ಕದಂಬ ಸೈನ್ಯದಿಂದ ಭುವನೇಶ್ವರಿ ಸನ್ನಿಧಾನದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಭುವನಗಿರಿಯ ಕನ್ನಡ ತಾಯಿ ಭುವನೇಶ್ವರಿಯ ಸನ್ನಿಧಾನದಲ್ಲಿ ಮಂಡ್ಯ ಕದಂಬ ಸೈನ್ಯ ಸಂಘಟನೆಯವರಿಂದ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿದ್ದಾಪುರ ಹೊಸೂರು ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಮಾತನಾಡಿ,ಇಂಗ್ಲೀಷ ಕಲಿಕೆಯ ವ್ಯಾಮೋಹ ಹೆಚ್ಚಾಗುತ್ತಿದ್ದು ಇದರಿಂದ ಕನ್ನಡ ಭಾಷೆಗೆ ಕುತ್ತು ಬರುತ್ತಿದೆ
ಇಂಗ್ಲೀಷ ಭಾಷೆ ಬದುಕಿಗೆ ಅವಶ್ಯಕ ಎಂದು ಬಿಂಬಿಸಲಾಗುತ್ತಿದೆ ಇದರಿಂದ ಯುವ ಸಮೂಹ ಇಂಗ್ಲೀಷ್ ಭಾಷೆ ಕಲಿಯದಿದ್ದರೆ ಉದ್ಯೋಗ ಸಿಗುವುದಿಲ್ಲ ಎಂಬ ಆತಂಕ ಸ್ಥಿತಿಯಲ್ಲಿದ್ದಾರೆ ಇದರಿಂದ ಕನ್ನಡ ವ್ಯಾಸಂಗದಿಂದ ಮಕ್ಕಳು ದೂರಾಗುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಕನ್ಡಡ ಉಳಿವಿಗೆ ಕನ್ನಡಸಂಘಟನೆಗಳ ಪಾತ್ರ ಪ್ರಮುಖವಾದುದು. ಆದರೆ ಕನ್ನಡದ ಎಲ್ಲಾ ಸಂಘಟನೆಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋರಾಟ ರೂಪಿಸಿದರೆ ಅದು ಶಕ್ತಿಯುತವಾದ ಹೋರಾಟವಾಗಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಮಾತನಾಡಿ, ಇಂದು ಅತ್ಯಂತ ನೋವಿನ ಸಂಗತಿ ಎಂದರೆ ನಾನು ಕನ್ನಡಿಗ ನಾವು ಕನ್ನಡಿಗರು ಎಂದು ಹೇಳುವ ಪರಿಸ್ಥಿತಿ ನಮ್ಮಲ್ಲಿಲ್ಲ ಇದು ಅತ್ಯಂತ ದೌರ್ಭಾಗ್ಯವಾಗಿದೆ. ನಾವು ತಮಿಳುನಾಡಿಗೆ ಹೋದರೆ ಅಲ್ಲಿ ಯಾರು ತಮ್ಮ ಜಾತಿಯನ್ನು ಹೇಳುವುದಿಲ್ಲ ನಾವು ತಮಿಳಿಗರು ಎಂದು ಹೇಳುತ್ತಾರೆ. ಮೊದಲು ನಾನು ನಮ್ಮ ತಾಯಿ ಕನ್ನಡಾಂಬೆಯ ಮಗನಾಗಬೇಕು ನಂತರ ಭಾರತಾಂಬೆ ಎಂಬ ದೊಡ್ಡಮ್ಮನ ಮಗನಾಗಬೇಕು. ನಾವು ಕನ್ನಡಿಗರು ಎಂದು ನಾವು ಅಭಿಮಾನದಿಂದ ಹೇಳಬೇಕು. ನಮ್ಮಲ್ಲಿ ನಾನು ಎನ್ನುವ ಬದಲಾಗಿ ನಾವು ಎಂಬ ಪದವನ್ನು ಬಳಸಬೇಕು. ಎಲ್ಲರನ್ನೂ ಕನ್ನಡಿಗರು ಎಂಬ ಭಾವನೆಯಿಂದ ನೋಡಿ ಎಂದೂ ಅವರನ್ನು ಜಾತಿ ಆಧಾರದ ಮೇಲೆ ನೋಡಬೇಡಿ. ಕನ್ನಡಿಗರಿಗೆ ಉದ್ಯೋಗ ಕೊರತೆ ಉಂಟು ಮಾಡಿ ಭಾಷಾಂತರ ಮಾಡುತ್ತಿದ್ದಾರೆ. 2017 ರಲ್ಲಿ ಸರೋಜಿನಿ ಮಹೀಷೆ ವರದಿ ಸರ್ಕಾರಕ್ಕೆ ಸಲ್ಲಿಸಿದೆ ಆದರೆ ಈವರೆಗೂ ಆ ವರದಿ ಜಾರಿಯಾಗಿಲ್ಲ ಆ ವರದಿ ಜಾರಿಯಾಗಿದ್ದಿದ್ದರೆ ಕನ್ನಡಿಗರಿಗೆ ಉದ್ಯೋಗದ ಕೊರತೆಯಾಗುತ್ತಿರಲಿಲ್ಲ. ರಾಜಕೀಯ ಪಕ್ಷಗಳು ದೆಹಲಿ ಕಡೆಗೆ ಮುಖ ಮಾಡುವುದರಿಮದ ಕನ್ನಡವನ್ನು ಉಳಿಸುವ ಕೆಲಸ ಮಾಡುತ್ತಿಲ್ಲ.ಇದು ಕನ್ನಡಾಂಬೆಯ ಕ್ಷೇತ್ರ ಇಂತಹ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ.ಸರ್ಕಾರ ಮೊದಲನೆಯದಾಗಿ ಭುವನಗಿರಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಹಾಗೂ ಕನ್ನಡಾಂಬೆಯ ಕೀರ್ತಿಯನ್ನು ರಾಜ್ಯದ ಎಲ್ಲಾ ಕಡೆಗೂ ಪಸರಿಸುವಂತೆ ಮಾಡಬೇಕೆಂದು ಇಲ್ಲಿಯ ಶಾಸಕರು, ಸಂಸದರು, ಸಭಾಧ್ಯಕ್ಷರು ಮಂತ್ರಿಗಳಲ್ಲಿ ವಿನಂತಿಸಿಕೊಳ್ಳುತ್ತೇನೆ ಇಲ್ಲವಾದರೆ ಹೋರಾಟ ಮಾಡಲು ಸಿದ್ದ ಎಂದು ಹೇಳಿದರು.

ಅಭಿನಂದನಾ ನುಡಿಯಾಡಿದ ಉದಯಕುಮಾರ ಕಾನಳ್ಳಿ,ಕನ್ನಡವನ್ನು ಬೆಳೆಸಿದವರು ಕದಂಬ ವಂಶಸ್ಥರು.ಇಂದು ಕನ್ನಡಕ್ಕೆ ಕುತ್ತು ಬರುತ್ತಿದೆ ಗಡಿನಾಡಲ್ಲಿ ಕನ್ನಡ ಕಾಣೆಯಾಗುತ್ತಿದೆ ಇಂತಹ ಸಂದರ್ಭದಲ್ಲಿ ಕನ್ನಡ ಸಂಘಟನೆಗಳು ಕನ್ನಡ ಉಳಿವಿಗಾಗಿ ಧ್ವನಿ ಎತ್ತುತ್ತಿದ್ದಾರೆ. ಇದರಲ್ಲಿ ಕದಂಬ ಸೈನ್ಯ ಪ್ರಮುಖವಾದ ಸಂಘಟನೆಯಾಗಿದೆ. ಶಿರಸಿ ವಿಭಾಗದಲ್ಲಿ ಎರಡು ಕನ್ನಡ ಸ್ಥಾನಗಳಿವೆ ಒಂದು ಬನವಾಸಿ ಇನ್ನೊಂದು ಭುವನಗಿರಿ ಈಗಾಗಲೇ ಬನವಾಸಿ ಪ್ರಾಧಿಕಾರ ನಮ್ಮ ಹೋರಾಟದಿಂದ ಆಗಿದೆ ಈಗ ಭುವನಗಿರಿ ಪ್ರಾಧಿಕಾರ ರಚನೆ ಮಾಡಿ ಅಭಿವೃದ್ಧಿ ಮಾಡಬೇಕು ಅಲ್ಲದೆ ಅಭಿವೃದ್ಧಿಯ ಕಾರಣಕ್ಕೆ ಶಿರಸಿ ಜಿಲ್ಲೆಯಾಗಬೇಕು ಬನವಾಸಿ ತಾಲೂಕು ಆಗಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭುವನೇಶ್ವರಿ ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ,ಲಯನ್ಸ್ ಕಾರ್ಯದರ್ಶಿ ಕುಮಾರ ಗೌಡರ್,ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ,ಖ್ಯಾತ ವಕೀಲ ಆಶಾಲತಾ ಪುಟ್ಟೆಗೌಡರ್,ಶ್ರೀರಂಗಪಟ್ಟಣದ ಕಸಾಪ ಅಧ್ಯಕ್ಷೆ ಸರಸ್ವತಿ ಬಸವರಾಜ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರು,ಸಾಧಕರು ಸೇರಿ 42 ಜನರನ್ನು ಸನ್ಮಾನಿಸಲಾಯಿತು.

About the author

Adyot

Leave a Comment