ಶಿರಸಿಯಲ್ಲಿ ” ಹವಿಹಾಸ್ಯ” ಫೇಸ್ಬುಕ್ ಬಳಗದವರ ಪ್ರಥಮ ಸ್ನೇಹಕೂಟ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಅರಣ್ಯ ನೌಕರರ ಸಮುದಾಯ ಭವನದಲ್ಲಿ ಹವಿಹಾಸ್ಯ ಎನ್ನುವ ಹವ್ಯಕರ ಫೇಸ್ಬುಕ್ ಬಳಗದ ಪ್ರಥಮ ಸ್ನೇಹಕೂಟ ನಡೆಯಿತು.

ಕಾರ್ಯಕ್ರಮದಲ್ಲಿ ಉತ್ತರ ಕನ್ನಡವಲ್ಲದೇ, ಶಿವಮೊಗ್ಗ, ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಇನ್ನೂ ಹಲವು ಜಿಲ್ಲೆಗಳಿಂದ ಸುಮಾರು 500 ಜನರು ಪಾಲ್ಗೊಂಡಿದ್ದರು.
ಬಳಗದ ಅಡ್ಮಿನ್ ಕೂಡಾ ಆದ ಹವ್ಯಕ ಹಾಸ್ಯ ಚಕ್ರವರ್ತಿ ಆರ್.ಜಿ. ಹೆಗಡೆ, ಶ್ಯಾಮ್ ಭಟ್ ಭಡ್ತಿ ಇನ್ನಿತರರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸ್ನೇಹಕೂಟವನ್ನು ಉದ್ದೇಶಿಸಿ ಮಾತನಾಡಿದ ಪ್ರತಿಷ್ಠಿತ ಅಪೋಲೋ ಇಂಟರ್ನ್ಯಾಷನಲ್ ಹೋಟೆಲ್ ಮಾಲೀಕ ಶ್ರೀಕಾಂತ್ ಭಟ್, ಹವಿಹಾಸ್ಯ ಫೇಸ್ಬುಕ್ ಬಳಗವು ಹವ್ಯಕ ಬಳಗಗಳಲ್ಲೇ ಮುಂಚೂಣಿಯಲ್ಲಿದ್ದು, ಕೇವಲ ಹತ್ತು ತಿಂಗಳಿನಲ್ಲೇ ಐದು ಸಾವಿರ ಜನರುಗಳು ಸೇರ್ಪಡೆಗೊಂಡು ದಾಖಲೆ ನಿರ್ಮಿಸಿದ್ದಲ್ಲದೇ, ಹಾಸ್ಯ, ಕಲೆ, ಸಾಹಿತ್ಯ ಇನ್ನಿತರ ಅನೇಕ ಪ್ರಕಾರಗಳಲ್ಲೂ ತೊಡಗಿಸಿಕೊಂಡು ಅದೆಷ್ಟೋ ತೆರೆಮರೆಯ ಪ್ರತಿಭೆಗಳನ್ನು ಹೊರ ತರುವ ಕಾರ್ಯ ಈ ಬಳಗದಲ್ಲಿ ನಡೆಯುತ್ತಿದೆ, ಇದೊಂದು ಬಳಗ ಇಲ್ಲದಿದ್ದರೆ ಹವ್ಯಕ ಸಮಾಜಕ್ಕೆ ಬಹಳ ನಷ್ಟವಾಗುತ್ತಿತ್ತು ಎಂದು ಹೇಳಿದರು.

ಗಾಯಕಿ ವಂದನಾ ಭಾಸ್ಕರ್ ಅವರ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸೇರಿದ ಪ್ರತಿಯೊಬ್ಬ ಸದಸ್ಯರನ್ನೂ ವೇದಿಕೆಯ ಮೇಲೆ ಕರೆದು ಅವರ ಪರಿಚಯ ಮಾಡಿಸಿ, ಸ್ಮರಣಿಕೆ ನೀಡಿದ್ದಲ್ಲದೇ, ಸ್ನೇಹಕೂಟದ ಅಂಗವಾಗಿ ನಡೆದಿದ್ದ ವಿಶೇಷ ಹವ್ಯಕಾವ್ಯ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ನೆರೆದಿದ್ದ ಎಲ್ಲಾ ಸದಸ್ಯರುಗಳಿಗೆ ಛಾಯಾ ಭಟ್, ಶಾಂತಲಾ ಹೆಗಡೆ ಅವರು ನಡೆಸಿಕೊಟ್ಟ ಫನ್ನೀ ಗೇಮ್ ಉತ್ಸಾಹವನ್ನು ಹೆಚ್ಚಿಸಿತು.
ರೂಪಾ ಹೆಗಡೆ ಅವರ ನಿರೂಪಣೆ, ಶಾಂತಾರಾಮ ಹೆಗಡೆ ತಾರಗೋಡ ಅವರ ಛಾಯಾಗ್ರಹಣ,ಜೊತೆಗೆ ರುಚಿಕರವಾದ ಊಟ ಕಾರ್ಯಕ್ರಮವನ್ನು ಸಂಪನ್ನಗೊಳಿಸಿತು. ಮಹೇಂದ್ರ ಭಟ್ ಅವರು ವಂದನಾರ್ಪಣೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಉಷಾ ಗದ್ದಗೀಮಠ, ಶ್ರೀಲತಾ ರಾಜೀವ್ ಹಾಗೂ ಭರತನಾಟ್ಯದಲ್ಲಿ ವಿದ್ವತ್ ಕಲಿಯುತ್ತಿರುವ ಪುಟಾಣಿ ರಜನಿ ರಾಜೀವ್ ಅವರ ಆಕರ್ಷಕ ನೃತ್ಯ ಜನರನ್ನು ರಂಜಿಸಿತು.

ನಿರ್ವಾಹಕ ಬಳಗದವರಾದ ಮಹೇಂದ್ರ ಭಟ್, ರಾಜು ಹೆಗಡೆ, ಮಹೇಶ್ ಹೆಗಡೆ, ದೀಪಕ್ ಹೆಗಡೆ, ರಾಜೀವ್ ಹೆಗಡೆ, ಛಾಯಾ ಭಟ್, ಶಾಂತಲಾ ಹೆಗಡೆ, ರಂಜು ಹೆಗಡೆ,ಲತಾ ಹೆಗಡೆ ಹಾಗೂ ಎಲ್ಲಾ ಸದಸ್ಯರುಗಳ ಪರಿಶ್ರಮದಿಂದ ಸ್ನೇಹಕೂಟ ಅಭೂತಪೂರ್ವ ಯಶಸ್ಸುಕಂಡಿತು.

About the author

Adyot

Leave a Comment