ಗಂಗಾಧರ ಕೊಳಗಿಯವರ “ಮಾಸದ ನೆನಪು” ಕೃತಿ ಲೋಕಾರ್ಪಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಬಾಲಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್, ಪ್ರಯೋಗ ಸೇವಾ ಸಂಸ್ಥೆ,ಆದ್ಯೋತ್ ವೆಬ್ ನ್ಯೂಸ್ ಸಿದ್ದಾಪುರ ಇವರ ಸಹಯೋಗದಲ್ಲಿ ಸಾಹಿತಿ ಗಂಗಾಧರ ಕೊಳಗಿಯವರ ಆದ್ಯೋತ್ ವೆಬ್‌ನ್ಯೂಸ್‌ನಲ್ಲಿ ಅಂಕಣರೂಪದಲ್ಲಿ ಬಂದ ಆಯ್ದ ಬರಹಗಳ ಮಾಸದ ನೆನೆಪು ಕೃತಿಯನ್ನು ಲೋಕಾರ್ಪಣಗೊಳಿಸಲಾಯಿತು.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಬೆಳಗಾವಿಯ ಸಾಹಿತಿ,ವಿಮರ್ಶಕಿ ಡಾ.ಮೈತ್ರೇಯಿಣಿ ಗದಿಗೆಪ್ಪ ಗೌಡರ್,ಇಂದು ಸಮಾಜದಲ್ಲಿ ಕೇವಲ ಚಲನಚಿತ್ರ ನಟ-ನಟಿಯರನ್ನು ಮಾತ್ರ ಸೆಲೆಬ್ರೆಟಿಗಳು ಎಂದು ಪರಿಗಣಿಸಲಾಗುತ್ತಿದೆ ಇದು ಅತ್ಯಂತ ದುಃಖದ ವಿಷಯವಾಗಿದೆ ಸಮಾಜದ ಜ್ಞಾನದ ಹಸಿವನ್ನು ನೀಗಿಸುವ ಮೇಧಾವಿಗಳು,ಸಾಹಿತಿಗಳು,ಜ್ಞಾನಿಗಳು ಸೆಲೆಬ್ರೆಟಿಗಳಾಗಬೇಕಾಗಿದೆ.ಇಂದಿನ ಯುವ ಜನತೆ ಇದನ್ನು ಅರ್ಥಮಾಡಿಕೊಂಡರೆ ಸಮಾಜ ಮೌಲ್ವಿಕವಾಗಿ ಬೆಳೆಯಬಲ್ಲದು.ಲೇಖಕನಾದವನು ಬರಹದ ಜೊತೆಗೆ ತಾನು ಬದುಕುವ ಬದುಕು ಕೂಡ ಜನರ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು ವ್ಯಕ್ತಿಗಳ ಒಡನಾಟ ಹೇಗೆ ನಮ್ಮ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಕೊಳಗಿಯವರು ತಮ್ಮ ಕೃತಿಯಲ್ಲಿ ಉತ್ತಮವಾಗಿ ನಿರೂಪಿಸಿದ್ದಾರೆ. ಸಮಾಜದಲ್ಲಿ ಖ್ಯಾತಿ ಪಡೆದಿರುವ ವ್ಯಕ್ತಿಗಳ ಮತ್ತು ಸಾಮಾನ್ಯರ ನಡುವೆ ನಾವೇ ಕಂದಕವನ್ನು ಏರ್ಪಡಿಸಿಕೊಂಡಿದ್ದೇವೆ. ಇದನ್ನು ನಿವಾರಿಸಿ ಸಾಹಿತಿಗಳು ಸಮಾಜದಲ್ಲಿ ಮುಖ್ಯರು ಎನ್ನುವುದನ್ನು ತೋರಿಸಬೇಕಾಗಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಕೃತಿಯ ಕುರಿತು ಮಾತನಾಡಿ,ಒಬ್ಬ ಸಾಮಾನ್ಯ ವ್ಯಕ್ತಿ ಹೆಸರಾಂತ ಸಾಹಿತಿಗಳನ್ನು ಭೇಟಿ ಮಾಡಿದಾಗ ಅವರ ಸಾಮಾನ್ಯತೆ ಹೇಗಿರುತ್ತದೆ ಎನ್ನುವುದನ್ನು ಕೊಳಗಿ ಸರಳವಾಗಿ,ಸುಲಲಿತವಾಗಿ ಬಿಚ್ಚಿಡುತ್ತಾ ಹೋಗುತ್ತಾರೆ. ಈಗಾಗಲೆ ಆರು ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಕೊಳಗಿಯವರ ಏಳನೇ ಕೃತಿಯೂ ಸುಂದರವಾಗಿ ಮೂಡಿ ಬಂದಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ ಎನ್ ವಾಸರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಸಾಹಿತ್ಯ ಪರಿಷತ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಹಿರಿಯ-ಕಿರಿಯ ಸಾಹಿತಿಗಳ ಕೃತಿಯನ್ನು ಬಿಡುಗಡೆ ಮಾಡುವುದೂ ಸೇರಿದೆ ಸಾಹಿತ್ಯ ಪರಿಷತ್‌ಗೆ ಸದಸ್ಯರಾಗಬಯಸುವವರು ಆಪ್ ಮೂಲಕವೂ ಸದಸ್ಯತ್ವ ಪಡೆಯಬಹುದು ಹೆಚ್ಚು ಹೆಚ್ಚು ಜನರು ಸಾಹಿತ್ಯಪರಿಷತ್ ಸದಸ್ಯರಾಗಬೇಕು ಎಂಬ ಉದ್ದೇಶವನ್ನು ಪರಿಷತ್ ಹೊಂದಿದೆ. ಪರಿಷತ್‌ನ್ನು ಗಟ್ಟಿಗೊಳಿಸಲು ಯಾವುದೇ ಸಲಹೆ-ಸೂಚನೆಗಳನ್ನು ನೀಡಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗೋಪಾಲ್ ನಾಯ್ಕ, ಆದ್ಯೋತ ವೆಬ್ ನ್ಯೂಸ್‌ನ ಗಣೇಶ ಭಟ್, ಕೃತಿಕಾರ ಗಂಗಾಧರ ಕೊಳಗಿ ಮಾತನಾಡಿದರು.
ಸಾಹಿತಿ ಗಂಗಾಧರ ಕೊಳಗಿಯವರನ್ನು ಸಾಹಿತ್ಯ ಪರಿಷತ್‌ವತಿಯಿಂದ ಸನ್ಮಾನಿಸಲಾಯಿತು. ಡಾ.ಮೈತ್ರೇಯಿಣಿ ಗದಿಗೆಪ್ಪ ಗೌಡರ್ ದಂಪತಿಗಳು ಕೊಳಗಿಯವರನ್ನು ಸನ್ಮಾನಿಸಿದರು.
ಶಿಕ್ಷಕ ಎಂ.ಆರ್.ಭಟ್ ನಿರೂಪಣೆ ಮಾಡಿದರು.ಸುಮಿತ್ರಾ ಶೇಟ್ ಭಾವಗೀತೆ ಹಾಡಿದರು.

About the author

Adyot

Leave a Comment