ಆದ್ಯೋತ್ ಸುದ್ದಿನಿಧಿ:
ಚಿಕ್ಕೋಡಿಯಲ್ಲಿ ನಡೆದ ಆಚಾರ್ಯ ಶ್ರೀ 108 ಕಾಮಕುಮಾರನಂದಿ ಮುನಿಗಳ ಹತ್ಯೆಯನ್ನು ಖಂಡಿಸಿ ಕ್ರಮ ತೆಗೆದುಕೊಳ್ಳುವಂತೆ ಕೋರಿ ಹಾಗೂ ಜೈನಸಮುದಾಯಕ್ಕೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಶಿರಸಿ ತಾಲೂಕಿನ ಜೈನ ಸಮುದಾಯದವರು ಸೋಂದಾ ಜೈನಮಠದ ಸ್ವಸ್ತಿ ಶ್ರೀ ಭಟ್ಟಾ ಕಲಂಕ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಶಿರಸಿಯ ಬಸ್ತಿಗಲ್ಲಿಯಲ್ಲಿರುವ ಪಾರ್ಶವನಾಥ ಜೈನ ಮಂದಿರದಲ್ಲಿ ಸೇರಿ ಅಲ್ಲಿಂದ ಉಪವಿಭಾಗಾಧಿಕಾರಿಗಳ ಕಚೇರಿಯವರೆಗೆ ಮೌನ ಮೆರವಣಿಗೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಸ್ತಿ ಶ್ರೀ ಭಟ್ಟಾ ಕಲಂಕ ಭಟ್ಟಾರಕ ಸ್ವಾಮೀಜಿ,ಜೈನ ಧರ್ಮವು ಹಿಂಸೆಯನ್ನು ಮಾಡಬಾರದೆನ್ನುವುದು ಹೇಳುತ್ತದೆ. ಜೈನ ಸಮುದಾಯದವರು ಯಾರಿಗೂ ತೊಂದರೆ ಮಾಡಿಲ್ಲ.ಆದರೆ ವಿಕೃತ ಮನಸ್ಸಿನವರು ಸ್ವಾಮಿಯವರ ಹತ್ಯೆ ಮಾಡಿದ್ದಾರೆ.ಶಿರಸಿಯ ಸಮಸ್ತ ಜೈನರು ಸೇರಿ ಈ ಹತ್ಯೆಯನ್ನು ಖಂಡಿಸುತ್ತೆವೆ. ಹಾಗೂ ಜೈನ ಸಮೂದಾಯದವರಿಗೆ ರಕ್ಷಣೆ ನೀಡಬೇಕು. ಮತ್ತು ಹಂತಕರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತೆವೆ ಎಂದು ಹೇಳಿದರು.