ಸಿದ್ದಾಪುರದಲ್ಲಿ ಜೆಡಿಎಸ್ ಸಮಾವೇಶ, ಬೇರೆ ಬೇರೆ ಪಕ್ಷದ ಕಾರ್ಯಕರ್ತರ ಸೇರ್ಪಡೆ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಬಾಲಭವನದಲ್ಲಿ ಜೆಡಿಎಸ್ ಪಕ್ಷದ ಸಮಾವೇಶ ಹಾಗೂ ಬೇರೆ ಬೇರೆ ಪಕ್ಷದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಜಾತ್ಯಾತೀತ ಜನತಾದಳದ ಮುಖಂಡ ಸೂರಜ್ ನಾಯ್ಕ ಮಾತನಾಡಿ,ಜಾತ್ಯಾತೀತ ಜನತಾದಳ ರಾಜ್ಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಇನ್ನಷ್ಟು ಶ್ರಮವಹಿಸಿ ಹೋರಾಟಬೇಕಿದೆ. ಪ್ರತಿಯೊಂದು ಬೂತ್ ಮಟ್ಟದಲ್ಲೂ ಸಂಘಟನಾತ್ಮಕವಾಗಿ ಕೆಲಸ ಮಾಡಿದರೆ ಗೆಲುವು ಶತಸಿದ್ಧ ದೇವೆಗೌಡರ ಹಾಗೂ ಕುಮಾರಸ್ವಾಮಿಯವರ ಕುರಿತು ರೈತರಲ್ಲಿ ಪಕ್ಷಾತೀತವಾದ ಮೆಚ್ಚುಗೆ ಇದೆ. ರೈತರಿಗೆ ಒಳ್ಳೆಯದ್ದನ್ನು ಮಾಡಿದ್ದು ಅವರ ಕುಟುಂಬ. ನೀರಾವರಿ ಕ್ಷೇತ್ರಕ್ಕೆ ದೇವೆಗೌಡರ ಕೊಡುಗೆ ಅಪಾರ. ಜೆಡಿಎಸ್ ಕೇವಲ ಒಕ್ಕಲಿಗರ ಪಕ್ಷವಲ್ಲ. ಎಲ್ಲ ರೈತರ ಪರವಾಗಿರುವ ಪಕ್ಷ ಎಂದರು.
ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ತನ್ನದೇ ಆದ ವರ್ಚಸ್ಸು, ಮತಬ್ಯಾಂಕ್ ಇದೆ. ರಾಜಕಾರಣಕ್ಕಾಗಿ ಸಮಾಜಸೇವೆ ಮಾಡದ ಉಪೇಂದ್ರ ಪೈ ಪಕ್ಷಕ್ಕೆ ಬರುವ ಮೂಲಕ ಬಲ ತುಂಬಿದ್ದಾರೆ. ಶಿಕ್ಷಣ, ಧಾರ್ಮಿಕ, ಕ್ರೀಡೆ ಮುಂತಾಗಿ ಸಮಾಜದ ಎಲ್ಲ ಅಂಗಗಳಿಗೂ ನಿಸ್ವಾರ್ಥದಿಂದ ಕೊಡುಗೆ ನೀಡುತ್ತ ಬಂದವರು ಉಪೇಂದ್ರ ಪೈ. ಅವರನ್ನ ಗೆಲ್ಲಿಸುವದು ಎಲ್ಲ ಕಾರ್ಯಕರ್ತರ ಗುರಿಯಾಗಬೇಕು ಎಂದರು.
ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ಕಾರ್ಡ ನೀಡುವಾಗ ಕೆಲವೆಡೆ ಮತದಾರರ ಆಧಾರ ಕಾರ್ಡ ನಂಬರ್ ಹಾಗೂ ಬ್ಯಾಂಕ್ ಖಾತೆ ನಂಬರ್‌ಗಳನ್ನು ಪಡೆದುಕೊಳ್ಳುತ್ತಿರುವದು ತಿಳಿದುಬಂದಿದ್ದು ಇದು ಯಾಕೆ? ಎನ್ನುವ ಅನುಮಾನ ಮೂಡುತ್ತಿದೆ. ಭರವಸೆಗಳನ್ನು ಕೊಡಲಿ, ಮುಂದೆ ಒಂದೊಮ್ಮೆ ಅಧಿಕಾರಕ್ಕೆ ಬಂದರೆ ಸೌಲಭ್ಯ ಒದಗಿಸಲು ಎನ್ನುವದಾದರೆ ಅಧಿಕಾರಿಗಳ ಮೂಲಕ ಒದಗಿಸಬಹುದಲ್ಲ. ಆ ನಂಬರ್‌ಗಳು ಈಗ ಯಾಕೆ ಬೇಕು? ದುಡ್ಡು ಹಾಕೋದಕ್ಕೋ, ಇಲ್ಲ ಇದ್ದ ದುಡ್ಡು ತೆಗೆಯೋದಕ್ಕೋ ಗೊತ್ತಿಲ್ಲ. ಏನೇ ಆದರೂ ಯಾರೂ ನಂಬರ್ ಕೊಡಲು ಹೋಗಬೇಡಿ. ನಮ್ಮ ಕಾರ್ಯಕರ್ತರು ಮತದಾರರಿಗೆ ಈ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಸೂರಜ್ ನಾಯ್ಕ ಹೇಳಿದರು.
ಜೆಡಿಎಸ್ ಧುರೀಣ ಉಪೇಂದ್ರ ಪೈ ಮಾತನಾಡಿ, ಜಾತಿ,ಧರ್ಮ ಬೇಧವಿಲ್ಲದೇ ನನ್ನ ಕೈಲಾದ ಸಮಾಜಸೇವೆ ಮಾಡುತ್ತ ಬಂದಿರುವ ನಾನು ರಾಜಕಾರಣದಲ್ಲೂ ಅದನ್ನೇ ಅನುಸರಿಸಿಕೊಂಡು ಹೋಗುತ್ತೇನೆ. ಯಾವುದೇ ವ್ಯಕ್ತಿ ನನ್ನನ್ನು ಯಾವುದೇ ಕ್ಷಣದಲ್ಲೂ ಸಂಪರ್ಕಿಸಬಹುದು. ಅಭಿವೃದ್ಧಿ, ಶಿಕ್ಷಣ ಕ್ಷೇತ್ರಗಳಿಗೆ ಇನ್ನಷ್ಟು ಕೊಡುಗೆ ನೀಡುತ್ತೇನೆ. ಕಾರ್ಯಕರ್ತರು ಬರಲಿರುವ ಚುನಾವಣೆ ಕುರಿತು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದರು.
ತಾಲೂಕ ಜೆಡಿಎಸ್ ಅಧ್ಯಕ್ಷ ಸತೀಶ ಹೆಗಡೆ ಬೈಲಳ್ಳಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಅರುಣ ಗೌಡ, ಪ್ರಮುಖರಾದ ನಾಗಪತಿ ಗೌಡ, ಕೆ.ಬಿ.ನಾಯ್ಕ, ಬಿ.ಎ.ಸಾಬ್, ತಾಲೂಕು ಉಪಾಧ್ಯಕ್ಷ ಶ್ರೀಧರ ಕೊಂಡ್ಲಿ ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಹಿತ್ಲಕೊಪ್ಪ ನಿರೂಪಿಸಿದರು.
ಈ ಸಂದರ್ಭದಲ್ಲಿ ಬೇರೆ ಬೇರೆ ಪಕ್ಷದ ಯುವ ಕಾರ್ಯಕರ್ತರು
ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು ಪಕ್ಷದ ಮುಖಂಡರು ಅವರಿಗೆ ಪಕ್ಷದ ಶಾಲು ಹೊದೆಸಿ ಬರಮಾಡಿಕೊಂಡರು.

About the author

Adyot

Leave a Comment