ನಾಳೆ ಸಿದ್ದಾಪುರ ದಿಂದ ಶಿರಸಿಯವರೆಗೆ ಕಾಂಗ್ರೆಸ್ ಪಾದಯಾತ್ರೆ

ಆದ್ಯೋತ್ ಸುದ್ದಿನಿಧಿ:
ಪೆ.೯ ಗುರುವಾರದಂದು ಸಿದ್ದಾಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಶಿರಸಿ ಉಪವಿಭಾಗಾಧಿಕಾರಿ ಕಚೇರಿಯವರೆಗೆ ಶಿರಸಿ-ಸಿದ್ದಾಪುರ ವಿಧಾನಸಭಾಕ್ಷೇತ್ರದ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಲಿದ್ದಾರೆ

ಈ ಕುರಿತು ಮಾಹಿತಿ ನೀಡಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ,ಇಂದು ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿದೆ ಎಂದು ಹೇಳುತ್ತಾರೆ ಆದರೆ ಎಲ್ಲಿ ಅಭಿವೃದ್ಧಿಯಾಗಿದೆ ಎನ್ನುವುದನ್ನು ತಿಳಿಸಬೇಕಾಗಿದೆ. ಅವಶ್ಯಕತೆ ಇಲ್ಲದ ಕಡೆಗಳಲ್ಲಿ ಒಂದು ಎರಡು ಕಾಂಕ್ರೀಟ್ ರಸ್ತೆಗಳು ಸೇತುವೆಗಳು ಆಗಿವೆ. ಅವಶ್ಯಕತೆ ಇರುವ ಕಡೆಗಳಲ್ಲಿ ಅಭಿವೃದ್ಧಿ ಆಗುತ್ತಾ ಇಲ್ಲ. ಪಟ್ಟಣದಲ್ಲಿ ಒಂದು ರಸ್ತೆ ಮಾತ್ರ ಆಗುತ್ತಿದೆ ಅದು ಸಹ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಪಟ್ಟಣದಲ್ಲಿ ಆಯ್ದ ಸದಸ್ಯರಿರುವಲ್ಲಿ ಕಾಮಗಾರಿ ನಡೆಯುತ್ತದೆ ಎಂದು ಬಿಜೆಪಿ ಪಕ್ಷದ ಸದಸ್ಯರೇ ಹೇಳುತ್ತಾರೆ.ಇವುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸಗಳು ಕಾಣುತ್ತಿಲ್ಲ. ಹಳ್ಳಿಗಳಲ್ಲಿ ಒಂದೇ ಒಂದು ರಸ್ತೆಯು ಸಂಚಾರಕ್ಕೆ ಯೋಗ್ಯವಾಗಿಲ್ಲ. ಎಂದು ಹೇಳಿದರು.
ಸಾಕಷ್ಟು ಸಭೆಗಳಲ್ಲಿ ಸಭಾಧ್ಯಕ್ಷ ಕಾಗೇರಿಯವರು ಅತಿಕ್ರಮಣದಾರರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ, ಅವರನ್ನು ಒಕ್ಕಲಬ್ಬಿಸಲು ಬಿಡುವುದಿಲ್ಲ ಎಂದು ಹೇಳುತ್ತಾರೆ ಆದರೆ ದಿನನಿತ್ಯ ರೈತರಿಗೆ ಅರಣ್ಯ ಅಧಿಕಾರಿಗಳ ಕಿರುಕುಳ ಹೆಚ್ಚಾಗುತ್ತಾ ಇದೆ. ೫೦ ವರ್ಷಗಳಿಂದ ಅತಿಕ್ರಮಣ ಮಾಡಿಕೊಂಡು ವಾಸವಾಗಿ ಬಂದಿರುವ ಭೂಮಿಯಲ್ಲಿ ಒಂದು ತೆಂಗಿನ ಗಿಡ ನೆಡಲು ಶೌಚಾಲಯ ಕಟ್ಟಲು ಅರಣ್ಯ ಇಲಾಖೆಯವರು ಕೊಡುತ್ತಿಲ್ಲ. ಯಾವುದೇ ರೀತಿ ಕಾಮಗಾರಿ ಕೈಗೊಂಡಲ್ಲಿ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸುತ್ತಿದ್ದಾರೆ. ಯಾವುದೇ ಒಬ್ಬ ಅರಣ್ಯ ಅಧಿಕಾರಿಗೆ ಸಭಾಧ್ಯಕ್ಷರು ಫೋನ್ ಮಾಡಿ ಈ ರೀತಿ ಮಾಡಬೇಡಿ ಅಂತ ಹೇಳುವುದಿಲ್ಲ.

ತಾಲೂಕಿನಲ್ಲಿ ಯಾವುದೇ ಸರ್ಕಾರಿ ಕೆಲಸಗಳು ಸಮಯಕ್ಕೆ, ಸರಿಯಾಗಿ ಆಗುತ್ತಿಲ್ಲ ಬಹಳಷ್ಟು ಶಾಲಾ ಕಟ್ಟಡಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ ಆರೋಗ್ಯ ಇಲಾಖೆಯಲ್ಲಿ ಸೂಕ್ತವಾದ ಚಿಕಿತ್ಸೆ ಸಿಗುತ್ತಿಲ್ಲ ಯಾವುದೇ ಸಣ್ಣಪುಟ್ಟ ಕಾಯಿಲೆಗೆ ಹೋದರು ಶಿವಮೊಗ್ಗ ಹಾಗೂ ಮಣಿಪಾಲ ಆಸ್ಪತ್ರೆಗಳಿಗೆ ಕಳಿಸುವ ವ್ಯವಸ್ಥೆ ಆಗುತ್ತಾ ಇದೆ. ಎಲ್ಲ ಇಲಾಖೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಿಬ್ಬಂದಿಗಳ ಕೊರತೆ ಇದೆ. ಗ್ರಾಪಂಗಳಲ್ಲಿ ಕಳೆದ ಮೂರು ವರ್ಷಗಳಿಂದ ವಸತಿ ಯೋಜನೆ ಇಲ್ಲ. ವಾಟರ್ ಮ್ಯಾನ್‌ಗಳಿಗೆ ಸರ್ಕಾರದಿಂದ ಯಾವುದೇ ಭತ್ಯೆಗಳನ್ನು ನೀಡಲಾಗುತ್ತಿಲ್ಲ. ಸಮರ್ಪಕವಾದ ಸಾರಿಗೆ ವ್ಯವಸ್ಥೆ ಇಲ್ಲ. ಆಶಾ ಕಾರ್ಯಕರ್ತೆಯರಿಗೆ ಅಂಗನವಾಡಿ ಕಾರ್ಯಕರ್ತರಿಗೆ ಹಾಸ್ಟೆಲ್ ಸಿಬ್ಬಂದಿಗಳಿಗೆ ಸರಿಯಾದ ವೇತನವನ್ನು ನೀಡಲಾಗುತ್ತಿಲ್ಲ ಅವರ ಬೇಡಿಕೆಗಳನ್ನು ಸಹ ಈಡೇರಿಸುತ್ತಿಲ್ಲ ತಾಳಗುಪ್ಪ ಹುಬ್ಬಳ್ಳಿ ರೈಲ್ವೆ ಮಾರ್ಗ ಈಗಾಗಲೇ ಸರ್ವೆ ಆಗಿದೆ ಆದರೆ ಅದಕ್ಕೆ ಸಂಬAಧಪಟ್ಟ ಯಾವುದೇ ಕ್ರಮಗಳು ಮುಂದುವರಿಯುತ್ತಿಲ್ಲ ಪಡಿತರ ಅಂಗಡಿಗಳಲ್ಲಿ ಸೀಮೆಎಣ್ಣೆ ವಿತರಣೆಯಾಗುತ್ತಿಲ್ಲ ಇಷ್ಟೆಲ್ಲ ಸಮಸ್ಯೆ ಇದ್ದರೂ ಸಂಸದರಾಗಲಿ,ಶಾಸಕರಾಗಲಿ ಚಕಾರ ಎತ್ತುವುದಿಲ್ಲ ಬೇಡದ ಹೇಳಿಕೆ ನೀಡುತ್ತಾ ಧರ್ಮ ವೈಷಮ್ಯ ತುಂಬುತ್ತಾ ಓಡಾಡುತ್ತಾರೆ ಇದೆಲ್ಲವನ್ನು ಸರಕಾರದ ಗಮನಕ್ಕೆ ತರಲು ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
—–
ಗುರುವಾರ ಬೆಳಿಗ್ಗೆ ೮ ಗಂಟೆಗೆ ಕಾಂಗ್ರೆಸ್ ಕಚೇರಿಯಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಸುಮಾರು ೪೦ಕಿ.ಮಿ. ಕ್ರಮಿಸಬೇಕಾಗಿರುವುದರಿಂದ ತಿಂಡಿ,ಊಟದ ವ್ಯವಸ್ಥೆಯನ್ನು ಪಾದಯಾತ್ರಿಗಳಿಗೆ ಮಾಡಲಾಗಿದೆ. ಸುಮಾರು ೩-೪ ಸಾವಿರ ಜನರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ನಿಡಗೋಡುನಲ್ಲಿ ಬೆಳಿಗಿನ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು ಕಾನಸೂರುನಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ೩ ಗಂಟೆಗೆ ಉಪವಿಭಾಗಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ತಲುಪಲಿದ್ದು ಮನವಿ ನೀಡಿ ನಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಲಾಗುವುದು ಎಂದು ಆದ್ಯೋತ್ ನ್ಯೂಸ್‌ಗೆ ವಸಂತ ನಾಯ್ಕ ಮನಮನೆ ತಿಳಿಸಿದ್ದಾರೆ.

About the author

Adyot

Leave a Comment