ಮೇಘಸ್ಪೋಟವಾದ ಭಟ್ಕಳಕ್ಕೆ ಬೊಮ್ಮಾಯಿ ಭೇಟಿ,ಪರಿಹಾರ ವಿತರಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಮೇಘಸ್ಪೋಟವಾಗಿ ಭಾರಿಪ್ರಮಾಣದಲ್ಲಿ ಮಳೆಯಾದುದಲ್ಲದೆ ನೂರಾರು ಮನೆಗಳಿಗೆ ನೀರು ನುಗ್ಗಿ ಅಪಾರಪ್ರಮಾಣದಲ್ಲಿ ಹಾನಿಯಾಗಿತ್ತು.ಅಲ್ಲದೆ ಮುಟ್ಟಳ್ಳಿ ಗ್ರಾಮದಲ್ಲಿ ಮನೆಕುಸಿದು ನಾಲ್ವರು ಸಾವನ್ನಪ್ಪಿದ್ದರು.ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಟ್ಕಳಕ್ಕೆ ಭೇಟಿ ನೀಡಿ ಜನರಿಗೆ ಸಾಂತ್ವಾನ ಹೇಳಿದರು.ಮೃತಪಟ್ಟವರಿಗೆ ಪರಿಹಾರ ವಿತರಣೆ ಮಾಡಿದರು.

‌ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ,
ಸಾವನ್ನಪ್ಪಿದ ಪ್ರತಿಯೊಬ್ಬರಿಗೂ ತಲಾ 5 ಲಕ್ಷ ರೂಪಾಯಿಗಳ ಪರಿಹಾರ ಹಾಗೂ ಅವರ ಕುಟುಂಬದ ಮಕ್ಕಳಿಗೆ ಪಿ.ಜಿ ವರೆಗೆ ಉಚಿತ ಶಿಕ್ಷಣ ಮತ್ತು ವಸತಿ ಸೌಕರ್ಯವನ್ನು ನೀಡುತ್ತೇವೆ
ಇಂತಹ ಘಟನೆ ನಿಜಕ್ಕೂ ವಿಷಾದನೀಯ, ಜಿಲ್ಲೆಯಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಾವ ಮನೆಗಳಿಗೆ ತೊಂದರೆ ಇದೆ ಅಂತಹ ಮನೆಯವವರನ್ನು ಈಗಾಗಲೇ ಸ್ಥಳ ಬದಲಾವಣೆ ಮಾಡಲು ನೋಟಿಸ್ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಅನೇಕ ಮನೆಗಳಿಗೆ, ಬೆಳೆಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ ಹಾಗೂ ಮೀನುಗಾರರಿಗೂ ತೊಂದರೆಯಾಗಿದ್ದು ಈ ಕೂಡಲೇ ವರದಿ ತೆಗೆದುಕೊಂಡು ಪರಿಹಾರ ನೀಡಲಾಗುವುದು.ರಾಜ್ಯದಲ್ಲಿ ಇಂದು 14 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು 115 ಹಳ್ಳಿಗಳಿಗೆ ತೊಂದರೆಯುಂಟಾಗಿದ್ದು 4 ಜನ ಸಾವನ್ನಪ್ಪಿದ್ದಾರೆ. 600 ಮನೆಗಳು ಸಂಪೂರ್ಣ ನಾಶವಾಗಿದ್ದು ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಈಗಾಗಲೇ ರಾಜ್ಯದ ಮೂಲಭೂತ ಸೌಕರ್ಯಗಳಿಗೆ ತುರ್ತು 500 ಕೋಟಿ ಬಿಡುಗಡೆ ಮಾಡಲಾಗಿದೆ ಇನ್ನೂ ಹೆಚ್ಚು ಹಾನಿಯಾಗುವ ಸಂಭವ ಇದ್ದು ಜಿಲ್ಲೆಗೆ ವಿಶೇಷ ಅನುದಾನ ನೀಡಲಾಗುವುದು ಜಿಲ್ಲೆಯ ಬಹು ದಿನಗಳ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣದ ಸಂಪೂರ್ಣ ಮಾಹಿತಿ ತೆಗೆದುಕೊಂಡು ಅದಕ್ಕೆ ಸಂಬಂಧಿಸಿದಂತೆ ಕಾರ್ಯ ಕೈಗೊಳ್ಳಲಾಗುವುದು ಹಾಗೂ ಈಗ ಇರುವ ಆಸ್ಪತ್ರೆಗಳಿಗೆ ವೈದ್ಯರ ಕೊರತೆಯಿದ್ದು ಅದನ್ನು ಕೂಡ ನಿವಾರಿಸಲಾಗುವುದು
ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಂದಾಯ ಇಲಾಖೆ ಸಚಿವ ಆರ್. ಅಶೋಕ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಇಲಾಖೆ ಸಚಿವ ಶಿವರಾಂ ಹೆಬ್ಬಾರ್, ಹಾಗೂ ಇನ್ನಿತರ ಶಾಸಕರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು.

About the author

Adyot

Leave a Comment