ಆದ್ಯೋತ್ ಸುದ್ದಿನಿಧಿ:
ಶಿರಸಿಯಲ್ಲಿ ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡದ ಜಿಲ್ಲಾ ಕಾರ್ಯಾಲಯ ದೀನದಯಾಳ ಭವನದಲ್ಲಿ ‘ಸಂವಿಧಾನ ಸಮರ್ಪಣಾ ದಿವಸ’ವನ್ನು ಆಚರಿಸಲಾಯಿತು.
ಶಿರಸಿ ನಗರ ಸಭೆಯ ಅಧ್ಯಕ್ಷ ಗಣಪತಿ ನಾಯ್ಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಭಾರತಮಾತೆ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ,ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆಶಯದಂತೆ ಎಲ್ಲರ ಏಳಿಗೆಗಾಗಿ ಶ್ರಮಿಸೋಣ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡೋಣ ಎಂದರು.
ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾತನಾಡಿ, ಭಾರತ ಮಾತೆಯ ಶ್ರೇಷ್ಠ ಪುತ್ರ ಡಾ. ಬಿ ಆರ್ ಅಂಬೇಡ್ಕರ್ ‘ನಾನೊಬ್ಬ ಭಾರತೀಯ ಹಾಗೂ ಭಾರತೀಯ ರಾಷ್ಟ್ರೀಯತೆಯ ಪ್ರತಿಪಾದಕ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು ಆಧ್ಯಾತ್ಮದ ನೆಲೆಗಟ್ಟಿನಲ್ಲಿ ರಾಷ್ಟ್ರದ ಏಕತೆಯನ್ನು ಸಾಧಿಸಬೇಕು ಎಂದಿದ್ದರು.ಭಾರತದ ಸಂವಿಧಾನ ಯಾವರೀತಿ ಇರಬೇಕು ಎಂಬ ಸ್ಪಷ್ಟ ಕಲ್ಪನೆಯನ್ನು ಡಾ. ಬಿ ಆರ್ ಅಂಬೇಡ್ಕರ್ ಹೊಂದಿದ್ದರು, ಅಷ್ಟೇ ಅಲ್ಲ ಭಾರತಕ್ಕೆ ಏಕಾತ್ಮ ಶಾಸನ ಬೇಕು ಎಂದು ಪ್ರತಿಪಾದಿಸಿದ್ದರು. ಬ್ರಿಟೀಷರ ಪ್ರತ್ಯೇಕತಾವಾದವನ್ನು ಅರಿತಿದ್ದ ಅಂಬೇಡ್ಕರ್, ತುಷ್ಟೀಕರಣಕ್ಕಾಗಿ ಮುಸ್ಲಿಂ ಲೀಗ್ ಪ್ರತ್ಯೇಕ ಮತಕ್ಷೇತ್ರಗಳಿಗೆ ಬೇಡಿಕೆ ಇಟ್ಟಾಗ ಅದನ್ನು ವಿರೋಧಿಸಿದ್ದರು ಹಾಗೂ ಭಾರತದ ವಿಭಜನೆಯನ್ನೂ ಕೂಡಾ ವಿರೋಧಿಸಿದ್ದರು.ನಾನು ಮೊದಲನೆಯದಾಗಿ ಭಾರತೀಯ ಮತ್ತು ಕೊನೆಯದಾಗಿ ಕೂಡಾ ಭಾರತೀಯ ಎನ್ನುವ ಭಾವನೆ ಜಾಗೃತವಾಗಲಿ ಎಂದು ಡಾ. ಅಂಬೇಡ್ಕರ್ ಪ್ರತಿಪಾದಿಸಿದ್ದರು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್ ಅವರಿಗೆ ಸಲ್ಲಬೇಕಾದ ನಿಜವಾದ ಗೌರವವನ್ನು ಪಂಚತೀರ್ಥ ಎಂಬ ಕಲ್ಪನೆಯೊಂದಿಗೆ ಸಾಕಾರಗೊಳಿಸಿದ್ದಾರೆ ಎಂದು ಹೇಳಿದ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಭಾರತ ಸಂವಿಧಾನದ ಆಶಯಗಳಿಗೆ ಪೂರಕವಾಗಿಯೇ ಭಾರತೀಯ ಜನತಾ ಪಾರ್ಟಿಯ ಸಂವಿಧಾನ ಕೂಡಾ ಇರುವುದರಿಂದ ಅಂತ್ಯೋದಯದ ಅನುಷ್ಠಾನ ನಮ್ಮ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳಿಂದ ಆಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಭಾಗವಹಿಸಿದ ಪ್ರತಿಯೊಬ್ಬರೂ ಹೇಳಿದರು. ಇದೇ ಸಂದರ್ಭದಲ್ಲಿ ಎಸ್.ಸಿ ಮೋರ್ಚಾದವತಿಯಿಂದ ನಗರ ಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ನಾಮನಿರ್ದೇಶನಗೊಂಡ ಸದಸ್ಯರಿಗೆ ಸನ್ಮಾನಿಸಲಾಯಿತು.
ಎಸ್. ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಉದಯ ಬಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಪ್ರಧಾನ ಕಾರ್ಯದರ್ಶಿ ನಂದನ ಬೋರ್ಕರ್ ನಿರ್ವಹಿಸಿದರು, ಎಸ್. ಸಿ ಮೋರ್ಚಾದ ಶಿರಸಿ ನಗರದ ಅಧ್ಯಕ್ಷ ಅರವಿಂದ ನೇತ್ರೇಕರ ಸ್ವಾಗತಿಸಿದರು, ವಿನಾಯಕ ನಾಯ್ಕ ಪ್ರಾಸ್ತಾವಿಕ ನುಡಿದರು, ತೃಪ್ತಿ ವಂದಿಸಿದರು. ನಗರ ಸಭೆಯ ಉಪಾಧ್ಯಕ್ಷ ವೀಣಾ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆ, ಎಸ್.ಸಿ ಮೋರ್ಚಾದ ಜಿಲ್ಲಾ ಪ್ರಭಾರಿ ಪ್ರವೀಣ ಪವಾರ, ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ ಮತ್ತು ಶಿರಸಿ ನಗರ ಮತ್ತು ಗ್ರಾಮೀಣ ಮಂಡಲದ ಎಸ್.ಸಿ ಮೋರ್ಚಾದ ಕಾರ್ಯಕರ್ತರು, ಶಿರಸಿ ನಗರ ಸಭಾ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.