶಿರಸಿಯಿಂದ ಡಿವೈಎಸಪಿ ನೇತೃತ್ವದ ಪೊಲೀಸ್ ತಂಡ ಬರುವಷ್ಟರಲ್ಲಿ ಅಪಾರ ಪ್ರಮಾಣದ ಹಾನಿಯಾಗಿತ್ತು.
ಸಂಜೆ 6 ಗಂಟೆಯ ಸುಮಾರಿಗೆ ಸ್ಥಳಕ್ಕೆ ಅಪರಜಿಲ್ಲಾಪೊಲೀಸ್ ಅಧಿಕಾರಿ ಎಸ್.ಬದರಿನಾಥ ಭೇಟಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಬದರಿನಾಥ,ಒಂದರಿಂದೊಂದೂವರೆ ಸಾವಿರ ಜನರು ಸೇರುವ ನಿರೀಕ್ಷೆಯಲ್ಲಿದ್ದವರಿಗೆ ಸುಮಾರು ಐದು ಸಾವಿರ ಜನರು ಸೇರಿದ್ದಾರೆ.ಪೊಲೀಸ್ ರಿಗೂ ಗಾಯವಾಗಿದೆ ಊರಿನಲ್ಲಿ ಮನೆಗಳನ್ನು ದೋಚಿದ್ದಾರೆ ಎನ್ನಲಾಗುತ್ತಿದೆ.ಎಲ್ಲವನ್ನು ಪರಿಶೀಲಿಸಿ ಪ್ರಕರಣ ದಾಖಲಿಸಲಾಗುವುದು ರಾಜಕೀಯ ಕಾರ್ಯಕ್ರಮ ಅಲ್ಲವಾದ್ದರಿಂದ ನೀತಿಸಂಹಿತೆ ಜಾರಿಯಲ್ಲಿದ್ದರೂ ಅನುಮತಿ ನೀಡಿರಬಹುದು ಎಲ್ಲವನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
—–
ವಿಧಾನಪರಿಷತ್ ಚುನಾವಣೆ ಘೋಷಣೆಯಾಗಿದೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದರೂ ಕೆರೆಬೇಟೆಯಂತಹ ಇಷ್ಟು ದೊಡ್ಡ ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡಿದವರು ಯಾರು? ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನಸೇರುವುದು ಸಮಿತಿಯವರಿಗೆ ತಿಳಿದಿತ್ತು ಆದರೂ ಸೂಕ್ತ ಬಂದೋಬಸ್ತ್ ಮಾಡುವಂತೆ ಪೊಲೀಸ್ರಿಗೆ ತಿಳಿಸಲಿಲ್ಲವೇ? ಸಿದ್ದಾಪುರದಲ್ಲಿ ಇಷ್ಟು ದೊಡ್ಡ ಸಮೂಹವನ್ನು ತಡೆಯುವಷ್ಟು ಪೊಲೀಸ್ ಸಿಬ್ಬಂದಿ ಇಲ್ಲ ಎನ್ನುವುದು ಪೊಲೀಸ್ ಅಧಿಕಾರಿಗಳಿಗೆ ತಿಳಿದಿರಲಿಲ್ಲವೇ? ಈ ಎಲ್ಲ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.