ಸಾಮಾಜಿಕ ಜಾಲತಾಣದಲ್ಲಿ ಕನ್ನಡತಾಯಿ ಭುವನೇಶ್ವರಿಗೆ ಅವಹೇಳನ ಬರಹ, ಇಬ್ಬರ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲು

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಸಿದ್ದಾಪುರ ಭುವನಗಿರಿಯಲ್ಲಿರುವ ಕನ್ನಡತಾಯಿ ಭುವನೇಶ್ವರಿ ದೇವಿಗೆ ಸಾಮಾಜಿಕ ಜಾಲತಾಣದಲ್ಲಿಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಕನ್ನಡ ಸಂಘರ್ಷ ಸಮಿತಿಯ ಕೋಡಿಹೊಸಹಳ್ಳಿ ರಾಮಣ್ಣ ಹಾಗೂ ಎ.ಎಸ್.ನಾಗರಾಜಸ್ವಾಮಿಯ ವಿರುದ್ಧ ಅಪರಾಧಿಕ ಪ್ರಕರಣ ದಾಖಲಿಸಿದ್ದು ಡಿ.೭ರಂದು ಸಿದ್ದಾಪುರ ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಜಾರಿ ಮಾಡಲಾಗಿದೆ.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಸ್ಥಾಪಿತವಾಗಿರುವ ಕನ್ನಡ ತಾಯಿ ಭುವನೇಶ್ವರಿಯ ಪ್ರತಿಮೆಯನ್ನು ವಿರೋಧಿಸಿ ಕನ್ನಡ ಸಂಘರ್ಷ ಸಮಿತಿಯ ಸಲಹೆಗಾರ ಕೋಡಿಹೊಸಹಳ್ಳಿ ರಾಮಣ್ಣ ಒಂದು ಮತಧರ್ಮಕ್ಕೆ ಸೇರಿದ ಸ್ವರೂಪದ ಪ್ರತಿಮೆ ಸ್ಥಾಪಿಸುವುದು ಸರಿಯಲ್ಲ, ಭುವನೇಶ್ವರಿ ದೇವಿಯ ಪುತ್ಥಳಿಯನ್ನು ಸ್ಥಾಪನೆ ಮಾಡಿ ಹಿಂದುತ್ವದ ತೆಕ್ಕೆಗೆ ಒಳಪಡಿಸುವುದು ಸರಿಯಲ್ಲ. ವಿಗ್ರಹ ವೈದಿಕ ಪರಂಪರೆಯ ಪ್ರತಿರೂಪ, ಭುವನೇಶ್ವರಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಒಂದು ಧರ್ಮಕ್ಕೆ ಸೀಮಿತ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದು ಸಹನೀಯವಲ್ಲ, ಕನ್ನಡ ಸಾಹಿತ್ಯ ಪರಿಷತ್ತು ಹಿಂದುತ್ವದ ನಿಲುವು ಹೊಂದಿ ಭುವನೇಶ್ವರಿ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದೆ. ಹಿಂದುತ್ವದ ನಿಲುವಿನ ವಿರುದ್ಧ ಹೋರಾಟಕ್ಕೆ ದಾರಿ ಮಾಡಿ ಕೊಟ್ಟಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಿಂದು, ಮುಸ್ಲಿಂ, ಜೈನ, ಬುದ್ಧ ಎಲ್ಲಾ ಜಾತಿ ಧರ್ಮದವರೂ ಇದ್ದು ಭುವನೇಶ್ವರಿ ಸಾಮ್ರಾಜ್ಯದ ಸಂಕೇತ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ಪತ್ರಕರ್ತರು,ಭುವನಗಿರಿಯ ಮಾತೃವಂದನಾ ಸಮಿತಿಯ ಅಧ್ಯಕ್ಷರೂ ಆಗಿರುವ ನಾಗರಾಜ ಭಟ್ಟ್ ಕೆಕ್ಕಾರು ಸಿದ್ದಾಪುರ ನ್ಯಾಯಾಲಯದಲ್ಲಿ ೨೦೨೩ರ ಜುಲೈ ೪ರಂದು ಪಿ.ಸಿ.ಆರ್ ೫೪/೨೦೨೩ರ ಸಂಖ್ಯೆಯಂತೆ ಅಪರಾಧಿಕ ದಾವೆಯನ್ನು ಹೂಡಿದ್ದಾರೆ.

ಕನ್ನಡ ತಾಯಿ ಭುವನೇಶ್ವರಿಯ ಪರಿಕಲ್ಪನೆ ಮತ್ತು ಕನ್ನಡ ನಾಡಿನ ನಡುವೆ ಸುಧೀರ್ಘವಾದ ಬಾಂಧವ್ಯವಿದೆ. ಭುವನೇಶ್ವರಿಯ ಪರಿಕಲ್ಪನೆ ರೂಪುಗೊಂಡಿದ್ದೇ “ಕನ್ನಡಿಗರ ಸ್ವಾಭಿಮಾನದ ಪ್ರತೀಕ”ವಾಗಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಕದಂಬರು, ಬದಾಮಿ ಚಾಲುಕ್ಯರು, ವಿಜಯನಗರದ ಅರಸರು, ಮೈಸೂರು ಒಡೆಯರ್ ಎಲ್ಲರೂ ತಾಯಿ ಭುವನೇಶ್ವರಿಯನ್ನು ಆರಾಧಿಸುತ್ತಾ ಬಂದಿದ್ದು, ಕನ್ನಡದ ಕುಲಪುರೋಹಿತರು ಎನ್ನಿಸಿಕೊಂಡಿರುವ ಆಲೂರು ವೆಂಕಟರಾಯರು ತಮ್ಮ `ಕರ್ನಾಟಕ ಗತ ವೈಭವ’ ಕೃತಿಯಲ್ಲಿ `ಭುವನೇಶ್ವರಿ ಕನ್ನಡಿಗರ ತಾಯಿ’ ಎನ್ನುವ ಪರಿಕಲ್ಪನೆ ನೀಡಿದ್ದರು. ಅದಕ್ಕೆ ಆಚಾರ್ಯ ಬಿ.ಎಂ.ಶ್ರೀ, ಮಹಾಕವಿಗಳಾದ ಕುವೆಂಪು ಮತ್ತು ದ.ರಾ.ಬೇಂದ್ರೆ ತಮ್ಮ ಸಮ್ಮತಿ ನೀಡಿದರು. ಭುವನೇಶ್ವರಿಯ ಪರಿಕಲ್ಪನೆ ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಕನ್ನಡಿಗರನ್ನು ಒಂದುಗೂಡಿಸಿತು. ಅಲ್ಲಿಂದ ಮುಂದೆ ಕನ್ನಡಪರ ಹೋರಾಟಗಳಲ್ಲೆಲ್ಲಾ ಭುವನೇಶ್ವರಿಯನ್ನು ಕನ್ನಡದ ಕುಲದೇವತೆಯನ್ನಾಗಿ ನೋಡಿದ್ದನ್ನು ಕಾಣಬಹುದು. ಸುಧೀರ್ಘ ಇತಿಹಾಸವನ್ನು ಹೊಂದಿರುವ ತಾಯಿ ಭುವನೇಶ್ವರಿಯ ಕನ್ನಡ ಚರಿತ್ರೆಯಲ್ಲಿ ಎಲ್ಲಿಯೂ ಮತೀಯ ನೆಲೆಗಟ್ಟು ಇರುವುದು ಕಾಣುವುದಿಲ್ಲ ಎಂದು ನ್ಯಾಯಾಲಯದಲ್ಲಿ ವಾದಮಂಡಿಸಿದ್ದರು. ಹಿರಿಯ ವಕೀಲ ಡಾ.ರವಿ ಹೆಗಡೆ ಹೂವಿನಮನೆ ದಾವೆ ನಡೆಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಬಹು ಸಂಖ್ಯಾತ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ ೧೭-೧೧-೨೦೨೨ ರಂದು ತನ್ನ ಆವರಣದಲ್ಲಿ ಭುವನೇಶ್ವರಿ ದೇವಿಯ ಪುತ್ಥಳಿಯನ್ನು ಕನ್ನಡಿಗರೆಲ್ಲರ ಅಸ್ಮಿತೆಯ ಬಿಂಬವಾಗಿ ಸ್ಥಾಪಿಸಿತು. ಕರ್ನಾಟಕದಲ್ಲಿ ರೂಪುಗೊಂಡ ಮೊದಲ ಪುತ್ಥಳಿಯಾದ ಇದರ ಅನಾವರಣವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಮಾಡುವ ಸಂದರ್ಭದಲ್ಲಿ, ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು, ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶಿವರಾಜ ಪಾಟೀಲರು, ಸುತ್ತೂರು ಶ್ರೀಗಳಾದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಬರಹಗಾರ್ತಿ ಸಂಧ್ಯಾ ಪೈ, ಕನ್ನಡದ ಮೊದಲ ನಿಘಂಟುಕಾರ ರೆವರೆಂಡ್ ಫರ್ಡಿನೆಂಡ್ ಕಿಟ್ಟಲ್ ಅವರ ಮರಿ ಮೊಮ್ಮಗಳುಆಲ್ಮತ್ ಕಿಟ್ಟಲ್ ಸೇರಿದಂತೆ ಹಲವಾರು ಗಣ್ಯರು ಭಾಗಿಗಳಾಗಿದ್ದರು.

About the author

Adyot

Leave a Comment