ಭರ್ಜರಿಯಾಗಿ ಪ್ರಾರಂಭವಾದ ಸಿದ್ದಾಪುರ ಉತ್ಸವ-2023

ಆದ್ಯೋತ್ ಸುದ್ದಿನಿಧಿ:
ಮೂರು ದಿನಗಳ ಕಾಲ ನಡೆಯಲಿರುವ ಸಿದ್ದಾಪುರ ಉತ್ಸವ-2023 ಭರ್ಜರಿಯಾಗಿ ಪ್ರಾರಂಭವಾಗಿದೆ.
ಮಧ್ಯಾಹ್ನ ನಾಲ್ಕು ಗಂಟೆಗೆ ಕನ್ನಡತಾಯಿ ಭುವನೇಶ್ವರಿ ದೇವಿಯ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಜ್ಯೋತಿಯನ್ನು ಬೈಕ್ ರಾಲಿ ಮೂಲಕ ನೆಹರೂ ಮೈದಾನಕ್ಕೆ ತರಲಾಯಿತು.

ಶಶಿಧರ ಕೋಟೆ,ಸುರೇಖಾ ಹೆಗಡೆ,ಸುಧೀರ ಬೇಂಗ್ರೆಯವರ ಗಾಯನದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಸಭಾಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಸಿದ್ದಾಪುರ ಉತ್ಸವ-2023ನ್ನು ಉಜಿರೆ ಶ್ರೀರಾಮಕ್ಷೇತ್ರದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.

ಸುಖ ಶಾಂತಿ ನೆಮ್ಮದಿ ಬೇಕೆಂದು ಇಂತಹ ಉತ್ಸವವನ್ನು ನಡೆಸಲಾಗುತ್ತದೆ.ಆದರೆ ಇದೆಲ್ಲವೂ ಧರ್ಮ ಮೂಲವಾಗಿದೆ
ಧರ್ಮವನ್ನು ಮತ್ತೆ ಎತ್ತಿ ಹಿಡಿಯುವಂತಹ ಜಾಗೃತಿಗೊಳಿಸುವಂತಹ ಸುಖ ಶಾಂತಿ, ನೆಮ್ಮದಿಯನ್ನು ಕೊಡಲಿಕ್ಕೆ ಇರುವಂತಹ ಒಂದೇ ಒಂದು ಆಧಾರವೆಂದರೆ ಅದು ಧರ್ಮ ಅದನ್ನು ಮತ್ತೆ ಜಾಗೃತಿಗೊಳಿಸುವಂತಹ ಕೆಲಸವನ್ನು ಮಾಡಲಾಗುತ್ತಿದೆ.ಯುಗಯುಗದಲ್ಲಿ ಇಂತಹ ಉತ್ಸವಗಳು ನಡೆಯುತ್ತಾ ಬಂದಿವೆ ಕುಬ್ಜವಾದಂತಹ ಮಂದವಾದಂತ ಮನಸ್ಸಿಗೆ ಆನಂದವನ್ನು ನೆಮ್ಮದಿಯನ್ನು ಕೊಡುವಂತಹ ಜಾಗೃತ ಸ್ಥಿತಿಯೇ ಉತ್ಸವಗಳು.ಈ ಉತ್ಸವದಲ್ಲಿ ಪ್ರಾದೇಶಿಕವಾದ ವ್ಯವಸ್ಥೆಯಲ್ಲಿ ಇರುವಂತಹ ಜನರ ವಿಚಾರಧಾರೆಗಳಿರಬಹುದು ಅವರ ಕಲೆಗಳು ಅವರ ಬದುಕಿನ ಆಯಾಮಗಳು ಮುಂದಿನ ಪೀಳಿಗೆಗೆ ಕೊಂಡೊಯ್ಯುವಂತಹ ಜಾಗೃತ ಸ್ಥಿತಿ ನಿರ್ಮಾಣವಾಗುತ್ತದೆ ಅದಕ್ಕೆ ನಾವು ಪ್ರಚೋದನೆಯನ್ನು ಕೊಡದೆ ಹೋದಲ್ಲಿ ಆ ಭಾಗದ ಕಲೆಗಳಿರಬಹುದು ಜ್ಞಾನ ಇರಬಹುದು ನಶಿಸುವ ಸಾಧ್ಯತೆ ಇದೆ. ನೆಮ್ಮದಿಯನ್ನು ಶಾಂತಿಯನ್ನು ಕಾಣಬೇಕಾದರೆ ನಾವು ಪ್ರಕೃತಿ ಕೊಟ್ಟಂತಹ ಮೂಲ ನೆಲೆಗೆ ಹೋಗಬೇಕು. ಅದನ್ನು ಕಲಿಸುವಂತಹ ಕೆಲಸವನ್ನು ಇಂದಿನ ವೇದಿಕೆ ಮಾಡುತ್ತಿದೆ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಈ ಭಾಗದಲ್ಲಿರುವಂತಹ ಜ್ಞಾನ ಜಾತಿ ಮತ ಪಂಥ ಭೇದವನ್ನು ಮರೆತು ಆನಂದ ಮತ್ತು ನೆಮ್ಮದಿ ಕೊಡುವಂತಹ ಕೆಲಸವನ್ನು ಮಾಡಲಾಗುತ್ತಿದೆ‌ ಜಾತಿ ಮತ ಪಂಥ ಧರ್ಮವನ್ನು ಮೆಟ್ಟಿ ನಿಂತಲ್ಲಿ ಅದು ಪರಮಾತ್ಮನ ಮೆಟ್ಟಿಲಾಗುತ್ತದೆ ಎತ್ತರಕ್ಕೆ ಹೋದವರು ಎತ್ತರತೆಯನ್ನು ಕಾಯ್ದುಕೊಳ್ಳಬೇಕು ಅವರು ಎತ್ತರತೆಯನ್ನು ಕಾಯ್ದುಕೊಂಡರೆ ಸುಖಿ ಸಮಾಜ ನಿರ್ಮಾಣವಾಗಲಿದೆ ಎತ್ತರದಲ್ಲಿ ಕುಳಿತಂತ ವ್ಯಕ್ತಿ ಕುಂಟಿದರೆ ಸಮಾಜಕುಂಟುತ್ತದೆ. ಸಮಾಜದ ಪ್ರತಿಯೊಬ್ಬರಿಗೂ ಒಂದು ಜವಾಬ್ದಾರಿ ಇದೆ ರಾಮ ರಾಜ್ಯದ ಕಲ್ಪನೆ ಎಂದರೆ ಯಾವುದೇ ಒಂದು ಪಕ್ಷದ ಸ್ವತ್ತು ಎಂದು ತಿಳಿದುಕೊಳ್ಳಬೇಡಿ. ಸಮಾಜದಲ್ಲಿರುವ ಒಳ್ಳೆಯ ವಿಚಾರಗಳನ್ನು ತೆಗೆದುಕೊಳ್ಳಿ ಕೆಟ್ಟ ವಿಚಾರಗಳನ್ನು ಬಿಟ್ಟುಬಿಡಿ ಎಂದು ಸ್ವಾಮೀಜಿ ಹೇಳಿದರು.


ಮಿರ್ಜಾನ ಆದಿಚುಂಚನಗಿರಿ ಶಾಖಾಮಠದ ನಿಶ್ಚಲಾನಂದ ಸ್ವಾಮಿಜಿ ಮಾತನಾಡಿ,ಮನಸ್ಸಿಗೆ ಅಹ್ಲಾದಗೊಳಿಸಲು ಮನಃಶ್ಯಾಂತಿಗೋಸ್ಕರ ಇಂತಹ ಕಾರ್ಯಕ್ರಮ ಮಾಡಲಾಗುತ್ತಿದೆ.
ಆಯಾ ಪ್ರಾಂತಗಳಲ್ಲಿ ಆಯಾ ಪ್ರಾಂತ್ಯದ ಹೆಸರಿನಲ್ಲಿ ವೈಭವಗಳು ಉತ್ಸವಗಳು ನಡೆಯುತ್ತವೆ ಸಕ್ರಮವಾಗಿ ಆಗ ತಕ್ಕಂತ ಒಂದು ವ್ಯವಸ್ಥೆಗೆ ರಾಮರಾಜ್ಯ ಎಂದು ಹೇಳುತ್ತಾರೆ
ರಾಮರಾಜ್ಯ ಆಗಬೇಕು ಎಂದರೆ ಒಳ್ಳೆಯ ಸಂಸ್ಕಾರವಂತ ಪ್ರಜೆಗಳು ಎಲ್ಲರೂ ಆಗಬೇಕು ಹಾಗೆ ಆಗಬೇಕು ಎಂದರೆ ಮಕ್ಕಳನ್ನು ಆ ದಿಸೆಯಲ್ಲಿ ತಂದೆ ತಾಯಿಗಳು ಜವಾಬ್ದಾರಿ ತೆಗೆದುಕೊಂಡು ಬೆಳೆಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ.ನಾಯ್ಕ,ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ ಉತ್ಸವ ನಡೆಯುತ್ತಿದೆ ನಮ್ಮ ತಾಲೂಕಿನಲ್ಲೂ ಮಾಡಬೇಕು ಎಂದು ಸಮಾನಮನಸ್ಕರು ಸೇರಿ ಈ ಉತ್ಸವವನ್ನು ಆಯೋಜಿಸಲಾಗಿದೆ.ಚುನಾವಣೆ ಹತ್ತಿರವಿರುವುದರಿಂದ ರಾಜಕೀಯದವರನ್ನು ದೂರ ಇಟ್ಟು ಧಾರ್ಮಿಕ ಸಂಸ್ಕಾರ ಉಳ್ಳ ಸ್ವಾಮೀಜಿಯವರನ್ನು ಮೂರು ದಿನಗಳ ಕಾಲ ಆಹ್ವಾನಿಸಲಾಗಿದೆ. ಈ ಉತ್ಸವ ಈ ವರ್ಷಕ್ಕೆ ಮಾತ್ರ ಸೀಮಿತವಲ್ಲ ಪ್ರತಿ ವರ್ಷ ಈ ಉತ್ಸವವನ್ನು ನಡೆಸಲಾಗುತ್ತದೆ ಎಂದು ಹೇಳಿದರು.
#######
ಸಿದ್ದಾಪುರ ಉತ್ಸವದ ಅಂಗವಾಗಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರು.

ಪ್ರಥಮ ಬಹುಮಾನ-ಕಾವ್ಯಾ ಹೆಗಡೆ

ದ್ವಿತೀಯ ಬಹುಮಾನ-ದೀಕ್ಷಾ ಮಡಿವಾಳ

ತೃತೀಯ ಬಹುಮಾನ-ಚೈತ್ರಿಕಾ ಹೆಗಡೆ ಕನ್ನಳ್ಳಿ

About the author

Adyot

Leave a Comment