######
ಅವರು ಸಂಗೀತ ಕ್ಷೇತ್ರದಲ್ಲಿ ಗಾಯಕರಾಗಿ, ಸಂಗೀತ ಶಿಕ್ಷಕರಾಗಿ, ಹಾರ್ಮೋನಿಯಂ ವಾದಕರಾಗಿ ಹೆಸರು ಪಡೆದವರು. ಆದರೆ ಈ ಕ್ಷೇತ್ರಕ್ಕಷ್ಟೇ ಅವರು ಸೀಮಿತವಾಗಿರಲಿಲ್ಲ. ಅವರೊಬ್ಬ ಉತ್ತಮ ಛಾಯಾಚಿತ್ರ ಗ್ರಾಹಕರಾಗಿದ್ದರು, ವಾಚ್‌ಮೇಕರ್ ಆಗಿದ್ದರು, ಖಾಸಗಿ ಬಸ್ಸಿನ ಏಜೆಂಟರಾಗಿದ್ದರು, ಕುಸ್ತಿ ಪೈಲ್ವಾನ್ ಆಗಿ ಬಂಗಾರದ ಕಡಗ ತಮ್ಮದಾಗಿಸಿಕೊಂಡಿದ್ದರು. ಚಿತ್ರ ಬಿಡಿಸುವುದರಲ್ಲಿಯೂ ಪರಿಣತಿ ಹೊಂದಿದ್ದರು. ಆದರೆ ಇವೆಲ್ಲವೂ ಆಗುವುದಕ್ಕಿಂತ ಮುಂಚಿತವಾಗಿ ಅವರೊಬ್ಬ ಸ್ವಾತಂತ್ರ್ಯ ಯೋಧರಾಗಿ ಸೆರೆವಾಸ ಅನುಭವಿಸಿದ್ದರು. ಅವರೇ ಸಿದ್ದಾಪುರ ಸದಾ ಸ್ಮರಿಸುವ ಹೆಮ್ಮೆಯ ವ್ಯಕ್ತಿ ದಿ.ವಾಮನರಾವ್ ಬೆಟಗೇರಿ.
ವಾಮನರಾಯರ ತಂದೆ ತಿಪ್ಪಯ್ಯ ಮಾಸ್ತರರು ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ತಮ್ಮ ಸಾಹಿತ್ಯ, ಲಾವಣಿಯ ಮೂಲಕ ಜನಜಾಗೃತಿ ಮೂಡಿಸಿದವರು. ವಯೋಮಾನದಿಂದಾಗಿ ಅಂಧತ್ವ ಆವರಿಸಿದಾಗಲೂ ಹಳ್ಳಿಹಳ್ಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಹರಿಕಥೆಯ ಮೂಲಕ ಜನರನ್ನು ದೇಶಕ್ಕಾಗಿ ಹೋರಾಡುವಂತೆ ಹುರಿದುಂಬಿಸಿ ಹೋರಾಟಗಾರರಲ್ಲಿ ಕೆಚ್ಚು ಹೆಚ್ಚಿಸಿದವರು.
ಒಂದು ದೃಷ್ಟಿಯಲ್ಲಿ ತಿಪ್ಪಯ್ಯ ಮಾಸ್ತರರ ಕುಟುಂಬವೇ ದೇಶಭಕ್ತರ ಕುಟುಂಬ. ತಂದೆ ತಿಪ್ಪಯ್ಯ ಮಾಸ್ತರರಿಂದ ಪ್ರೇರೇಪಿತರಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರತ್ಯಕ್ಷವಾಗಿ, ಅಪ್ರತ್ಯಕ್ಷವಾಗಿ ತೊಡಗಿಕೊಂಡವರು ತಿಪ್ಪಯ್ಯ ಮಾಸ್ತರರ ಮಕ್ಕಳಾದ ನಾಗೇಶ ಬೆಟಗೇರಿ ಹಾಗೂ ವಾಮನರಾವ್ ಬೆಟಗೇರಿ. ಮಾಸ್ತರರ ಮಗಳು ಭವಾನಿಬಾಯಿ ಕಾನಗೋಡ, ಮೊಮ್ಮಗ ಪದ್ಮಾಕರ ಕಾನಗೋಡ ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದ್ದಲ್ಲದೇ ಸ್ವಾತಂತ್ರ್ಯ ಪಡೆದ ನಂತರ ರಜತಮಹೋತ್ಸವದಲ್ಲಿ ಕೇಂದ್ರಸರಕಾರದಿಂದ ತಾಮ್ರಪತ್ರವನ್ನು ಪಡೆದ ಹಿರಿಮೆ ಹೊಂದಿದ್ದಾರೆ.
ವಾಮನರಾವ್ ಬೆಟಗೇರಿ ಅವರು ತಮ್ಮ ಹರೆಯದ ಹದಿನೆಂಟರಲ್ಲಿಯೇ ತಂದೆಯವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂದು ತಮ್ಮ ಸರೀಕರಾಗಿದ್ದ ಶ್ರೀನಿವಾಸ ಬಿಳಗಿಯವರು, ದುರ್ಗಪ್ಪ ಶಾಮೈನ್ ಮುಂತಾದವರೊಂದಿಗೆ ಇವರು ಚಳವಳಿಯಲ್ಲಿ ತೊಡಗಿಕೊಂಡಿದ್ದಾಗ ಪೊಲೀಸರ ಲಾಠಿ ಏಟು ಅನುಭವಿಸಿದ್ದರು.
ಸಾಲದ್ದಕ್ಕೆ ಒಮ್ಮೆ ಪೊಲೀಸರು ಇವರ ಕಾಲಿಗೆ ಬಂದೂಕಿನ ಅಟ್ಟೆಯಿಂದ ಬಲವಾಗಿ ಏಟು ಹಾಕಿದಾಗ ವಿಪರೀತ ಹೊಡೆತ ತಗುಲಿ ತಿಂಗಳಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ತಮ್ಮ ಹದಿನೆಂಟರಿಂದ ಇಪ್ಪತ್ತು ವರ್ಷಗಳ ಪ್ರಾಯದಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರಿಂದ ಮೂರು ಸಲ ಬಂಧನಕ್ಕೊಳಗಾಗಿದ್ದ ವಾಮನರಾಯರು ಬೆಳಗಾಂವನ ಹಿಂಡಲಗಾ ಜೈಲಿನಲ್ಲಿ ಶಿಕ್ಷೆಯನ್ನೂ ಅನುಭವಿಸಿದ್ದರು. ಚಿಕ್ಕ ವಯಸ್ಸು ಹಾಗೂ ಸನ್ನಡತೆಯ ಕಾರಣದಿಂದಾಗಿ ಜೈಲಿನಿಂದ ಬೇಗ ಬಿಡುಗಡೆಯನ್ನೂ ಹೊಂದುತ್ತಿದ್ದರು. ದೇಶಕ್ಕಾಗಿ ಇವರು ಹೋರಾಟ ಮಾಡಿದ್ದರೂ ಇತಿಹಾಸದ ಪುಟಗಳಲ್ಲಿ ಇವರ ಹೆಸರು ಅಗತ್ಯತೆಗೆ ತಕ್ಕುದಾಗಿ ದಾಖಲಾಗಿಲ್ಲ. ಏಕೆಂದರೆ ಇತಿಹಾಸ ಬರೆಯಲು ಆಗಮಿಸಿದವರನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡಿಲ್ಲ.
ಸ್ವಾತಂತ್ರ್ಯದ ನಂತರ ಕೇಂದ್ರ, ರಾಜ್ಯದಿಂದ ಸ್ವಾತಂತ್ರ್ಯ ಯೋಧರಾದವರಿಗೆ ನೀಡುತ್ತಿದ್ದ ಪಿಂಚಣಿಯನ್ನು ಸಹ ಇವರು ಸ್ವೀಕರಿಸಲಿಲ್ಲ. ಮನೆಯಲ್ಲಿನ ತೊಂದರೆ, ತೊಡಕಿನ ಸಂದರ್ಭದಲ್ಲಿ ತಮ್ಮ ಪತ್ನಿ “ನೀವೂ ಸಹ ಪಿಂಚಣಿ ಪಡೆದರೆ ಕುಟುಂಬ ನಡೆಸಲು ಸಹಾಯವಾಗುತ್ತಿತ್ತು” ಎಂದರೆ “ನಾನು ಕುಟುಂಬದ ಹಿರಿಯರಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇನೆಯೇ ವಿನ: ಯಾವುದೇ ಹಣದ ಆಸೆಗಾಗಿ, ಪ್ರಚಾರ, ಹುದ್ದೆಗಾಗಿ ಹೋರಾಡಿದವನಲ್ಲ. ಸರಕಾರ ನೀಡುವ ಹಣ ನನಗೆ ಬೇಕಾಗಿಲ್ಲ” ಎಂದು ನಯವಾಗಿಯೇ ಪಿಂಚಣಿಯನ್ನು ತೊರೆದ ದೇಶಭಕ್ತ ವಾಮನರಾಯರು.
ನಾಗರಾಜ ಭಟ್ಟ ಕೆಕ್ಕಾರ
######