ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಪಟ್ಟಣದ ಶ್ರೇಯಸ್ ಆಸ್ಪತ್ರೆಯ ಸಭಾಂಗಣದಲ್ಲಿ ಸೋಮವಾರ ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ 64ನೇ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರವನ್ನು ಸ್ಥಳೀಯ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮಾನಿ ಬಳಗದವರು ಏರ್ಪಡಿಸಿದ್ದರು.
ದೀಪ ಬೆಳಗಿಸುವ ಮೂಲಕ ಶಿಬಿರ ಉದ್ಘಾಟಿಸಿದ ಡಾ.ಶ್ರೀಧರ ವೈದ್ಯ ಮಾತನಾಡಿ,ರಕ್ತ ಎನ್ನುವುದು ಮನುಷ್ಯನ ಜೀವಿಕೆಗೆ ಅತಿಅವಶ್ಯಕವಾಗಿದೆ.ದೇಹದ ಬೇರೆ ಬೇರೆ ಅಂಗಗಳನ್ನು ಕೃತಕವಾಗಿ ಉತ್ಪಾದಿಸಬಹುದು ಆದರೆ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಬರುವುದಿಲ್ಲ.ಪ್ರತಿ ಮನುಷ್ಯನ ದೇಹದಲ್ಲೂ 5 ರಿಂದ 5.5೦ ಲೀ. ರಕ್ತವಿದೆ. ವರ್ಷದಲ್ಲಿ ಎರಡು ಬಾರಿ ರಕ್ತವನ್ನು ದಾನ ಮಾಡಬಹುದು.ಒಂದು ಬಾರಿ 3೦೦ ಎಂಎಲ್ ರಕ್ತವನ್ನು ನೀಡಬಹುದು ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
ರಕ್ತದಾನವನ್ನು ಮಾಡುವುದರಿಂದ ಅನೇಕ ಪ್ರಯೋಜನಗಳಿವೆ.ದೇಹದ ಕೊಲಸ್ಟ್ರಾಲ್ ನ್ನು ತಡೆಯಬಹುದು,ಹೃದಯಾಘಾತವನ್ನು ತಪ್ಪಿಸಬಹುದು ಅಲ್ಲದೆ ಇನ್ನೊಂದು ಜೀವವನ್ನು ಉಳಿಸಬಹುದು. ರಾಜಕಾರಣದಲ್ಲೆ ಅಪರೂಪದ ವ್ಯಕ್ತಿಯಾದ ಸಜ್ಜನರಾದ ಕಾಗೇರಿಯವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ನಡೆಸುತ್ತಿರುವುದು ಶ್ಲಾಘನೀಯವಾಗಿದೆ.ಮದುವೆ,ಮುಂಜಿ,ಗೃಹಪ್ರವೇಶದಂತಹ ಶುಭಸಂದರ್ಭದಲ್ಲಿ ರಕ್ತದಾನ ಶಿಬಿರ ನಡೆಯುವಂತಾಗಬೇಕು ಇದರಿಂದ ಎಷ್ಟೋ ಜನರ ಜೀವ ಉಳಿಸಬಹುದು ಎಂದು ಹೇಳಿದರು.
ಬಿಜೆಪಿ ಮಂಡಳ ಅಧ್ಯಕ್ಷ ಮಾರುತಿ ನಾಯ್ಕ ಮಾತನಾಡಿ,ಕಾಗೇರಿಯವರು ಅಪರೂಪದ ರಾಜಕಾರಣಿ.೬ ಬಾರಿ ಶಾಸಕರಾಗಿ,ಶಿಕ್ಷಣ ಮಂತ್ರಿಯಾಗಿ,ವಿಧಾನಸಭಾಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ.ಅವರ ಬದುಕಿನಲ್ಲಿ ಎಲ್ಲಿಯೂ ಕಪ್ಪುಚುಕ್ಕಿ ಇಲ್ಲ,ಯಾವುದೇ ಹಮ್ಮು,ಬಿಮ್ಮು ಇಲ್ಲದೆ ಎಲ್ಲರೊಡನೆ ಸರಾಗವಾಗಿ ಬೆರೆಯುವ ಕಾಗೇರಿಯವರು ನಮ್ಮ ನಾಯಕರು ಎನ್ನಲು ನಮಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಡಾ.ಸುಮಂಗಲಾ ವೈದ್ಯ,ಸರಕಾರಿ ಆಸ್ಪತ್ರೆಯ ಡಾ.ಜ್ಯೋತಿ ಹೆಗಡೆ,ಡಾ.ಶ್ರೇಯಸ್ ಉಪಸ್ಥಿತರಿದ್ದರು.
ಅಭಿಮಾನಿ ಬಳಗದ ಅಣ್ಣಪ್ಪ ನಾಯ್ಕ ಕಡಕೇರಿ ಸ್ವಾಗತಿಸಿದರು.ಗುರುರಾಜ ಶಾನಭಾಗ ನಿರೂಪಣೆ ಮಾಡಿದರು
ನಂತರ ನಡೆದ ರಕ್ತದಾನದಲ್ಲಿ 42 ಜನ ಕಾಗೇರಿಯವರ ಅಭಿಮಾನಿಗಳು ರಕ್ತವನ್ನು ದಾನ ನೀಡಿದರು.