ಸಿದ್ದಾಪುರ:ಶ್ರೀಮನ್ನೆಲೆಮಾವು ಮಠದಲ್ಲಿ ಸಾಂಸ್ಕೃತಿಕ ವೇದಿಕೆಗೆ ಚಾಲನೆ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರತಾಲೂಕಿನ ಹೇರೂರು ಸೀಮೆಯ ಶ್ರೀಮನ್ನೆಲೆಮಾವು ಮಠದಲ್ಲಿ ನೂತನ ಶ್ರೀಲಕ್ಷ್ಮೀನೃಸಿಂಹ ಸಂಸ್ಕೃತಿ ಸಂಪದ ಸಾಂಸ್ಕೃತಿಕ ವೇದಿಕೆಗೆ ಶ್ರೀಮಾಧವಾನಂದ ಭಾರತೀ ಸ್ವಾಮೀಜಿಯವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು,
ಭಗವದ್ಗೀತೆಯ ಸಾರವನ್ನು ಅನುಸರಿಸಿದರೆ ಮನುಷ್ಯಜನ್ಮ ಸಾರ್ಥಕತೆಯನ್ನು ಪಡೆಯುತ್ತದೆ.ಭಗವದ್ಗೀತೆಯಲ್ಲಿ ಮನುಷ್ಯನ ಸಾರ್ಥಕ ಬದುಕಿಗೆ ಮೂರು ಪ್ರಮುಖ ಮಾರ್ಗಗಳನ್ನು ಭಗವಾನ್ ಶ್ರೀಕೃಷ್ಣನೇ ಉಲ್ಲೇಖಿಸಿದ್ದಾನೆ. ಕರ್ಮ, ಜ್ಞಾನ, ಭಕ್ತಿ ಮಾರ್ಗವನ್ನು ಪ್ರಸ್ತಾಪಿಸಿದ್ದಾನೆ. ಅದರಲ್ಲಿ ಭಕ್ತಿ ಮಾರ್ಗದಲ್ಲಿ ಒಂಬತ್ತು ವಿಧದ ಭಕ್ತಿಯನ್ನು ಭಾಗವತದಲ್ಲಿ ಹೇಳಲಾಗಿದೆ. ಭಕ್ತಿಯ ದಾರಿಯ ಮೂಲಕ ಭಗವಂತನಲ್ಲಿ ಮನಸ್ಸು ಇಡಬೇಕು. ಎಲ್ಲರೂ ಸನ್ಮಾರ್ಗದಲ್ಲಿ ನಡೆಯುವ ಕೆಲಸ ಆಗಬೇಕು. ಭಕ್ತಿ ಮಾರ್ಗದ ಸಾಧನೆಗೆ ಅದರಲ್ಲಿ ಭಜನೆಯೂ ಒಂದು ಮಾರ್ಗವಾಗಿದೆ.ಈಚೆಗಿನ ದಿನಗಳಲ್ಲಿ ಎಲ್ಲಡೆ ಭಜನಾ ಪ್ರವೃತ್ತಿ ಕಡಿಮೆ ಆಗುತ್ತಿದೆ. ವ್ಯವಹಾರಿಕ ಪ್ರಪಂಚದಲ್ಲಿ ಭಕ್ತಿ ಮಾರ್ಗದಿಂದ ಜನರು ವಿಮುಖರಾಗಿದ್ದಾರೆ ಎಂದು ಶ್ರೀಗಳು ವಿಷಾಧಿಸಿದರು.

ಮಕ್ಕಳಿಗೆ,ಯುವಕರಿಗೆ ಭಜನೆಯಮಹತ್ವ ತಿಳಿಸುವ ಕಾರ್ಯ ಹೆಚ್ಚಬೇಕಿದೆ.ಜನರಲ್ಲಿ ಭಜನೆಯ ಮೂಲಕ ಭಕ್ತಿ ಮಾರ್ಗ ವೃದ್ದಿಸುವ ಹಾಗೂ ಭಗವಂತನ ಸಾಕ್ಷಾತ್ಕಾರದ ಮಾರ್ಗದೆಡೆಗೆ ಸಾಗಲು ಇಂಥ ಸಂಸ್ಕೃತಿ ಸಂಪದದಂಥ ವೇದಿಕೆಗಳು ಪ್ರೇರಣೆ ನೀಡುತ್ತವೆ. ಕಲೆ, ಕಲಾವಿದರನ್ನು ಬೆಂಬಲಿಸುವ ನಿಟ್ಟಿನಲ್ಲಿ ಸಂಸ್ಕೃತಿ ಸಂಪದ ವೇದಿಕೆ ರಚಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಹಿರಿಯ ವೈದಿಕ ವೆಂಕಟ್ರಮಣ ಭಟ್ಟ ಕೋಡಖಂಡ, ರವಿ ಹೆಗಡೆ ಕಂಚಿಕೈ ಮುಂತಾದವರು ಉಪಸ್ಥಿತರಿದ್ದರು.
ಮಠದ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು ಸ್ವಾಗತಿಸಿದರು. ಜಿ.ಆರ್.ಭಾಗವತ್ ತ್ಯಾರಗಲ್ ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ಭಟ್ಟ ನೆಲೆಮಾವು ನಿರ್ವಹಿಸಿ ವಂದಿಸಿದರು.

ನಂತರ ಶ್ರೀರಾಜರಾಜೇಶ್ವರಿ ಭಜನಾ ಮಂಡಳಿ ನೆಲೆಮಾವು, ಶ್ರೀ ದುರ್ಗಾ ಭಜನಾ ಮಂಡಳಿ ತ್ಯಾರಗಲ್ ಹುಲಿಮನೆ, ಓಂಕಾರ ಭಜನಾ ಮಂಡಳಿ ತಟ್ಟಿಕೈ, ಮಹಿಷಾಸುರಮರ್ಧಿನಿ ಭಜನಾ ಮಂಡಳಿ ಉಂಬಳಮನೆ ಬಿದ್ರಮನೆ, ಶ್ರೀಪರಮೇಶ್ವರಿ ಭಜನಾ ಮಂಡಳಿ ಉಂಚಳ್ಳಿ, ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ಹೇರೂರು, ನಾಗಚೌಡೇಶ್ವರಿ ಭಜನಾ ಮಂಡಳಿ ಕಟ್ಟಿನ ಗುಂಡಿ, ಕದಂಬೇಶ್ವರ ಭಜನಾ ಮಂಡಳಿ ಹೊಸ್ತೋಟ- ನೇರಗೋಡ, ಚೌಡೇಶ್ವರಿ ಭಜನಾ ಮಂಡಳಿ ಹಳ್ಳಿ ಬೈಲ್ ನಿರಂತರ ಐದು ಗಂಟೆಗಳ ಭಜನೆ ನಡೆಸಿದರು.

About the author

Adyot

Leave a Comment