“ಯಕ್ಷಸಿರಿ ಪ್ರಶಸ್ತಿ” ಪುರಸ್ಕೃತ ಯಕ್ಷಗಾನ ಕಲಾವಿದ ಕೃಷ್ಣಾಜಿ ಬೇಡ್ಕಣಿಯವರಿಗೆ ಸನ್ಮಾನ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಬೇಡ್ಕಣಿಯಲ್ಲಿ ಇತ್ತೀಚೆಗೆ ಯಕ್ಷಗಾನ ಅಕಾಡೆಮಿ ನೀಡುವ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಕೃಷ್ಣಾಜಿ ಬೇಡ್ಕಣಿಯವರಿಗೆ ಸ್ಥಳೀಯ ಶ್ರೀರಾಮಾಂಜನೆಯ ಕಲಾಬಳಗ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನವರು ಸನ್ಮಾನ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಟೀಂ ಪರಿವರ್ತನ ಸಂಘಟನೆಯ ಮುಖ್ಯಸ್ಥ ಹಿತೇಂದ್ರ ನಾಯ್ಕ ಮಾತನಾಡಿ,
ಕಲೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಕಲಾವಿದರು ಕಷ್ಟದ ಜೀವನವನ್ನು ಸಾಗಿಸುತ್ತಿದ್ದಾರೆ ಇಂತಹ ಕಲಾವಿದರ ಸಹಾಯಕ್ಕೆ ಸರಕಾರ ಬರಬೇಕಿದೆ.ಯಕ್ಷಗಾನ ಕಲೆ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು ಇಂತಹ ಕಲೆಯನ್ನು ನಮ್ಮ ಪಠ್ಯಪುಸ್ತಕವಾಗಿಸುವ ಕೆಲಸವಾಗಬೇಕು ಯಕ್ಷಗಾನ ಕಲೆ ಕೇವಲ ಮನರಂಜನೆಗೆ ಸೀಮಿತವಾಗದೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಎಚ್ಚರಿಸುವ ಕೆಲಸವನ್ನು ಮಾಡುವಂತಿರಬೇಕು.ಬಡತನದಲ್ಲೆ ಜೀವನ ಸಾಗಿಸುತ್ತಿದ್ದರೂ ೫೦ ವರ್ಷಗಳ ಕಾಲ ಯಕ್ಷಗಾನ ಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕೃಷ್ಣಾ ಜಿ ಬೇಡ್ಕಣಿಯವರ ಜೀವನ ನಮಗೆಲ್ಲ ಮಾದರಿಯಾಗಿದೆ ಎಂದು ಹೇಳಿದರು.


ಅತಿಥಿಯಾಗಿ ಭಾಗವಹಿಸಿದ್ದ ಪ್ರೋ. ಎಂ. ಕೆ. ನಾಯ್ಕ ಹೊಸಳ್ಳಿ ಮಾತನಾಡಿ, ಹಳ್ಳಿಗಳಲ್ಲಿ ಸಾಮಾಜಿಕ ನಾಟಕಗಳತ್ತ ಜನರು ಒಲವು ತೋರುತ್ತಿದ್ದಾಗ ಕೃಷ್ಣಾ ಜಿ ಯವರು ಕಡಿಮೆ ವೆಚ್ಚದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಯಕ್ಷಗಾನದತ್ತ ಜನರನ್ನು ಸೆಳೆದ ಕ್ರಾಂತಿಕಾರಿ. ಅವರಲ್ಲಿರುವ ವಿದ್ಯೆ ಅವರ ವಿನಯದಿಂದ ಶೋಭೆ ಗೊಂಡಿದೆ ಎಂದರು.
ಪತ್ರಕರ್ತ ಗಣೇಶ ಭಟ್ ಮಾತನಾಡಿ,ಕೃಷ್ಣಾಜಿಯವರಂತಹ ಕಲಾ ಸಾಧಕರನ್ನು ಗುರುತಿಸಲು ನಮಗೆ ೫೦ ವರ್ಷಗಳೇ ಬೇಕಾಯಿತು. ಪ್ರಶಸ್ತಿಗಳು ಮಾರಾಟಕ್ಕಿರುವ ಇಂದಿನ ದಿನದಲ್ಲಿ ಯಕ್ಷಗಾನ ಅಕಾಡೆಮಿಯವರು ನಿಜವಾದ ಸಾಧಕನನ್ನು ಗುರುತಿಸಿ ಯಕ್ಷಸಿರಿ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತೋಷ ತಂದಿದೆ. ಆದರೆ ಅಭಿಜಾತ ಕಲಾವಿದ ಕೃಷ್ಣಾಜಿ ಬೇಡ್ಕಣಿಯವರಿಗೆ ರಾಜ್ಯೋತ್ಸವ ಪ್ರಶಸ್ತಿಯಂತಹ ಮೌಲ್ಯಯುತ ಪ್ರಶಸ್ತಿ ಅವರಿಗೆ ದೊರಕಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಲೀಫ್ ಆರ್ಟನಲ್ಲಿ ಸಾಧನೆ ಮಾಡಿದ ತೃಪ್ತಿ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೋಟೆ ಆಂಜನೇಯ ದೇವಾಲಯದ ಅಧ್ಯಕ್ಷ ವಿ ಎನ್ ನಾಯ್ಕ ಬೇಡ್ಕಣಿ,ಸಾಮಾಜಿಕ ಕಾರ್ಯಕರ್ತ ಬಷೀರ್ ಸಾಬ್ ಮಾತನಾಡಿದರು.

ಗ್ರಾಪಂ ಸದಸ್ಯ ಗೋವಿಂದ ನಾಯ್ಕ ಮತ್ತು ಪದ್ಮಪ್ರಿಯ ನಾಯ್ಕ, ಶ್ರೀ ರಾಮಾಂಜನೇಯ ಕಲಾ ಬಳಗದ ಅಧ್ಯಕ್ಷ ರಾಮಕೃಷ್ಣ ನಾಯ್ಕ ಕಲಕೈ , ಹಿರಿಯರಾದ ಪಿ ಬಿ ಹೊಸೂರ್, ಸಿ ಎಸ್ ಗೌಡರ್, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಶ್ರೀ ರಾಮಾಂಜನೇಯ ಕಲಾ ಬಳಗದ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಚಂದ್ರಶೇಖರ್ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನಂತರ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನಗೊಂಡಿತು‌.

ಹಿಮ್ಮೇಳ: ಗಣಪತಿ ಭಟ್ ಬರತೋಟ, ವೇಣು ಪುರಪ್ಪೆಮನೆ, ರಾಮಚಂದ್ರ ನಾಯ್ಕ ಹೆಮ್ಮನಬೈಲ್,
ಚಂಡೆ: ಧನಂಜಯ ಪುರದಮಠ , ಮೃದಂಗ:ಮಂಜುನಾಥ‌ ಗುಡ್ಡೆದಿಂಬ

ಮುಮ್ಮೇಳ: ದುಷ್ಟಬುದ್ದಿ: ಕೃಷ್ಣಾ ಜಿ ಬೇಡ್ಕಣಿ, ಸುಬುದ್ದಿ ಮತ್ತು ಕುಳಿಂದ: ಚಂದ್ರಶೇಖರ ಶೆಟ್ಟಿ (ಬಾಬಣ್ಣ)ಕಾಳೆನಳ್ಳಿ , ಚಂದ್ರಹಾಸ: ಮಂಜುನಾಥ ಶೆಟ್ಟಿ ಕಾಳೆನಳ್ಳಿ, ಮದನ: ನಿರಂಜನ ಹೆಗಡೆ , ದೂತ: ರಮೇಶ್ ಆಡುಕಟ್ಟಾ, ಬ್ರಾಹ್ಮಣ: ವೆಂಕಟ್ರಮಣ ಹೆಗಡೆ ಮಾದ್ನಕಳ, ವಿಷೆಯೆ: ಕನ್ನಪ್ಪ ಮಾಸ್ತರ್ ತಡಗಳಲೆ, ಮೇದಾವಿನಿ: ಸದಾನಂದ ಶಿರಸಿ, ಕಾಳಿ: ಗಿರಿಧರ ನಾಯ್ಕ, ಕಟುಕ : ಲಕ್ಷ್ಮಣ ಬೇಡ್ಕಣಿ ಬಾಲಗೋಪಾಲ: ಕು. ನಿಶಾ ಎಂ ನಾಯ್ಕ ಹೊನ್ನೆಬಿಡಾರ

About the author

Adyot

Leave a Comment