ಅಣಲೇಬೈಲ್ ನಲ್ಲಿ ಸೇವಾಪಾಕ್ಷಿಕ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಅಣಲೇಬೈಲ್ ಮಹಾಶಕ್ತಿಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಜನ್ಮದಿನದಿಂದ ನಡೆಯುತ್ತಿರುವ ‘ಸೇವಾ ಪಾಕ್ಷಿಕ’ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಬಿಜೆಪಿಯ ಐದು ಶಕ್ತಿಕೇಂದ್ರಗಳಲ್ಲಿ ಹೆಗ್ಗರಣಿ, ತಂಡಾಗುಂಡಿ (ಹಿರೇಹದ್ದ-ಶಿವಳಮನೆ), ಹೇರೂರು, ಹಾರ್ಸಿಕಟ್ಟಾ ಮತ್ತು ಹೊಸಗದ್ದೆಯಲ್ಲಿ ಸ್ವಚ್ಚತಾ ಸೇವಾ ಚಟುವಟಿಕೆಗಳು ನಡೆದವು.
ಹೆಗ್ಗರಣಿಯ ಶ್ರೀ ಕಟ್ಟೆಬೀರಪ್ಪ ದೇವಸ್ಥಾನದ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಉತ್ತರ ಕನ್ನಡದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಸೇವಾ ಚಟುವಟಿಕೆಯ ಮೂಲಕ ಸನ್ಮಾನ್ಯ ಮೋದಿ ಜೀ ಅವರಿಗೆ ಜನ್ಮದಿನದ ಶುಭಾಶಯವನ್ನು ಕೋರಲು ಸೆಪ್ಟೆಂಬರ್ ಹದಿನೇಳರಿಂದ – ಅಕ್ಟೋಬರ್ ಎರಡರವರೆಗೂ ವಿವಿಧ ಸೇವಾ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಪ್ರಧಾನ ಮಂತ್ರಿಗಳಾದ ಸಂದರ್ಭದಲ್ಲಿ ತಾನು ‘ಪ್ರಧಾನ ಸೇವಕ’ ಎಂಬ ಭಾವದಿಂದ ರಾಷ್ಟ್ರದ ಕೆಲಸ ಮಾಡುತ್ತೇನೆ ಎಂದು ನರೇಂದ್ರ ಮೋದಿ ಜೀ ಅವರು ಹೇಳಿದ್ದರು, ಅವರ ಪ್ರತೀ ನಡೆಯಲ್ಲಿ ಹಾಗೂ ಯೋಜನೆಯಲ್ಲಿ ಜನಪರ ಕಾಳಜಿಯನ್ನು ಕಾಣಬಹುದು. ಇದೇ ಕಾರಣಕ್ಕೇ ಜನಪ್ರಿಯತೆ, ಅಪಾರ ಗೌರವ ಮತ್ತು ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.

ಸೆ. 17 ನರೇಂದ್ರ ಮೋದಿ ಜೀ ಜನ್ಮದಿನದಂದು ದೇಶದಲ್ಲಿ 1.07 ಲಕ್ಷ ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದು ಭಾರತವು ವಿಶ್ವದಾಖಲೆ ನಿರ್ಮಿಸಿದೆ. ವಿಶೇಷವಾಗಿ ಬಿಜೆಪಿ ಯುವಮೋರ್ಚಾ ರಕ್ತದಾನ ಶಿಬಿರದ ಆಯೋಜನೆ ಮಾಡಿದ್ದು, ಜಿಲ್ಲೆಯಲ್ಲಿ ಐದು ರಕ್ತದಾನ ಶಿಬಿರಗಳು ನಡೆದಿವೆ ಭಾರತೀಯ ಜನತಾ ಪಾರ್ಟಿಯು ಸೇವಾ_ಹೀ_ಸಂಘಟನ್ ಪೋರ್ಟಲ್ ಮೂಲಕ ರಕ್ತದಾನಿಗಳ ನೋಂದಣಿ ಮಾಡುತ್ತಿದೆ, ಅಲ್ಲದೇ ಸರ್ಕಾರವು ಈ-ರಕ್ತಕೋಶ ಎಂಬ ಆ್ಯಪ್ ಮೂಲಕ ರಕ್ತದಾನಿಗಳ ನೋಂದಣಿಗೆ ಅವಕಾಶ ಕಲ್ಪಿಸಿದೆ ಎಂದು ಮಾಹಿತಿ ನೀಡಿದರು.

ಸ್ವಚ್ಚತೆಯ ಕುರಿತು ಮೋದಿ ಜೀ ವ್ಯಾಪಕವಾಗಿ ಜನಜಾಗೃತಿಯನ್ನು ಮೂಡಿಸಿದರು, ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಪುಸ್ತಕ ಅನಾವರಣ ಮಾಡುವಾಗ ಪುಸ್ತಕದ ಮೇಲಿದ್ದ ಕವರ್ ಅನ್ನು ತನ್ನ ಕಿಸೆಯಲ್ಲಿ ಹಾಕಿಕೊಂಡರು. ತಾವೇ ಸ್ವತಃ ಪೊರಕೆ ಹಿಡಿದು ಸ್ವಚ್ಚತಾ ಕಾರ್ಯ ಕೈಗೊಂಡರು, ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಕಸ ಸಂಗ್ರಹಿಸಿದರು, ಹೀಗೆ ಮೋದಿ ಜೀ ಮೇಲ್ಪಂಕ್ತಿ ಹಾಕುತ್ತಾ ನಮಗೆಲ್ಲಾ ಪ್ರೇರಣೆ ನೀಡುತ್ತಾ, ರಾಷ್ಟ್ರವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.

ನಂತರ ತಂಡಾಗುಂಡಿ ಶಕ್ತಿಕೇಂದ್ರದ ಹಿರೇಹದ್ದ-ಶಿವಳಮನೆ ಬಸ್ ತಂಗುದಾಣದ ಸ್ವಚ್ಚತೆ ಮಾಡಲಾಯಿತು. ಅಮೃತ ಸರೋವರ ಕಾರ್ಯಕ್ರಮದ ಭಾಗವಾಗಿ ಹೇರೂರಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಕೆರೆಯ ಕಟ್ಟೆಯಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು, ಹಾರ್ಸಿಕಟ್ಟಾ ಶಕ್ತಿಕೇಂದ್ರದ ಹಲಸಗಾರ ಕೆರೆಯ ಸ್ವಚ್ಛತೆಯನ್ನು ಮಾಡಿ ಅಲ್ಲಿನ ಕಾರ್ಯಕರ್ತರು ಅಮೃತ ಸರೋವರ ಕಾರ್ಯಕ್ರಮವನ್ನು ಆಚರಿಸಿದರು. ಮಧ್ಯಾಹ್ನ ಹೊಸಗದ್ದೆ ಶಕ್ತಿಕೇಂದ್ರದಲ್ಲಿ ಹಸರಗೋಡ ಗ್ರಾಮ ಪಂಚಾಯತ, ಆರೋಗ್ಯ ಕೇಂದ್ರ, ಗ್ರಂಥಾಲಯ ಹಾಗೂ ಅಂಗನವಾಡಿ ಕೇಂದ್ರವನ್ನು ಸ್ವಚ್ಛಗೊಳಿಸುವ ಮೂಲಕ ಸೇವಾ ಚಟುವಟಿಕೆಗಳೊಂದಿಗೆ
ಮೋದಿ ಜೀ ಅವರ ಜನ್ಮದಿನದವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ಅಣಲೇಬೈಲ್ ಮಹಾಶಕ್ತಿಕೇಂದ್ರ ಅಧ್ಯಕ್ಷ ನಾರಾಯಣ ಹೆಗಡೆ ಚಾರೆಕೋಣೆ, ಶ್ರೀಮನ್ನೆಲೆಮಾವು ಮಠದ ಅಧ್ಯಕ್ಷ ಜಿ ಎಂ ಹೆಗಡೆ ಹೆಗ್ನೂರು, ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಗೌಡ, ಗಣೇಶ ಎನ್ ಹೇರೂರು, ಹೆಗ್ಗರಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸರೋಜಾ ರಾವ್, ಹಸರಗೋಡ ಗ್ರಾಮ ಪಂಚಾಯತ್ ಅಧ್ಯಕ್ಷ ಗೌರಿ ಅಣ್ಣಪ್ಪ ಗೌಡ, ರವಿ ಹಿರೇಹದ್ದ, ಎಸ್ ಎ ಹೆಗಡೆ ಜೋಗಿನಮನೆ, ಬಾಲಚಂದ್ರ ಹೆಗಡೆ, ಪ್ರದೀಪ ಹೆಗಡೆ ಕರ್ಜಗಿ, ನವೀನ ತಾರೇಸರ, ಮಧುರಾ ಭಟ್, ಮಹೇಶ ಗೌಡ, ರಾಜೀವ ಭಾಗ್ವತ್, ಹರಿಹರ ನಾಯ್ಕ, ದೇವರು ಹೆಗಡೆ, ಪರಮೇಶ್ವರ ಹೆಗಡೆ, ಎನ್ ಕೆ ಭಟ್, ಗೋಪಾಲ ಹೆಗಡೆ, ನಾರಾಯಣ ಹೆಗಡೆ, ಮಧುಕರ ಹೆಗಡೆ ಮತ್ತು ಗಣೇಶ ಹೆಗಡೆ ಮುಂತಾದವರು ಭಾಗವಹಿಸಿದ್ದರು.

About the author

Adyot

Leave a Comment