ಸಿದ್ದಾಪುರ : ಜಿಲ್ಲೆಯ ಸಿದ್ದಾಪುರದ ಟಿ.ಎಂ.ಎಸ್ ಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ದೀಪ ಬೆಳಗಿಸಿ ಅಡಿಕೆ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಗೃಹ ಹಾಗೂ ಸಹಕಾರಿ ಸಚಿವ ಬಸವರಾಜ್ ಬೊಮ್ಮಾಯಿ, ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಸಿದ್ದಾಪುರ ನಮಗೆ ಸ್ಫೂರ್ತಿ. ದಕ್ಷಿಣದ ಬಾರ್ಡೋಲಿ ಸಿದ್ದಾಪುರದಲ್ಲಿ ಸಹಕಾರಿ ಚಳುವಳಿ ನಡೆದಿತ್ತು. ಇಂತಹ ಕಿಚ್ಚನ್ನ ಹೊತ್ತಿಸಿದ್ದು ಸಿದ್ದಾಪುರ. ಸಹಕಾರ ಇಲ್ಲದೆ ನಮಗೆ ಬದುಕೇ ಇಲ್ಲ. ಸಹಕಾರಿ ಸಂಘಗಳಿಂದ ವ್ಯಾಪಾರಸ್ಥ ಮಧ್ಯವರ್ತಿಗಳಿಗೆ ಸಿಗೋ ಲಾಭ ಸಂಸ್ಥೆಯಲ್ಲಿ ಉಳಿದುಕೊಂಡಿದೆ. ನಮ್ಮಲ್ಲಿ ಸರ್ಕಾರ ಸಹಕಾರವನ್ನ ಅಳುತ್ತಿದೆ. ಆದ್ರೆ ಸಹಕಾರಿ ಸಂಘಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತಾಗಬೇಕು. ಇಂತಹ ಪರಿಸ್ಥಿತಿಯಲ್ಲೂ ಉತ್ತಮ ಸಹಕಾರಿ ಸಂಘವಾಗಿ ಮುನ್ನಡೆಯುತ್ತಿರೋ ಸಿದ್ದಾಪುರ ಟಿ.ಎಂ.ಎಸ್ ಎಲ್ಲರಿಗೂ ಮಾದರಿ. ಸಂಘವನ್ನ ಈ ಸ್ಥಿತಿಗೆ ತಲುಪಲು ಸಹಕರಿಸಿದ ಎಲ್ಲರಿಗೂ ಧನ್ಯವಾದ. ಇನ್ನು ಬೇರೆ ಯಾವುದೇ ದಾಖಲೆಗಳಿಲ್ಲದೆ ರೈತನನ್ನ ರೈತ ಅಂತ ಘೋಷಿಸುವಂತಾಗಬೇಕು. ಇಂತಹ ಒಂದು ಪ್ರಯತ್ನಕ್ಕೆ ನಮ್ಮ ಸರ್ಕಾರ ಕೈ ಹಾಕಿದೆ. ಇದು ಇನ್ನು ಸ್ವಲ್ಪ ದಿನದಲ್ಲೇ ಜಾರಿಯಾಗಲಿದೆ ಎಂದರು.
ಇನ್ನು ಟಿ.ಎಂ.ಎಸ್ ಕಟ್ಟಲು ಪರಿಶ್ರಮ ವಹಿಸಿದ ಹಾಗೂ ಸಂಘ ಅಸ್ತಿತ್ವಕ್ಕೆ ಬಂದಾಗಿನಿಂದ ಸದಸ್ಯರಾಗಿ ಇರೋ ವಿವಿಧ 150 ಜನರನ್ನ ಸನ್ಮಾನಿಸಲಾಯಿತು. ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಅಮೃತ ವರ್ಷ ಅನ್ನೋ ಸ್ಮರಣಿಕೆ ಪುಸ್ತಕವನ್ನ ಬಿಡುಗಡೆಗೊಳಿಸಲಾಯಿತು. ಸಂಘಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಘದಲ್ಲಿ ಷೇರು ಹೊಂದಿದ ಸದಸ್ಯರಿಗೆ ಬೆಳ್ಳಿ ನಾಣ್ಯವನ್ನ ಉಡುಗೊರೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.