ಖ್ಯಾತ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ರಾಜ್ಯೋತ್ಸವ ಪ್ರಶಸ್ತಿ

ಆದ್ಯೋತ್ ಸುದ್ದಿನಿಧಿ:
ಯಕ್ಷಗಾನ ಬಡಗುತಿಟ್ಟಿನ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ರಾಜ್ಯದ 67 ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಉತ್ತರಕನ್ನಡ ಜಿಲ್ಲೆಯ ಮೂಲದ ಹಾಲಿ ಉಡುಪಿ ಜಿಲ್ಲೆಯ ಕಿರುಮಂಜೇಶ್ವರದ ನಿವಾಸಿಯಾಗಿರುವ ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ಮುಂಡಗೋಡು ತಾಲೂಕಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

65 ವಯಸ್ಸಿನ ಸುಬ್ರಹ್ಮಣ್ಯ ಧಾರೇಶ್ವರ ಉ.ಕ.ಜಿಲ್ಲೆಯ ಗೋಕರ್ಣದವರು.ಬಾಲ್ಯದಿಂದಲೇ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರು ದಕ್ಷಿಣ ಕನ್ನಡ ಜಿಲ್ಲೆಯ ಅಮೃತೇಶ್ವರಿ ಮೇಳದಲ್ಲಿ ವಿದ್ಯುತ್ ಕೆಲಸಗಾರರಾಗಿ ಸೇರಿದವರು. ಉತ್ತಮ ಶಾರೀರ ಹೊಂದಿದ್ದ ಇವರು ಅಂದಿನ ಖ್ಯಾತ ಭಾಗವತ ನಾರಾಯಣ ಉಪ್ಪೂರರಿಂದ ಭಾಗವತಿಕೆ ಕಲಿಯಲು ಪ್ರಾರಂಭಿಸಿ ಸುಮಾರು 44 ವರ್ಷಕ್ಕೂ ಹೆಚ್ಚು ಕಾಲ ಭಾಗವತರಾಗಿ ಯಕ್ಷಗಾನ ಕಲೆಯ ಸೇವೆ ಸಲ್ಲಿಸಿದ್ದಾರೆ.

ಪ್ರಾರಂಭದ ಏಳುವರ್ಷ ಅಮೃತೇಶ್ವರಿ ಮೇಳದ ಭಾಗವತರಾಗಿದ್ದ ಇವರು ನಂತರ 26 ವರ್ಷಗಳ ಕಾಲ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ,ನಿರ್ದೇಶಕರಾಗಿ ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಯಕ್ಷಗಾನ ರಂಗದಲ್ಲಿ ಹೊಸಪ್ರಯೋಗಗಳನ್ನು ಮಾಡುವ ಮೂಲಕ ಬದಲಾದ ಕಾಲಕ್ಕೆ ಯಕ್ಷಗಾನವನ್ನು ಪರಿವರ್ತಿಸುವಲ್ಲಿ ಇವರ ಪಾತ್ರವೂ ಪ್ರಮುಖವಾದುದು.
ಪೌರಾಣಿಕ, ಐ0ತಿಹಾಸಿಕ ಹಾಗೂ ಸಾಮಾಜಿಕ ಯಕ್ಷಗಾನ ಪ್ರಸಂಗ ರಚನೆ, ನಿರ್ದೇಶನ, ಸಂಯೋಜನೆ ಹಾಗೂ ಪ್ರದರ್ಶನ ನೀಡಿದ ಕೀರ್ತಿ ಇವರದು.
ಹಲವಾರು ಪ್ರಶಸ್ತಿಗಳು ಇವರಿಗೆ ದೊರಕಿದ್ದು ಈಗ ರಾಜ್ಯೋತ್ಸವ ಪ್ರಶಸ್ತಿ ದೊರಕುವ ಮೂಲಕ ಯಕ್ಷಗಾನ ಕಲೆಯನ್ನು ಇನ್ನಷ್ಟು ಜೀವಂತವಾಗಿಡುವಲ್ಲಿ ಇದು ಸಹಾಯವಾಗಲಿದೆ ಎನ್ನಬಹುದು.
#####

###

###

About the author

Adyot

Leave a Comment