ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಹೊನ್ನೆಘಟಕಿಯಲ್ಲಿ ಸ್ವಾತಂತ್ರ್ಯ ಯೋಧರ ಸಂಸ್ಮರಣೆ ಹಾಗೂ ಹೋರಾಟ ಕಥನಾ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಸ್ವಾತಂತ್ರ್ಯಹೋರಾಟಕಥನ ಪುಸ್ತಕ ಲೋಕಾರ್ಪಣೆಗೊಳಿಸಿದ
ಉಸ್ತುವಾರಿ ಸಚೀವ ಮಂಕಾಳ ವೈದ್ಯ ಮಾತನಾಡಿ,ಸ್ವಾತಂತ್ರ್ಯ
ಸಂಗ್ರಾಮದ ಚರಿತ್ರೆಯನ್ನು ಓದಿದರೆ ಅಂದಿನವರ ಕೆಚ್ಚೆದೆಯ ಹೋರಾಟದ ಅರಿವು ಮೂಡುತ್ತದೆ. ಅಂದು ಹೋರಾಟದಲ್ಲಿ ತೊಡಗಿ ತ್ಯಾಗ ಬಲಿದಾನ ಮಾಡಿ ದೇಶವನ್ನು ಪರದಾಸ್ಯದಿಂದ ಮುಕ್ತಗೊಳಿಸಿದ ಹಿರಿಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ
ನಮ್ಮ ಹಿರಿಯರು ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಿಕೊಂಡುಹೋಗಬೇಕಾದ್ದು ನಮ್ಮೇಲ್ಲರ ಕರ್ತವ್ಯವಾಗಿದೆ. ಹೊನ್ನೆಘಟಕಿ ಶಾಲೆಯವರು ನೀಡಿದ ಅಕ್ಷರ ದಾಸೋಹ ಅಗತ್ಯತೆಯನ್ನು ಈಡೇರಿಸಲಾಗುತ್ತದೆ. ಶಿಕ್ಷಣಕ್ಕೆ ಯಾವುದೆ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಜಾತಿ, ಮತದ ಭೇದವಿಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಸ್ವಾತಂತ್ರ್ಯ ಪಡೆಯುವಲ್ಲಿ ಮಹತ್ತರ ಕೊಡುಗೆ ನೀಡಿದವರಲ್ಲಿ ಸಿದ್ದಾಪುರ ತಾಲೂಕಿನ ಹೋರಾಟಗಾರರು ಮುಂಚೂಣಿಯಲ್ಲಿದ್ದಾರೆ. ಅವರ ತ್ಯಾಗ ಬಲಿದಾನವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ. ಅಂದಿನವರ ಹೋರಾಟದ ನೆನಪನ್ನು ಹಸಿರಾಗಿಡಬೇಕು ಎಂದರು.
ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ತಾಲೂಕಿನಲ್ಲಿ ಮುಂಚೂಣಿಯಲ್ಲಿ ನಿಂತು ಸ್ವಾತಂತ್ರ್ಯ ಹೋರಾಟಕ್ಕೆ ಹೆಚ್ಚಿನ ಬಲ ನೀಡಿದ ಸರ್ದಾರ ವೆಂಕಟರಾಮಯ್ಯ ಹಾಗೂ ಗೌರಮ್ಮನಂತವರು ಪ್ರಾತ:ಸ್ಮರಣೀಯರು. ಅದೇ ರೀತಿ ತಾಲೂಕಿನಲ್ಲಿ ೯೭೫ ಸ್ವಾತಂತ್ರ್ಯ ಯೋಧರ ಹೆಸರು ದಾಖಲಾಗಿದ್ದರೂ ನೈಜವಾಗಿ ಮೂರು ಸಾವಿರಕ್ಕೂ ಹೆಚ್ಚು ಜನತೆ ದೇಶಕ್ಕಾಗಿ ಹೋರಾಟ ನಡೆಸಿದ್ದಾರೆ ಎಂದರು.
ಅತಿಥಿಗಳಾಗಿದ್ದ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ನಾವು ರಾಮನಂತಹ ಪೌರಾಣಿಕ ನಾಯಕರನ್ನು ಮಾತ್ರ ಮಕ್ಕಳ ತಲೆಯಲ್ಲಿ ತುಂಬುತ್ತಿದ್ದೇವೆ. ಬದಲಿಗೆ ಇತಿಹಾಸ ಸೃಷ್ಟಿಸಿದವರ ಹೆಸರನ್ನು ತುಂಬುವ ಕೆಲಸ ಮಾಡಬೇಕು. ಆಯಾ ತಾಲೂಕಿನ ಬೆಳೆ ಹಾಗೂ ಆ ಭಾಗದ ಶ್ರೇಷ್ಠತೆಯನ್ನು ಸರಕಾರ ದಾಖಲಿಸುವಂತಾಗಬೇಕು ಎಂದರು.
ಸಿದ್ದಾಪುರ ಶಂಕರ ಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ ಮಾತನಾಡಿ ಶತಮಾನಗಳ ಹಿಂದಿನ ಹೋರಾಟದ ಕಠಿಣ ಪರಿಸ್ಥಿತಿಯನ್ನು ಊಹಿಸಲಾಗದು. ಇಂದಿನ ತಲೆಮಾರಿಗೆ ಹಿಂದಿನವರ ತ್ಯಾಗದ ಪರಿಚಯ ಮಾಡಬೇಕು ಎಂದರು.
ಶಿರಸಿಯ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿದರು. ಇಟಗಿ ಪಂಚಾಯತ ಉಪಾಧ್ಯಕ್ಷ ರಾಮಚಂದ್ರ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾತಂತ್ರö್ಯ ಯೋಧ ದಿ. ದೇವಾ ಮೂಕಾ ಗೌಡ ಮರಲಿಗೆ ಅವರ ಪತ್ನಿ ಗಂಗೂಬಾಯಿ ದೇವಾ ಗೌಡ ಮತ್ತು ಕೆಳಗಿನಮನೆ ದೇವಿ ಹಸ್ಲರ್ ಅವರ ಕುಟುಂಬದವರಾದ ಈರಾ ಫಕೀರ ಹಸ್ಲರ್, ಬಲೀಂದ್ರ ಫಕೀರ ಹಸ್ಲರ್, ತಾಲೂಕಿನ ಸ್ವಾತಂತ್ಯ ಯೋಧರ ಕುರಿತು ಲೇಖನಗಳನ್ನು ಬರೆದ ತಾಲೂಕಿನ ಲೇಖಕರಾದ ಕೆಕ್ಕಾರ ನಾಗರಾಜ ಭಟ್ಟ ಹಾಗೂ ಶ್ರೀಪಾದ ಹೆಗಡೆ ಮಗೇಗಾರು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರರ ಸಂಸ್ಮರಣಾ ಸಮಿತಿ ಅಧ್ಯಕ್ಷ ಜೆ.ಪಿ.ಎನ್ ಹೆಗಡೆ ಹರಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಗೌರವ ಕಾರ್ಯದರ್ಶಿ ಮಹಾಬಲೇಶ್ವರ ಭಟ್ಟ ಇಟಗಿ ಹಾಗೂ ಇನ್ನುಳಿದ ಸದಸ್ಯರುಗಳು ಸಹಕರಿಸಿದರು. ಮತ್ತೋರ್ವ ಗೌರವ ಕಾರ್ಯದರ್ಶಿ ನಾರಾಯಣಮೂರ್ತಿ ಸೀತಾರಾಮ ಹೆಗಡೆ ವಂದಿಸಿದರು.