ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಶಿರಳಗಿಯಲ್ಲಿ ರವೀಂದ್ರ ನಾಯ್ಕ ನೇತೃತ್ವದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯಿಂದ ಆಯೋಜಿಸಿದ್ದ ಲಕ್ಷ ವೃಕ್ಷ ಕಾರ್ಯಕ್ರಮವನ್ನು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ
ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಕಾಗೋಡು ತಿಮ್ಮಪ್ಪ ಮಾತನಾಡಿ,ಮಲೆನಾಡಿನ ಜನರ ಬದುಕು ಗಿಡಮರಗಳ ಜೊತೆಗೆ ಇರುತ್ತದೆ. ಇವು ನಮಗೆ ತಾಯ್ತನದ ಅನುಭವವನ್ನು ಕೊಡುತ್ತದೆ ನಾವು ಈಗಾಗಲೇ ಸಾಕಷ್ಟು ಮರಗಳನ್ನು ಕಡಿದಿದ್ದೆವೆ. ಈಗ ಕಾಡನ್ನು ಬೆಳೆಸಿ ಉಳಿಸುವ ಕೆಲಸ ಮಾಡಬೇಕು. ಅರಣ್ಯದ ಜೊತೆಗೆ ನಮ್ಮ ಬದುಕು ಸಾಗುತ್ತಿದೆ ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ.ಹಿಂದೆ ಭೂಮಿ ಹಕ್ಕಿಗಾಗಿ ಹೋರಾಡಿದ್ದೆವು ಇಂದು ಅರಣ್ಯ ಭೂಮಿಗಾಗಿ ನಾವು ಹೋರಾಟ ಮಾಡಬೇಕಾಗಿದೆ. ನಾನು ಈ ಹೋರಾಟದಲ್ಲಿ ನಿಮ್ಮ ಜೊತೆಗೆ ಸಕ್ರೀಯವಾಗಿರುತ್ತೆನೆ ಇಚ್ಚಾಶಕ್ತಿಯನ್ನು ಪ್ರದರ್ಶಿಸುವ ಮೂಲಕ ನಾವು ಹೋರಾಟವನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಅರಣ್ಯಭೂಮಿಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ,ಜಿಲ್ಲೆಯ ೧೦೧ ಗ್ರಾಪಂ ವ್ಯಾಪ್ತಿಯ ೪೦೦ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಇಂದು ಏಕಕಾಲದಲ್ಲಿ ಗಿಡನೆಡುವ ಕಾರ್ಯಕ್ರಮ ನಡೆಯುತ್ತಿದೆ ನಾವು ಕೇವಲ ಅರಣ್ಯ ಭೂಮಿಯ ಹಕ್ಕಿಗಾಗಿ ಮಾತ್ರ ಹೋರಾಟ ಮಾಡುತ್ತಿಲ್ಲ ಗಿಡನೆಡುವ ಮೂಲಕ ಅರಣ್ಯವನ್ನು ಉಳಿಸುವ ಹೋರಾಟವನ್ನು ಮಾಡುತ್ತಿದ್ದೆವೆ ಸಿದ್ದಾಪುರ ತಾಲೂಕಿನ ೨೪ ಗ್ರಾಪಂ ವ್ಯಾಪ್ತಿಯ ೪೭ ಹಳ್ಳಿಗಳಲ್ಲಿ ಗಿಡನೆಡಲಾಗುವುದು ಪ್ರತಿಯೊಬ್ಬರೂ ೧೦ ರಿಂದ ೫೦ ಗಿಡದವರೆಗೆ ನೆಡಬೇಕು
ಅಗಸ್ಟ್ ೧೪ ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು ಸುಮಾರು ೩ ಲಕ್ಷ ಗಿಡಗಳನ್ನು ನೆಡಲಾಗುವುದು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ,ಕಾಂಗ್ರೆಸ್ ಮುಖಂಡ ವಿ.ಎನ್.ನಾಯ್ಕ ಬೇಡ್ಕಣಿ, ಅಣ್ಣಪ್ಪ ನಾಯ್ಕ ಶಿರಳಗಿ ಮುಂತಾದವರು ಉಪಸ್ಥಿತರಿದ್ದರು.
ಪ್ರವಾಸಿಮಂದಿರದಲ್ಲಿ ಕಾಗೋಡು ತಿಮ್ಮಪ್ಪ ಸುದ್ದಿಗೋಷ್ಠಿ
ವಯಸ್ಸಿನ ಕಾರಣ ನೀಡಿ ರಾಜಕೀಯದಲ್ಲಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ವಯಸ್ಸಾದವರ ಮಾರ್ಗದರ್ಶನ ಇದ್ದರೆ ಮಾತ್ರ ಸರಕಾರ ಸರಿಯಾಗಿ ನಡೆಯಲು ಸಾಧ್ಯ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಹೇಳಿದರು.
ರಾಜಕೀಯದಲ್ಲಿ ಸಕ್ರಿಯವಾಗಿದ್ದು,ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡವರು ವಯಸ್ಸಾಗಿದ್ದರೂ ಹುದ್ದೆ ನೀಡಬೇಕು.ಆರ್.ವಿ.ದೇಶಪಾಂಡೆಯವರು ಸಕ್ರೀಯವಾಗಿದ್ದಾರೆ. ಚುನಾವಣೆಯಲ್ಲಿ ನಿರಂತರವಾಗಿ ಗೆಲ್ಲುತ್ತಿದ್ದಾರೆ ಅವರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಬಿ.ಕೆ.ಹರಿಪ್ರಸಾದರವರು ನೇರ ಚುನಾವಣೆಯಲ್ಲಿ ಬಂದವರಲ್ಲ ಆದರೆ ಪಕ್ಷದ ಹಿಂದಿನ ಶಕ್ತಿಯಾಗಿ ಕೆಲಸ ಮಾಡುವವರು.ಅವರು ಒಂದು ಕ್ಷೇತ್ರವನ್ನು ಗುರುತಿಸಿ ಅಲ್ಲಿ ಕಾರ್ಯನಿರ್ವಹಣೆ ಮಾಡಬೇಕು ಅದರಿಂದ ಅವರು ಸರಕಾರದಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ. ಎಂದು ಹೇಳಿದರು.
ಈಡಿಗ ಸಮಾಜವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ ಎಂಬ ಪ್ರತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಾಗೋಡು ತಿಮ್ಮಪ್ಪ, ಈಡಿಗರನ್ನು ನಿರ್ಲಕ್ಷಿಸಿದ್ದಾರೆ ಎನ್ನುವುದು ಸುಳ್ಳು ಸರಕಾರ ನಡೆಸುವಾಗ ಕೆಲವು ನಿರ್ಣಯಗಳು ಕೆಲವರಿಗೆ ತಪ್ಪಾಗಿ ಕಾಣುತ್ತದೆ. ನಾವು ನಮ್ಮ ಜಾತಿಯ ಕಾರಣದಿಂದ ಮೇಲೆ ಬರಲು ಪ್ರಯತ್ನಿಸಬಾರದು ನಮ್ಮ ಸ್ವಪ್ರಯತ್ನದಿಂದ ಮೇಲೆ ಬರಬೇಕು.ಅರಣ್ಯ ಪ್ರದೇಶ ಇರುವುದು ಕೆಲವೇ ಕಡೆಯಲ್ಲಿ ಹೀಗಾಗಿ ಸಮಸ್ಯೆ ಸೀಮಿತ ವಾಗಿಬಿಡುತ್ತದೆ ಮಲೆನಾಡಿನ ಸಮಸ್ಯೆ ಬಯಲು ಸೀಮೆಯವರಿಗೆ ತಿಳಿಯುವುದಿಲ್ಲ ಆದ್ದರಿಂದ ಅರಣ್ಯ ಹಕ್ಕಿಗಾಗಿ ಹೋರಾಟ ಮಾಡುವಾಗ ಎಲ್ಲರ ಬೆಂಬಲ ಸಿಗುವುದಿಲ್ಲ.ಭೂಮಿ ಹಕ್ಕಿಗಾಗಿ ೧೯೫೧ ರಿಂದ ಹೋರಾಟ ಮಾಡಿದ್ದೆವು ಅದು ಈಡೇರಿದ್ದು ೧೯೭೨ರಲ್ಲಿ ಆದ್ದರಿಂದ ಅರಣ್ಯ ಹಕ್ಕು ಹೋರಾಟಗಾರರು ನಿರಾಶೆ ಹೊಂದಬಾರದು ಇಚ್ಛಾಶಕ್ತಿಯಿಂದ ಹೋರಾಟ ಮಾಡಿದರೆ ಗೆಲುವು ಸಾಧ್ಯವಾಗುತ್ತದೆ ನಮ್ಮ ಓಟನ್ನು ದುಡ್ಡಿಗಾಗಿ ನಾವು ಮಾರಬಾರದು ಇದರಿಂದ ನಮ್ಮ ಹಕ್ಕನ್ನು ಸರಕಾರದಿಂದ ಕೇಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಅರಣ್ಯಹಕ್ಕು ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಉಪಸ್ಥಿತರಿದ್ದರು.