ಬಿಜೆಪಿ ಬಡವರ ಕಣ್ಣಿನಲ್ಲಿ ನೀರಿನ ಬದಲು ರಕ್ತ ಬರಿಸುತ್ತಿದೆ-ಮಾರ್ಗರೇಟ್ ಆಳ್ವಾ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಕಾಂಗ್ರೆಸ್ ಪಕ್ಷದ ಕರಾವಳಿ ಪ್ರಜಾಧ್ವನಿ ಯಾತ್ರೆಯನ್ನು ದೀಪ ಬೆಳಗಿಸುವ ಮೂಲಕ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಉದ್ಘಾಟಿಸಿದರು.

ಮಾರ್ಗರೇಟ್ ಆಳ್ವಾ ಮಾತನಾಡಿ,ಧರ್ಮ,ಭಾಷೆ,ಜಾತಿಯನ್ನು ಸಮಾಜದ ಮಧ್ಯೆ ತಂದು ದೇಶವನ್ನು ಛಿದ್ರ ಮಾಡುತ್ತಿರುವ ಬಿಜೆಪಿ ಬಡಜನರ ಕಣ್ಣಿನಲ್ಲಿ ನೀರಿನ ಬದಲು ರಕ್ತ ಬರಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೇವಲ ಸುಳ್ಳು ಭರವಸೆಗಳನ್ನು ನಿಡುತ್ತಿವೆ ಬೆಲೆ ಏರಿಕೆ,ನಿರುದ್ಯೋಗದಿಂದ ಜನರು ಸಂಕಟಪಡುತ್ತಿದ್ದಾರೆ ಕಾಂಗ್ರೆಸ್ ಭೂಸುಧಾರಣಾ ನೀತಿ ಜಾರಿಗೆ ತಂದು ಬಡಜನರಿಗೆ ಆಸರೆಯಾಗಿದ್ದರೆ ಬಿಜೆಪಿ ಸರಕಾರೆ ಅರಣ್ಯ ಅತಿಕ್ರಮಣ ಎಂಬ ಹೆಸರಿನಿಂದ ಬಡಜನರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಕಾಂಗ್ರೆಸ್ 18 ವರ್ಷಕ್ಕೆ ಯುವಕರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಿದೆ ಇದನ್ನು ಯುವ ಸಮೂಹ ಅರ್ಥಮಾಡಿಕೊಳ್ಳಬೇಕು. ಯಾರನ್ನು ಗೆಲ್ಲಿಸಬೇಕು. ಯಾರನ್ನು ಸೋಲಿಸಬೇಕು ಎನ್ನುವ ತೀರ್ಮಾನವನ್ನು ಇನ್ನಾದರೂ ಮತದಾರರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ ಮಾತನಾಡಿ, ಡಬಲ್ ಇಂಜಿನ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಧರ್ಮ, ಜಾತಿ, ದೇವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಅಮಾಯಕರನ್ನು ಬಲಿಕೊಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಜನಸಾಮಾನ್ಯರನ್ನು ಮುರ್ಖರನ್ನಾಗಿಸುವುದಕ್ಕೆ ಮುಂದಾಗಿದ್ದಾರೆ. ಮೀಸಲಾತಿಯಲ್ಲಿ ಬಡವರೊಂದಿಗೆ ಚಲ್ಲಾಟ ಆಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷ ಯಾವೆಲ್ಲ ಜನಪರ ಯೋಜನೆಗಳನ್ನು ಜಾರಿಗೆ ತಂದು ಬಡಜನರಿಗೆ ಅನುಕೂಲ ಮಾಡಿಕೊಟ್ಟಿತ್ತು ಎನ್ನುವುದನ್ನು ನಾನು ಹೇಳುತ್ತೇನೆ. ಆದರೆ ಬಿಜೆಪಿ ಸರ್ಕಾರ ಯಾವೆಲ್ಲ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಬೇಕು. ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರ ನಡೆಸುವುದಕ್ಕೆ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಹೇಳಿದರು.

ಶಾಸಕ ಆರ್.ವಿದೇಶಪಾಂಡೆ ಮಾತನಾಡಿ ಪಕ್ಷ ಅಧಿಕಾರದಲಿದ್ದಾಗ ತಂದ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸುವಲ್ಲಿ ನಾವು ತಪ್ಪಿದ್ದೇವೆ. ಚುನಾವಣೆ ಬಂದಾಗ ಮಾತ್ರ ಮತದಾರರ ಬಳಿ ಹೋಗುತ್ತೇವೆ. ಉಳಿದ ದಿನ ಮತದಾರರೊಂದಿಗೆ ಸಂಪರ್ಕ ಇಲ್ಲ. ಪಕ್ಷದಲ್ಲಿ ಸಂಘಟನೆ ಕೊರತೆ ಇದೆ. ಸಂಘಟನೆ ಶಕ್ತಿಶಾಲಿ ಆಗಬೇಕು. ಮನೆ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷದ ಈ ಹಿಂದಿನ ಸಾಧನೆ ಹಾಗೂ ಮುಂದಿನ ಯೋಜನೆಯನ್ನು ತಿಳಿಸಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೀಮಣ್ಣ ನಾಯ್ಕ, ಮಂಜುನಾಥ ಭಂಡಾರಿ ಮಾತನಾಡಿದರು.ನಿವೇದಿತಾ ಆಳ್ವಾ, ವಿ.ಎಸ್.ಆರಾಧ್ಯ, ವೆಂಕಟೇಶ ಹೆಗಡೆ ಹೊಸಬಾಳೆ, ಬಿ.ಆರ್.ನಾಯ್ಕ, ಕೆ.ಜಿ.ನಾಗರಾಜ, ಪ್ರಶಾಂತ ಸಭಾಹಿತ, ಸುಜಾತಾ ಗಾಂವ್ಕರ, ಸಂತೋಷ ಶೆಟ್ಟಿ, ವಿ.ಎನ್.ನಾಯ್ಕ, ಸಿ.ಆರ್.ನಾಯ್ಕ, ಶ್ರೀಪಾದ ಹೆಗಡೆ, ಜೆ.ಡಿ.ನಾಯ್ಕ, ಬಸವರಾಜ್ ದೊಡ್ಮನಿ ಉಪಸ್ಥಿತರಿದ್ದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಸ್ವಾಗತಿಸಿದರು. ಎಸ್.ಆರ್.ಹೆಗಡೆ ಕುಂಬಾರಕುಳಿ, ಮಧುಕೇಶ್ವರ ಭಟ್ಟ, ಅರ್ಚನಾ ನಾಯ್ಕ ನಿರ್ವಹಿಸಿದರು.
ನಂತರ ಕರಾವಳಿ ಪ್ರಜಾಧ್ವನಿ ಯಾತ್ರೆ ತಾಲೂಕಿನ ಹಲಗೇರಿಯಲ್ಲಿಯೂ ನಡೆಯಿತು.

About the author

Adyot

Leave a Comment