ಸಿದ್ದಾಪುರ : ತಾಲೂಕಿನಾದ್ಯಂತ, ಮಟ್ಕಾ, ಇಸ್ಪೀಟ್ ಹಾಗೂ ಅಕ್ರಮ ಸಾರಾಯಿ ಮಾರಾಟ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಸತೀಶ ಹೆಗಡೆ ಬೈಲಳ್ಳಿ ಎಚ್ಚರಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಹಾಲಿ ಶಾಸಕರು, ನಾನು ಚುನಾಯಿತನಾದರೆ ಅಕ್ರಮ ಸಾರಾಯಿ ಮಾರಾಟ ಸೇರಿದಂತೆ ಎಲ್ಲಾ ಅಕ್ರಮ ಚಟುವಟಿಕೆಯನ್ನೂ ನಿಲ್ಲಿಸುತ್ತೇನೆ ಎಂದು ಮತದಾರರಿಗೆ ಭರವಸೆ ನೀಡಿದ್ದರು. ಆದರೆ ಈಗ ಅಕ್ರಮ ನಡೆಯುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದ್ದು, ಶಾಸಕರ ಬೆಂಬಲ ಈ ಅಕ್ರಮ ಚಟುವಟಿಕೆದಾರರಿಗೆ ಇದೆ ಎಂದು ಕಾಣುತ್ತಿದೆ. ಅಭಿವೃದ್ಧಿ ಚಟುವಟಿಕೆಗಳು ನಿಂತು ಹೋಗಿದ್ದು, ಪ್ರಮುಖ ಇಲಾಖೆಯ ವರ್ಗಾವಣೆ ದಂದೆ ಎಗ್ಗಿಲ್ಲದೆ ನಡೆಯುತ್ತಿದೆ. ಒಂದು ತಿಂಗಳ ಒಳಗೆ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಿ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸದಿದ್ದರೆ ಶಾಸಕರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸತೀಶ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.