ಅರಣ್ಯ ಹಕ್ಕು ಹೋರಾಟಗಾರರಿಂದ ಶಾಸಕರ ಕಚೇರಿ ಸಮೀಪ ಪ್ರತಿಭಟನೆ

ಆದ್ಯೋತ್ ಸುದ್ದಿನಿಧಿ:
ಅರಣ್ಯ ಅತಿಕ್ರಮಣ ಭೂಮಿ ಹಕ್ಕು ವೇದಿಕೆಯಿಂದ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಚೇರಿಯ ಸಮೀಪ ಪ್ರತಿಭಟನೆ ನಡೆಸಿದರು.

ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ನೇತೃತ್ವದಲ್ಲಿ ಶಿರಸಿ ಪಟ್ಟಣದ ಬಿಡ್ಕಿಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಅರಣ್ಯವಾಸಿಗಳ ಪರ ಸುಪ್ರಿಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸುವ ಕುರಿತು ಸರ್ಕಾರದ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಆಗ್ರಹಿಸಿ ಶಾಸಕರ ಕಚೇರಿಯವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ,
ಟಿ.ಎನ್.ಶ್ರೀನಿವಾಸ, ಪ್ರದೀಪ ಶೆಟ್ಟಿ, ಲಕ್ಷ್ಮಣ ಮಾಳಕ್ಕನವರ್, ದೇವರಾಜ ಮರಾಠಿ, ರಾಘವೇಂದ್ರ ನಾಯ್ಕ, ಬಾಲಚಂದ್ರ ಶೆಟ್ಟಿ,ಶ್ರಿ ನಿವಾಸಿ ಮೂರ್ತಿ ಸಾಗರ, ಜಿಎಂ ಶೆಟ್ಟಿ, ರಾಘವೇಂದ್ರ ನಾಯ್ಕ್ ಬೆಳಲೆ, ಖಾದರ್ ಆನವಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಗೋಡು ತಿಮ್ಮಪ್ಪ ಮಾತನಾಡಿ,ಅರಣ್ಯವಾಸಿಗಳು ಇನ್ನೂ ಭೂಮಿ ಹಕ್ಕಿಗೆ ಹೋರಾಟ ನಡೆಸುತ್ತಿದ್ದಾರೆಂದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೆ ಎಂಬ ಸಂದೇಹ ಮೂಡಿದೆ.ಜನರ ಕೂಗಿನ ಶಕ್ತಿ ವಿಧಾನಸಭೆ, ಸಂಸತ್ ನಲ್ಲಿ ಪ್ರತಿಧ್ವನಿಸುತ್ತಿಲ್ಲ. ಸರ್ಕಾರಕ್ಕೆ ಸಾಮಾನ್ಯ ಜನರ ಸಂಕಷ್ಟ ಇನ್ನೂ ಅರಿವಿಗೆ ಬಂದಂತಿಲ್ಲ. ಸರ್ಕಾರದ ಕಣ್ಣು ಮುಚ್ಚಿದೆ. ಕಿವಿ ಕೆಪ್ಪಾಗಿದೆ ಅರಣ್ಯ ಭೂಮಿ ಒಡೆತನಕ್ಕೆ ಹೋರಾಟ ಮಾಡುವವರಿಗೆ ನ್ಯಾಯ ಕೊಡುವ ಕೆಲಸದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಆದ್ದರಿಂದ ಎರಡು ಸರ್ಕಾರವನ್ನು ಖಂಡಿಸುತ್ತೇನೆ. ಈ ಸಮಸ್ಯೆ ಬಗೆಹರಿಸಲು ಕಾನೂನು ತಿದ್ದುಪಡಿ ಮಾಡಬೇಕು 2-3 ಎಕರೆ ಭೂಮಿ ಸಾಗುವಳಿ ಮಾಡುವವರಿಗೆ ಅದರ ಒಡೆತನ ಸಿಗುವಂತಾಗಬೇಕು. ಈ ಹಿಂದೆ ಗೇಣಿ ಒಡೆತನವು ಕೂಡ ಸುತಿರ್ಗ ಹೋರಾಟದ ಮೂಲಕ ಸಿಕ್ಕಿದೆ .ಅದೇ ರೀತಿ ಈಗಲೂ ಹೋರಾಟದ ಮೂಲಕ ಭೂಮಿ ಹಕ್ಕು ಸಿಗುವಂತಾಗಲಿ
ಎಂದರು.

ಎ.ರವೀಂದ್ರ ನಾಯ್ಕ ಮಾತನಾಡಿ,ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಕೇಳಲು ಐದು ಸಾವಿರಕ್ಕಿಂತ ಹೆಚ್ಚು ಪ್ರತಿಭಟನೆ ನಡೆಸಿದ್ದೇವೆ. ಅರಣ್ಯ ಭೂಮಿ ಹಕ್ಕು ಸಿಗುವವರೆಗೂ ಹೋರಾಟ ಕೈಬಿಡಲಾಗದು ಸುಪ್ರಿಂ ಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದರೆ ಅರಣ್ಯವಾಸಿಗಳು ನೆಲೆ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೆ ಜಿಲ್ಲೆಯ 85 ಸಾವಿರ ಕುಟುಂಬಗಳು ಸಲ್ಲಿಸಿದ್ದ ಅರಣ್ಯ ಹಕ್ಕು ಅರ್ಜಿಯಲ್ಲಿ 69 ಸಾವಿರ ಅರ್ಜಿ ತಿರಸ್ಕೃತಗೊಂಡಿದೆ. ಇವರೆಲ್ಲರ ಸ್ಥಿತಿ ಡೋಲಾಯಮಾನವಾಗಿದೆ
ರಾಜ್ಯ ಸರ್ಕಾರ ಅರಣ್ಯವಾಸಿಗಳ ಪರ ಸುಪ್ರಿಂಕೋರ್ಟ್ ನಲ್ಲಿ 15 ದಿನದಲ್ಲಿ ಅಫಿಡವಿಟ್ ಸಲ್ಲಿಸಬೇಕು. ಈ ಬಗ್ಗೆ ವಿಧಾನಸಭಾಧ್ಯಕ್ಷರು ಸ್ಪಷ್ಟಪಡಿಸಬೇಕು ಎಂದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಅರಣ್ಯ ವಾಸಿಗಳ ಪರವಾಗಿ ನಾನು ಹಿಂದಿನಿಂದಲೂ ನಿಂತಿದ್ದೇನೆ ಸುಪ್ರಿಂಕೋರ್ಟ್ ನಲ್ಲಿ ಸಮರ್ಥ ವಾದ ಮಂಡಿಸಿ, ಅರಣ್ಯವಾಸಿಗಳ ಪರ ಅಫಿಡವಿಟ್ ಸಲ್ಲಿಸುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ತಜ್ಞರ ಮೂಲಕ ಮಾಹಿತಿ ಪಡೆಯಲಾಗುವುದು ಎಂದು ಭರವಸೆ ನೀಡಿದರು.

About the author

Adyot

Leave a Comment