ಆದ್ಯೋತ್ ಸುದ್ದಿನಿಧಿ:
ಅಂಧ ಮಕ್ಕಳು ಜೀವನವನ್ನು ಸುಂದರವಾಗಿ ಅನುಭವಿಸಬೇಕು. ಅಂಧತ್ವ ತುಂಬಿದ ಮಕ್ಕಳಲ್ಲಿ ಅವರ ಅಂತರಂಗದಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಹಾಗೂ ಅವರೂ ಕೂಡ ಪ್ರಗತಿಯ ಮುಖ್ಯವಾಹಿನಿಗೆ ಬರುವಂತಾಗಲು ಸಿದ್ದಾಪುರದಲ್ಲಿ ಆಶಾಕಿರಣ ಟ್ರಸ್ಟ್ ಎಂಬ ಸಂಸ್ಥೆಯನ್ನು ೧೯೯೧ ರಲ್ಲಿ ಸ್ಥಾಪಿಸಲಾಯಿತು.
ಈ ಟ್ರಸ್ಟ್ ವತಿಯಿಂದ ಪಟ್ಟಣದ ಹಾಳದಕಟ್ಟಾದಲ್ಲಿ ಶ್ರೀ ಮುರಘರಾಜೇಂದ್ರ ಅಂಧಮಕ್ಕಳ ಶಾಲೆಯನ್ನು ಸ್ಥಾಪಿಸಿ ಅಂಧಮಕ್ಕಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ನಂತರದ ದಿನದಲ್ಲಿ ಲಯನ್ಸ್ ಶತಮಾನೋತ್ಸವ ಸ್ಮರಣೆಯ ವಿಕಲಚೇತನರ ವೃತ್ತಿಪರ ತರಬೇತಿ ಕೇಂದ್ರವನ್ನೂ ಸ್ಥಾಪಿಸಿ ಇವೆರಡೂ ಕೇಂದ್ರಗಳು ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದೆ.
ಇಲ್ಲಿ ೧ ರಿಂದ ೧೦ನೇ ತರಗತಿಯವರೆಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಬ್ರೈಲ್ ಲಿಪಿಯ ಮೂಲಕ ಶಿಕ್ಷಣ ವ್ಯವಸ್ಥೆ, ನುರಿತ ಅಧ್ಯಾಪಕ ವೃಂದ, ಸಂಗೀತ, ಕಲೆ ಹಾಗೂ ವೃತ್ತಿ ಶಿಕ್ಷಣ, ಆಂಗ್ಲಭಾಷಾ ಪ್ರಯೋಗಾಲಯ, ಅಲ್ಲದೇ ಅಂಧರಲ್ಲದ ಮಹಿಳೆಯರಿಗೆ ಹೊಲಿಗೆ ಶಿಕ್ಷಣ, ಯೋಗಶಿಕ್ಷಣ ಮತ್ತು ವಿಶೇಷವಾದ ಶೈಕ್ಷಣಿಕ ತರಬೇತನ್ನು ನೀಡುವ ವ್ಯವಸ್ಥೆ ಇರುತ್ತದೆ. ಇತ್ತಿಚಿನ ವರುಷಗಳಲ್ಲಿ ಅಧ್ಯಕ್ಷರಾದ ಡಾ. ರವಿ ಹೆಗಡೆ ಹೂವಿನಮನೆರವರ ವಿಶೇಷ ಪ್ರಯತ್ನದೊಂದಿಗೆ ಲಯನ್ಸ್ ಅಂತಾರಾಷ್ಟಿಯ ಸಂಸ್ಥೆಯಿಂದ ವಿಶೇಷ ಅನುದಾನ ಪಡೆದು ಸುಸಜ್ಜಿತ ಕಟ್ಟಡವನ್ನು, ಸಭಾಭವನವನ್ನು ಆಂಗ್ಲ ಭಾಷಾ ಪ್ರಯೋಗಾಲಯವನ್ನು ತೆರೆದಿದ್ದು, ಲಯನ್ಸ್ ಸಹಯೋಗದೊಂದಿಗೆ ದಕ್ಷಿಣಭಾರತದಲ್ಲಿಯೇ ನಡೆಯುತ್ತಿರುವ ಮೊದಲ ಅಂಧಮಕ್ಕಳ ವಸತಿ ಶಾಲೆ ಎಂಬ ಹೆಗ್ಗಳಿಕೆ ಇದೆ.
ಅವೆಲ್ಲಕ್ಕಿಂತ ಅಂಧ ಮಕ್ಕಳ ಬಾಳಿಗೆ ಶಿಕ್ಷಣವನ್ನು ರೂಪಿಸುವ ವ್ಯವಸ್ಥೆ, ವ್ಯವಸ್ಥಿತವಾಗಿ ನಡೆಯುತ್ತಿದೆ. ಉಚಿತ ಊಟ, ಉಪಾಹಾರ, ವಸತಿಯೊಂದಿಗೆ ರುಚಿ ಶುಚಿಯಾದ ಊಟೋಪಚಾರ, ಪರಿಸರ ಮತ್ತು ಅಂಧರಿಗೆ ಕ್ರೀಡಾ ತರಬೇತಿ, ಸಂಗಿತ ತರಬೇತಿ, ಕಂಪ್ಯೂಟರ್ ತರಬೇತಿ ಇವೆಲ್ಲ ದೊರೆಯುತ್ತಿದ್ದು ಅಂಧರಿಗೆ ಸ್ವಾವಲಂಬಿ ಜೀವನ ನಡೆಸಲು ಅಗತ್ಯ ಶಿಕ್ಷಣ, ವಿಕಲಚೇತನರಿಗೆ ವಿಶೇಷ ಶಿಕ್ಷಣ, ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಮಕ್ಕಳ ಶಿಕ್ಷಣ, ವೃತ್ತಿಪರ ತರಬೇತಿಗೆ ವ್ಯವಸ್ಥೆ ಇದೆ.
ಪೇಪರ್ ಕವ್ಹರ್ ಬ್ಯಾಗ್, ನರ್ಸರಿ ಕುರಿತು ವೃತ್ತಿಪರ ತರಬೇತಿ ಇಲ್ಲಿ ನಡೆಯುತ್ತಿದೆ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶವಿದೆ. ಉತ್ತಮ ಬ್ರೈಲ್ ವಾಚನಾಲಯವಿದೆ. ಉಚಿತ ವೈದ್ಯಕೀಯ ಚಿಕಿತ್ಸೆ ಸಹ ಇರುತ್ತದೆ.
ಸುಮತಿ ಮಹಿಳಾ ಉದ್ಯಮ ಕೇಂದವನ್ನು ಇತ್ತಿಚೆಗೆ ಪ್ರಾರಂಭಿಸಲಾಗಿದೆ. ಅಂಧಮಕ್ಕಳು ತಮ್ಮ ಪ್ರತಿಭೆಯನ್ನು ಬೆಳೆಸಿಕೊಂಡು ಮುಂದೆ ಉನ್ನತ ಸಾಧನೆ ಮಾಡಿರುವ ಡಾಕ್ಟರೇಟ್ ಪಡೆದಿರುವ ತಿಮ್ಮಪ್ಪ ಅಬಸೆ, ಜೋಯಲ್ ಫರ್ನಾಂಡಿಸ್, ಡಾ|| ನಾರಾಯಣ ರಾಯ್ಕರ ಇವರೆಲ್ಲ ಇಲ್ಲಿ ಓದಿದ ವಿದ್ಯಾರ್ಥಿಗಳು. ಹಲವು ವರುಷ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೧೦೦ ಕ್ಕೆ ೧೦೦ ಫಲಿತಾಂಶ ಬಂದಿದೆ. ಅನೇಕರು ೯೦ಕ್ಕಿಂತ ಹೆಚ್ಚಿನ ಅಂಕ ಪಡೆದಿರುವರು.
ಕೆ.ಕೆ. ರಮಣಿ, ಆರ್.ಜಿ. ಪೈ ಮಂಜೈನ್, ಡಾ|| ಮಧುಸೂಧನ ಶಾಮೈನ್‌ರವರು ಪ್ರಾರಂಭಿಕ ವರುಷಗಳಲ್ಲಿ ಹೆಚ್ಚು ಕ್ರಿಯಾಶೀಲರಾಗಿ ದುಡಿದರು. ಇತ್ತೀಚಿನ ಎರಡು ದಶಕಗಳಿಂದ ಡಾ. ರವಿ ಹೆಗಡೆ ಹೂವಿನಮನೆ ಅಧ್ಯಕ್ಷರಾಗಿ ಶಾಲೆಯ ಚಟುವಟಿಕೆ ವಿಸ್ತರಿಸಿ ಆದಕ್ಕೊಂದು ಹೊಸ ರೂಪ ನೀಡಿದ್ದಾರೆ. ಪ್ರಾರಂಭದಲ್ಲಿ ಪುಣೆಯ ಅರುಣಮಂಗಲ ಸೇವಾ ಸಂಸ್ಥೆಯ ಅರವಿಂದ ಪಿತ್ರೆ ತನ್ನ ಸಹಕಾರವನ್ನು ಬಹುವಾಗಿ ನೀಡಿ ಇತ್ತೀಚೆಗೆ ನಮ್ಮನ್ನಗಲಿದ್ದಾರೆ.
ಇದೀಗ ಸಂಸ್ಥೆಯ ಉಪಾಧ್ಯಕ್ಷರಾಗಿ ಸಿ.ಎಸ್. ಗೌಡರ್ ಹೆಗ್ಗೋಡಮನೆ, ಕಾರ್ಯದರ್ಶಿಯಾಗಿ ಕೇಶವ ಡಿ. ಶಾನಭಾಗ, ಕೋಶಾಧ್ಯಕ್ಷರಾಗಿ ನಾಗರಾಜ ಎಂ. ದೋಶೆಟ್ಟಿ, ಟ್ರಸ್ಟಿಗಳಾಗಿ ಜಿ.ಜಿ. ಹೆಗಡೆ ಬಾಳಗೋಡ, ಉಮಾ ಉದಯ ನಾಯಕ, ವಾಸುದೇವ ಶೇಟ್, ಸುಧೀರ ಬೇಂಗ್ರೆ, ಮಧುಮತಿ ಶೀಗೇಹಳ್ಳಿ, ಶ್ರೀಧರ ಭಟ್ಟ ಅಗ್ಗೆರೆ ಇದ್ದಾರೆ. ಡಾ. ರವಿ ಹೆಗಡೆ ಹೂವಿನಮನೆ ಅಧ್ಯಕ್ಷರಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಅಂಧರ ವಸತಿ ಶಾಲೆ ಎಂದು ರಾಜ್ಯಮಟ್ಟದ ಪ್ರಶಸ್ತಿ ಸಹ ೪ ವರುಷದ ಹಿಂದೆ ದೊರಕಿದೆ.
######
ಜಿ.ಜಿ.ಹೆಗಡೆ ಬಾಳಗೋಡು
########## ######## ####### ############
ಶುಕ್ರವಾರ ಮತ್ತು ಶನಿವಾರ ಆಶಾಕಿರಣ ಟ್ರಸ್ಟ ರಜತ ಮಹೋತ್ಸವ ಮತ್ತು ಜಾನಪದ ಕಲೋತ್ಸವ
ಆಶಾ ಕಿರಣ ಟ್ರಸ್ಟ ರಜತ ಮಹೋತ್ಸವ ಹಾಗೂ ಜಾನಪದ ಕಲೋತ್ಸವ ಫೆ.೩ ಮತ್ತು ೪ರಂದು ಜಗದ್ಗುರು ಮುರುಘರಾಜೇಂದ್ರ ಅಂಧ ಮಕ್ಕಳ ಶಾಲೆಯಲ್ಲಿ ಜರುಗಲಿದೆ
ಫೆ.೩ರಂದು ಬೆಳಿಗ್ಗೆ ೧೦.೪೫ಕ್ಕೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು ಆಶಾಕಿರಣ ಟ್ರಸ್ಟನ ಬೆಳ್ಳಿಹಬ್ಬದ ಸಂಸ್ಮರಣಾ ಭವನದ ಶಂಕುಸ್ಥಾಪನೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸುವರು. ಜಾನಪದ ಕಲೋತ್ಸವವನ್ನು ಸಚಿವ ಸುನೀಲಕುಮಾರ ಉದ್ಘಾಟಿಸುವರು. ದಿ|ಅರವಿಂದ ಪಿತ್ರೆ ಫೋಟೊದ ಅನಾವರಣವನ್ನು ಪ್ರಸಿದ್ಧ ನಟ ಡಾ.ಶ್ರೀನಾಥ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಖ್ಯಾತ ಕವಿ ಬಿ.ಆರ್.ಲಕ್ಷö್ಮಣರಾವ್, ಪ್ರಸಿದ್ಧ ಚಲನಚಿತ್ರ ನಟ ನಿರ್ನಳ್ಳಿ ರಾಮಕೃಷ್ಣ ಪಾಲ್ಗೊಳ್ಳಲಿದ್ದು ಟ್ರಸ್ಟನ ಅಧ್ಯಕ್ಷ ಡಾ|ರವಿ ಹೆಗಡೆ ಹೂವಿನಮನೆ ಅಧ್ಯಕ್ಷತೆವಹಿಸುವರು. ಮಧ್ಯಾಹ್ನ ೩ರಿಂದ ಯಕ್ಷ ತರಂಗಿಣಿ ಕಲಾಸಂಘದವರಿAದ ಮಕ್ಕಳ ಯಕ್ಷಗಾನ, ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಕವಿ ಬಿ.ಆರ್.ಲಕ್ಷö್ಮಣರಾವ್, ಸ್ಥಳೀಯ ಜೆ.ಎಂ.ಎಪ್.ಸಿ.ನ್ಯಾಯಾಧೀಶ ತಿಮ್ಮಯ್ಯ ಜಿ.ಪಾಲ್ಗೊಳ್ಳುವರು.
ಫೆ.೪ರ ಸಂಜೆ ೪.೩೦ಕ್ಕೆ ಶಿರಳಗಿ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮುಕ್ತಾಯ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಉದ್ಯಮಿ ಮುರಳಿಧರ ಪ್ರಭು ಕುಮಟಾ, ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಪಾಲ್ಗೊಳ್ಳಲಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ| ರಾಮಚಂದ್ರ ಕೆ. ಗೌರವ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಡಾ|ರವಿ ಹೆಗಡೆ ಹೂವಿನಮನೆವಹಿಸುವರು.ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗದ ಅಂಧ ಶಾಲಾ ಮಕ್ಕಳ ಜಾನಪದ ಕಲಾ ಸ್ಪರ್ಧೆ, ವಿವಿಧ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು,ಸಂಗೀತ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆಶಾಕಿರಣ ಟ್ರಸ್ಟ ಅಧ್ಯಕ್ಷ ಡಾ|ರವಿ ಹೆಗಡೆ ಹೂವಿನಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.